ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರಗಾಲ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿರುವಾಗಲೇ, ನಟ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಚಿತ್ರಮಂದಿರಗಳಿಂದ ಹೌಸ್‌ಫುಲ್ ಬೋರ್ಡ್ ಕೆಳಗಿಳಿಯುತ್ತಿಲ್ಲ.
17 ದಿನಗಳಲ್ಲಿ 50 ಕೋಟಿ ಗಳಿಕೆ
ಸಿಂಗಲ್ ಸ್ಕ್ರೀನ್ ಮಾತ್ರವಲ್ಲದೆ ಮಲ್ಟಿಪ್ಲೆಕ್ಸ್‌ಗಳಲ್ಲೂ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದು, ಆನ್‌ಲೈನ್ ಬುಕಿಂಗ್‌ನಲ್ಲೇ ಪ್ರತಿ ದಿನ ಸರಾಸರಿ 2 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಸದ್ಯ ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಬರೋಬ್ಬರಿ 50 ಕೋಟಿ ಗಳಿಕೆ ಮಾಡುವ ಮೂಲಕ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. 2026ರಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ‘ಟಾಕ್ಸಿಕ್’ ನಂತರ ಈ ಮೈಲಿಗಲ್ಲು ತಲುಪಿದ ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಮೂರೇ ದಿನಕ್ಕೆ 20 ಕೋಟಿ ರೂ. ಗಳಿಕೆ
ಈ ಚಿತ್ರದ ಗಳಿಕೆಯ ಗ್ರಾಫ್ ಬಾಕ್ಸ್ ಆಫೀಸ್ ಪಂಡಿತರನ್ನೇ ಹುಬ್ಬೇರಿಸುವಂತೆ ಮಾಡಿದೆ. ಮೊದಲ ದಿನ ಕೇವಲ 13 ಲಕ್ಷ ರೂಪಾಯಿ ಗಳಿಕೆಯೊಂದಿಗೆ ಸಾಧಾರಣ ಆರಂಭ ಪಡೆದಿದ್ದ ಈ ಚಿತ್ರ, ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದ ದಿನದಿಂದ ದಿನಕ್ಕೆ ಗರಿಗೆದರಿತು. ಮೊದಲ ವಾರದಲ್ಲಿ 6 ಕೋಟಿಗೂ ಹೆಚ್ಚು ಗಳಿಕೆ ಕಂಡಿದ್ದ ಸಿನಿಮಾ, ಎರಡನೇ ವಾರದಲ್ಲಿ ಭರ್ತಿ 24 ಕೋಟಿ ರೂ. ಬಾಚಿಕೊಂಡಿತು. ಇನ್ನು ಕಳೆದ ಮೂರು ದಿನಗಳಲ್ಲಂತೂ ಚಿತ್ರದ ಕಲೆಕ್ಷನ್ ಮತ್ತಷ್ಟು ಬಿರುಸುಗೊಂಡಿದ್ದು, ಶನಿವಾರ ಒಂದೇ ದಿನ 6.75 ಕೋಟಿ ಹಾಗೂ 17ನೇ ದಿನ ದಾಖಲೆಯ 8 ಕೋಟಿ ಗಳಿಸಿದೆ. ಹೀಗೆ ಕಳೆದ ಮೂರೇ ದಿನಗಳಲ್ಲಿ 20 ಕೋಟಿ ಬಾಚಿಕೊಂಡು ಅಬ್ಬರಿಸಿರುವ ಈ ಚಿತ್ರಕ್ಕೆ ಸದ್ಯ ರಾಜ್ಯಾದ್ಯಂತ ಬರೋಬ್ಬರಿ 1,300ಕ್ಕೂ ಅಧಿಕ ಪ್ರದರ್ಶನಗಳು ಸಿಗುತ್ತಿವೆ.
ಶೀಘ್ರದಲ್ಲೇ ಟಾಕ್ಸಿಕ್ ದಾಖಲೆ ಉಡೀಸ್
ಇನ್ನು ಇದೇ ವರ್ಷ ತೆರೆಕಂಡಿದ್ದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾವು ಕರ್ನಾಟಕದಲ್ಲಿ ಅಂದಾಜು 60 ರಿಂದ 70 ಕೋಟಿ ರೂಪಾಯಿ ಗಳಿಕೆ ಕಂಡಿರುವ ಮಾಹಿತಿ ಇದೆ. ಪ್ರಸ್ತುತ ‘ಪ್ರೇಮದ ಊರಲಿ’ ಸಿನಿಮಾ ಮುನ್ನುಗ್ಗುತ್ತಿರುವ ವೇಗವನ್ನು ಗಮನಿಸಿದರೆ, ಇನ್ನೊಂದು ವಾರದಲ್ಲಿ ‘ಟಾಕ್ಸಿಕ್’ ದಾಖಲೆಯನ್ನು ಪುಡಿಪುಡಿ ಮಾಡಿ 2026ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
Premada Oorali movie: ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ; ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ
ಜೊತೆಗೆ, ಬಹುನಿರೀಕ್ಷಿತ ಪರಭಾಷಾ ಚಿತ್ರ ‘ಜೈಲರ್ 2’ ಬರುವವರೆಗೂ ಈ ಚಿತ್ರಕ್ಕೆ ಯಾವುದೇ ದೊಡ್ಡ ಪೈಪೋಟಿ ಇಲ್ಲ. ಇತ್ತ ಕನ್ನಡದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾದ ಬಿಡುಗಡೆಯೂ ಮುಂದೂಡಲ್ಪಟ್ಟಿರುವುದರಿಂದ ‘ಪ್ರೇಮದ ಊರಲಿ’ ಚಿತ್ರದ ವಿಜಯಯಾತ್ರೆಗೆ ಹಾದಿ ಮತ್ತಷ್ಟು ಸುಗಮವಾಗಿದ್ದು, ಕಲೆಕ್ಷನ್‌ನಲ್ಲಿ ಭಾರೀ ಏರಿಕೆ ಕಾಣುವುದು ಖಚಿತವಾಗಿದೆ.
ರಂಗಾಯಣ ರಘು ಅಭಿನಯಕ್ಕೆ ಮನಸೋತ ಪ್ರೇಕ್ಷಕರು
ಮನೋಜ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಅವರ ಜೊತೆಗೆ ರಮಿಕಾ ಶಿವು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಸೇರಿದಂತೆ ಪ್ರಮುಖ ತಾರಾಗಣ ತಮ್ಮ ಸಹಜ ಅಭಿನಯದ ಮೂಲಕ ಚಿತ್ರದ ಯಶಸ್ಸಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಒಟ್ಟಿನಲ್ಲಿ, ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ‘ಪ್ರೇಮದ ಊರಲಿ’ ಚಿತ್ರ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಸುನಾಮಿ ಮುಂದುವರಿದಿದೆ.