ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್ ಅಭಿನಯದ ʻಧುರಂಧರ್ 2ʼ ಸಿನಿಮಾವು ಸಖತ್ ಆಗಿ ಓಪನಿಂಗ್ ತೆಗೆದುಕೊಂಡಿದೆ. ಪೇಯ್ಡ್ ಪ್ರೀಮಿಯರ್‌ಗಳಿಂದ ದಾಖಲೆ ಗಳಿಕೆ ಮಾಡಿರುವ ಈ ಸಿನಿಮಾದ ಮುಂದಿನ ಎರಡ್ಮೂರು ದಿನಗಳ ಟಿಕೆಟ್
ಸೋಲ್ಡ್ ಔಟ್ ಆಗಿವೆ. ಅಷ್ಟೊಂದು ಬೇಡಿಕೆ ಇರುವ ಈ ಚಿತ್ರದ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದೇನಪ್ಪ ಅಂದರೆ, ಕೆಲವೇ ತಿಂಗಳಲ್ಲಿ ʻಧುರಂಧರ್ ಪಾರ್ಟ್ 3ʼ ರಿಲೀಸ್ ಆಗಲಿದೆ ಎಂಬುದು.
ಹೌದು, ಈ ಸಿನಿಮಾದ ಬಿಡುಗಡೆಗೆ ಕೆಲವು ದಿನಗಳ ಮೊದಲೇ ರೆಡ್ಡಿಟ್‌ನಲ್ಲಿ (Reddit) ಒಂದು ಪೋಸ್ಟ್ ವೈರಲ್ ಆಗಿತ್ತು. ಅದರಲ್ಲಿ 'ಧುರಂಧರ್' ಚಿತ್ರದ ಮೂರನೇ ಭಾಗ ಬರಲಿದೆ ಎಂದು ಹೇಳಲಾಗಿತ್ತು. ಆ ಪೋಸ್ಟ್ ಪ್ರಕಾರ, 'ಧುರಂಧರ್ 3' ಚಿತ್ರಕ್ಕೆ "ಮೇಹೆಮ್" (Mayhem) ಎಂದು ಹೆಸರಿಡಲಾಗಿದ್ದು, ಜೂನ್ 4, 2026 ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿಯಿತ್ತು. ಆದರೆ ಅಂತಿಮವಾಗಿ ಇದು ಕೇವಲ ವದಂತಿ ಎಂಬುದು ಗೊತ್ತಾಯಿತು.
'ಧುರಂಧರ್ 2' ನೋಡಿ ಅಲ್ಲು ಅರ್ಜುನ್ ಫಿದಾ: ʻರಣವೀರ್ ಸಿಂಗ್ ನಮ್ಮ ದೇಶದ ಹೆಮ್ಮೆʼ ಎಂದ ಐಕಾನ್ ಸ್ಟಾರ್!
ಆದರೆ, ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳು ಮುಗಿಯುತ್ತಿದ್ದಂತೆ ಚಿತ್ರದ ಕೆಲವು ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಇದರ ಬೆನ್ನಲ್ಲೇ ನಿರ್ದೇಶಕ ಆದಿತ್ಯ ಧರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. "ಎಂಡ್ ಕ್ರೆಡಿಟ್ಸ್ ಮುಗಿಯುವವರೆಗೂ ಯಾರೂ ಸೀಟಿನಿಂದ ಎದ್ದೇಳಬೇಡಿ" ಎಂದು ಅವರು ವಿನಂತಿಸಿದ್ದು ಕೂಡ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು. ಇದರಿಂದಾಗಿ ಅನೇಕ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ಕಾಡತೊಡಗಿದೆ. ಅದೇನಪ್ಪ ಅಂದರೆ, 'ಧುರಂಧರ್ 3' ಬರುವುದು ನಿಜವೇ ಅನ್ನೋದು.
ಇದೀಗ ಸಿನಿಮಾ ಬಿಡುಗಡೆಯಾದ ದಿನವೇ ಟ್ವಿಟ್ಟರ್‌ನಲ್ಲಿ ಮತ್ತೊಂದು ಪೋಸ್ಟ್ ವೈರಲ್ ಆಗುತ್ತಿದೆ. ಅದರ ಪ್ರಕಾರ 'ಧುರಂಧರ್: ದಿ ಫೈನಲ್ ಚಾಪ್ಟರ್' ಎಂಬ ಹೆಸರಿನಲ್ಲಿ ಮೂರನೇ ಭಾಗ ಬರಲಿದ್ದು, ಅದು ಜೂನ್ 14 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ʻಧುರಂಧರ್ʼ ಅಭಿಮಾನಿಗಳಿಗೆ ಈ ಸುದ್ದಿ ಒಂಚೂರು ಗೊಂದಲ ಮೂಡಿಸಿರುವುದಂತೂ ನಿಜ.
ವೈರಲ್ ಆಗುತ್ತಿರುವ ಟ್ವೀಟ್
ಅಸಲಿ ಮಾಹಿತಿ ಏನು?
ಅಂದಹಾಗೆ, ಧುರಂಧರ್ ಪಾರ್ಟ್ 3 ಬರಲಿದೆ ಎಂಬುದಕ್ಕೆ ಚಿತ್ರತಂಡ ಯಾವುದೇ ಸುಳಿವನ್ನು ಅಧಿಕೃತವಾಗಿ ನೀಡಿಲ್ಲ. ವೈರಲ್ ಆಗುತ್ತಿರುವ 'ಧುರಂಧರ್ 3' ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಚಿತ್ರತಂಡವಾಗಲಿ ಅಥವಾ ಚಿತ್ರದ ಅಂತ್ಯದಲ್ಲಾಗಲಿ ಮೂರನೇ ಭಾಗದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.