ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾವು 2025ರ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಈ ವರ್ಷ ಭಾರತದ ಯಾವ ಭಾಷೆಯ ಸಿನಿಮಾಕ್ಕೂ ಈ ದಾಖಲೆಯನ್ನು ಮಾಡಲು ಸಾಧ್ಯವಾಗಿರಲಿಲ್ಲ. ಕಾಂತಾರ ಚಾಪ್ಟರ್ 1 ಸಿನಿಮಾದಿಂದ ಈ ದಾಖಲೆ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಏನದು ದಾಖಲೆ? ಒಂದು ಸಾವಿರ ಕೋಟಿ ರೂ. ಕ್ಲಬ್!
ಹೌದು, ಧುರಂಧರ್ ಸಿನಿಮಾವು ಒಂದು ಸಾವಿರ ಕೋಟಿ ರೂ. ಕ್ಲಬ್ ಸೇರಿದೆ. ಭಾರತದಲ್ಲಿ ಈ ಸಾಧನೆ ಮಾಡಿದ 9 ಸಿನಿಮಾಗಳ ಪೈಕಿ ಈಗ ʻಧುರಂಧರ್ʼ ಕೂಡ ಒಂದು. ಕಳೆದ ವರ್ಷ ಪುಷ್ಪ 2 ಮತ್ತು ಕಲ್ಕಿ ಸಿನಿಮಾಗಳು ಒಂದು ಸಾವಿರ ಕೋಟಿ ರೂ. ಕ್ಲಬ್ ಸೇರಿದ್ದವು. 2025ರಲ್ಲಿ ಯಾವ ಸಿನಿಮಾಗಳು ಆ ಸಾಧನೆ ಮಾಡಿರಲಿಲ್ಲ. ಕಾಂತಾರ 1 ಚಿತ್ರವು 900+ ಕೋಟಿ ರೂ. ಗಳಿಕೆ ಮಾಡಿತು. 1000 ಕೋಟಿ ರೂ. ತಲುಪಲಿಲ್ಲ. ಈ ವರ್ಷ ಈ ಅಪರೂಪದ ದಾಖಲೆ ಸೃಷ್ಟಿಯಾಗೋದಿಲ್ಲ ಎಂದುಕೊಂಡಿರುವಾಗಲೇ ವರ್ಷಾಂತ್ಯದಲ್ಲಿ ಬಂದ ಧುರಂಧರ್, ಬಾಕಿಯಿದ್ದ ಆ ದಾಖಲೆಯನ್ನು ಸೃಷ್ಟಿಸಿದೆ. ಚಿತ್ರದ ನಿರ್ಮಾಪಕರೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
Tamannaah Bhatia : ಕೊನೆ ಕ್ಷಣದಲ್ಲಿ 'ಧುರಂಧರ್' ಸಿನಿಮಾದಿಂದ ತಮನ್ನಾ ಔಟ್ ಆಗಿದ್ದೇಕೆ?
ಎಷ್ಟಾಗಿದೆ ʻಧುರಂಧರ್ʼ ಕಲೆಕ್ಷನ್?
ʻಧುರಂಧರ್ʼ ಸಿನಿಮಾದ ಭಾರತದಲ್ಲಿನ ಗ್ರಾಸ್ ಕಲೆಕ್ಷನ್ 798.18 ಕೋಟಿ ರೂ.ಗಳಾಗಿದೆ. ವಿದೇಶಗಳಲ್ಲಿ 217.50 ಕೋಟಿ ರೂ.ಗಳಾಗಿದೆ. ಒಟ್ಟು 1006.70 ಕೋಟಿ ರೂ. ಹಣ ಗಳಿಕೆ ಆಗಿದ್ದು, ಈ ಸಾಧನೆ ಮಾಡಲು ಧುರಂಧರ್ ಚಿತ್ರವು 21 ದಿನಗಳನ್ನು ತೆಗೆದುಕೊಂಡಿದೆ. ಅಲ್ಲದೆ, ಧುರಂಧರ್ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾವಲ್ಲ. ಕೇವಲ ಹಿಂದಿಯಲ್ಲಿ ಮಾತ್ರ ತೆರೆಕಂಡು ಮತ್ತು ಒಂದಷ್ಟು ದೇಶಗಳಲ್ಲಿ ಆಗಿದ್ದರೂ, ಈ ಸಾಧನೆ ಮಾಡಿರುವುದು ವಿಶೇಷ.
ನಿರ್ಮಾಪಕರು ಹಂಚಿಕೊಂಡ ಪೋಸ್ಟ್
ಡಿಸೆಂಬರ್ 25ರ ಕ್ರಿಸ್‌ಮಸ್ ರಜೆಯು ಧುರಂಧರ್ ಪಾಲಿಗೆ ಲಾಭ ತಂದುಕೊಂಡಿದೆ. ಅಂದು ಈ ಸಿನಿಮಾವು 28.60 ಕೋಟಿ ರೂ. ಗಳಿಸಿದೆ. ಸದ್ಯ ಕ್ರಿಸ್‌ಮಸ್ ವೀಕೆಂಡ್ ರಜೆಗಳು ಇರುವುದರಿಂದ ಈ ವರ್ಷ ಮುಗಿಯುವುದರೊಳಗೆ ಈ ಚಿತ್ರದ ಗಳಿಕೆಯು 1250 ಕೋಟಿ ರೂ. ತಲುಪುವ ನಿರೀಕ್ಷೆ ಇದೆ.
1 ಸಾವಿರ ಕೋಟಿ ರೂ. ಕ್ಲಬ್ ಸೇರಿರುವ ಸಿನಿಮಾಗಳು
ದಂಗಲ್- 2,024 ಕೋಟಿ ರೂ.
ಬಾಹುಬಲಿ 2: ದಿ ಕನ್‌ಕ್ಲೂಷನ್ - 1,810 ಕೋಟಿ ರೂ.
ಪುಷ್ಪ 2: ದಿ ರೂಲ್- 1,642 ಕೋಟಿ ರೂ.
ಆರ್.ಆರ್.ಆರ್ (RRR)- 1,387 ಕೋಟಿ ರೂ.
ಕೆ.ಜಿ.ಎಫ್: ಚಾಪ್ಟರ್ 2- 1,275 ಕೋಟಿ ರೂ.
ಜವಾನ್- 1,148 ಕೋಟಿ ರೂ.
ಕಲ್ಕಿ 2898 AD- 1,100 ಕೋಟಿ ರೂ.
ಪಠಾಣ್ - 1,050 ಕೋಟಿ ರೂ.
ಧುರಂಧರ್- 1,006 ಕೋಟಿ ರೂ.