ನಟಿ ರಶ್ಮಿಕಾ ಮಂದಣ್ಣ- ಸದ್ಯ ದೇಶದ ಎಲ್ಲಾ ಮಾಧ್ಯಮಗಳ ಕಣ್ಣು ಇವರ ಮೇಲಿದೆ. ಕಾರಣ, ಇದೇ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ತೆಲುಗು ನಟ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ದೀರ್ಘಕಾಲದ ಲವ್ ಸ್ಟೋರಿಗೆ ಈಗ ಮದುವೆಯ ಮುದ್ರೆಯನ್ನು ಒತ್ತಲಾಗುತ್ತಿದೆ. ಅಂದಹಾಗೆ, ರಶ್ಮಿಕಾ ಅವರ ಬದುಕಿನ ಜರ್ನಿ ಇದೆಯಲ್ಲಾ, ಅದು ಯಾವ ಸಿನಿಮಾ ಸ್ಟೋರಿಗೂ ಕಮ್ಮಿ ಇಲ್ಲ! ಹಾಗಾದರೆ, ಅವರ ಈ 10 ವರ್ಷಗಳ ಬದುಕು ಹೇಗಿತ್ತು? ಮುಂದೆ ಓದಿ.
20ನೇ ವಯಸ್ಸಿಗೆ ಕ್ರಶ್ ಎನಿಸಿಕೊಂಡ ನಟಿ
ರಶ್ಮಿಕಾ ಅವರು ಮೂಲತಃ ಮಾಡೆಲಿಂಗ್ ಲೋಕದಿಂದ ಬಂದವರು. ಓದುವಾಗಲೇ ಅವರಿಗೆ ಮಾಡೆಲಿಂಗ್ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು. ಬೆಂಗಳೂರಿನಲ್ಲಿ ಕಾಲೇಜು ಓದುವಾಗ ಮಾಡೆಲಿಂಗ್ ಶುರು ಮಾಡಿದ್ದ ರಶ್ಮಿಕಾ, 2017ರಲ್ಲಿ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದರು. ನಂತರ 2016ರಲ್ಲಿ ರಕ್ಷಿತ್ ಶೆಟ್ಟಿ ಅವರ ʻಕಿರಿಕ್ ಪಾರ್ಟಿʼ ಸಿನಿಮಾಗೆ ನಾಯಕಿಯಾದರು. ಆಗ ಅವರಿಗೆ 20 ವರ್ಷ ವಯಸ್ಸು.ʻಕಿರಿಕ್ ಪಾರ್ಟಿʼ ಚಿತ್ರದ ಸಾನ್ವಿ ಪಾತ್ರದಿಂದ ಕರ್ನಾಟಕದ ಕ್ರಶ್ ಎನಿಸಿಕೊಂಡರು.
ಯಾವಾಗ ಕಿರಿಕ್ ಪಾರ್ಟ್ ಬ್ಲಾಕ್ ಬಸ್ಟರ್ ಎನಿಸಿಕೊಂಡಿತೋ, ಕನ್ನಡದ ಸ್ಟಾರ್ ನಟರಿಗೆಲ್ಲಾ ರಶ್ಮಿಕಾನೇ ನಾಯಕಿ ಎನ್ನುವಂತಾಯಿತು. ಗಣೇಶ್ ಜೊತೆ ಚಮಕ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ಅಂಜನಿಪುತ್ರ, ದರ್ಶನ್ ಜೊತೆ ಯಜಮಾನ ಸಿನಿಮಾಗಳಲ್ಲಿ ಮಿಂಚಿದರು.
ರಶ್ಮಿಕಾ ಬದುಕು ಬದಲಿಸಿದ 2018ರ ವರ್ಷ
ಕನ್ನಡದಲ್ಲಿ ಮಿಂಚುತ್ತಿದ್ದ ರಶ್ಮಿಕಾಗೆ ತೆಲುಗಿನಿಂದ ಅವಕಾಶಗಳು ಅರಸಿ ಬಂದವು. ನಾಗ ಶೌರ್ಯ ಜೊತೆ ಛಲೋ ಚಿತ್ರದಲ್ಲಿ ನಟಿಸಿದ ರಶ್ಮಿಕಾಗೆ ಆರಂಭದಲ್ಲೇ ಒಂದು ಗೆಲುವು ಸಿಕ್ಕಿತ್ತು. ನಂತರ ಬಂದಿದ್ದೇ ʻಗೀತಾ ಗೋವಿಂದಂʼ ಸಿನಿಮಾ. ಅದು ವಿಜಯ್ ದೇವರಕೊಂಡ ಜೊತೆ ರಶ್ಮಿಕಾಗೆ ಮೊದಲ ಸಿನಿಮಾ. ಬರೀ 5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ʻಗೀತಾ ಗೋವಿಂದಂʼ ಸಿನಿಮಾ ಟಾಲಿವುಡ್‌ನಲ್ಲಿ 125 ಕೋಟಿ ರೂ. ಬಾಚಿಕೊಂಡು ಒಟ್ಟೊಟ್ಟಿಗೆ ವಿಜಯ್ ಮತ್ತು ರಶ್ಮಿಕಾಗೆ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಇಬ್ಬರಿಗೂ ತೆಲುಗಿನಲ್ಲಿ ನೆಲೆಯೂರಲು ಭದ್ರ ಬುನಾದಿ ಹಾಕಿಕೊಟ್ಟಿದ್ದು ಇದೇ ಸಿನಿಮಾ. ಅನಂತರ ರಶ್ಮಿಕಾ ಸ್ಯಾಂಡಲ್‌ವುಡ್ ಪಾಲಿಗೆ ಗಗನ ಕುಸುಮವಾಗಿದ್ದು ಸುಳ್ಳಲ್ಲ.
Vijay Deverakonda: ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು
ʻಪುಷ್ಪʼ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್
ತೆಲುಗಿನಲ್ಲಿ ಅವಕಾಶಗಳ ಮೇಲೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತ, ಸೋಲು -ಗೆಲುವನ್ನು ಸಮಾನವಾಗಿ ನೋಡುತ್ತಾ ಮುಂದೆ ಸಾಗಿದ ರಶ್ಮಿಕಾಗೆ ನಟನೆಯೇ ಬರಲ್ಲ ಅನ್ನೋ ಟ್ರೋಲ್‌ಗಳು ಕೂಡ ಕಾಡಿದವು. ಅದ್ಯಾವುದನ್ನೂ ತಲೆಗೇ ಹಾಕಿಕೊಳ್ಳದ ರಶ್ಮಿಕಾ ತಮ್ಮ ಗಮನವನ್ನು ಸಿನಿಮಾಗಳ ಮೇಲೆ ಇಟ್ಟರು. ಅದಕ್ಕೆ ಸರಿಯಾಗಿ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ ಆಫರ್ ರಶ್ಮಿಕಾಗೆ ಸಿಕ್ಕಿತು. ಆನಂತರವಂತೂ ಅವರು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅದಕ್ಕೆ ಇನ್ನಷ್ಟು ಬೂಸ್ಟ್ ನೀಡಿದ್ದು ಪುಷ್ಪ 2 ಸಿನಿಮಾ!
ಬಾಲಿವುಡ್‌ನಿಂದಲೂ ಹರಿದು ಬಂತು ಆಫರ್ಸ್
ಬಾಲಿವುಡ್‌ನ ಮಿಷನ್ ಮಜ್ನು, ಗುಡ್‌ಬೈ ಚಿತ್ರಗಳಲ್ಲಿ ನಟಿಸಿದ ರಶ್ಮಿಕಾಗೆ ಅನಿಮಲ್ ಚಿತ್ರದಿಂದ ಎಂತಹ ದೊಡ್ಡ ಗೆಲುವು ಸಿಕ್ಕಿತು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದಾದ ಬಳಿಕ ಛಾವಾ, ಸಿಕಂದರ್, ಥಾಮಾದಂತಹ ಸಾಲು ಸಾಲು ಬಿಗ್ ಬಜೆಟ್ ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಾಯಕಿಯಾದರು. ಕನ್ನಡದ ಮೂಲಕ ಬೆಳಕಿಗೆ ಬಂದರು, ತೆಲುಗಿನಲ್ಲಿ ಸ್ಟಾರ್ ಆಗಿ, ತಮಿಳಿನಲ್ಲೂ ಮಿಂಚಿ ಈಗ ಬಾಲಿವುಡ್‌ನಲ್ಲೂ ಸದ್ದು ಮಾಡುತ್ತಿದ್ದಾರೆ ಕೊಡಗಿನ ಬೆಡಗಿ ರಶ್ಮಿಕಾ. ಈಗಲೂ ಅವರ ಕೈಯಲ್ಲಿ ಮೂರ್ನಾಲ್ಕು ದೊಡ್ಡ ಸಿನಿಮಾಗಳಿವೆ. ಕನ್ನಡವನ್ನು ಸರಿಯಾಗಿ ಮಾತನಾಡಲು ಬಾರದಿದ್ದಕ್ಕೆ ಟ್ರೋಲ್ ಆಗುತ್ತಿದ್ದ ರಶ್ಮಿಕಾ ಈಗ ತೆಲುಗು, ಹಿಂದಿ, ತಮಿಳಿನಲ್ಲೂ ಮಾತನಾಡುತ್ತಿದ್ದಾರೆ.
Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!
ರಶ್ಮಿಕಾ ವೈಯಕ್ತಿಕ ಬದುಕಿನಲ್ಲೂ ಏರಿಳಿತಗಳಿವೆ!
ಸಿನಿಮಾ ಬದುಕಿನಂತೆ ಖಾಸಗಿ ಬದುಕಿನಲ್ಲೂ ರಶ್ಮಿಕಾ ಅನೇಕ ಏರಿಳಿತ ಕಂಡಿದ್ದಾರೆ. 1996ರ ಏಪ್ರಿಲ್ 5 ರಂದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕೊಡವ ಕುಟುಂಬದಲ್ಲಿ ಜನಿಸಿದ ರಶ್ಮಿಕಾ ಪೋಷಕರ ಹೆಸರು ಮದನ್ ಮಂದಣ್ಣ ಮತ್ತು ಸುಮನ್ ಮಂದಣ್ಣ. ರಶ್ಮಿಕಾಗೆ ಶಿಮನ್ ಮಂದಣ್ಣ ಎಂಬ ತಂಗಿಯಿದ್ದು, ಈ ಸಹೋದರಿಯರ ನಡುವೆ 16 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಸೈಕಾಲಜಿ (ಮನೋವಿಜ್ಞಾನ), ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ ರಶ್ಮಿಕಾ.
20ನೇ ವಯಸ್ಸಿಗೆ ನಾಯಕಿಯಾದ ರಶ್ಮಿಕಾ, 21ನೇ ವಯಸ್ಸಿಗೆ ಮದುವೆಯಾಗುವ ನಿರ್ಧಾರ ಮಾಡಿದ್ದರು. ಕಿರಿಕ್ ಪಾರ್ಟಿ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ಪ್ರೀತಿಯಲ್ಲಿದ್ದ ಅವರು 2017ರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ 2018ರಲ್ಲಿ ಈ ನಿಶ್ಚಿತಾರ್ಥ ಮುರಿದುಬಿತ್ತು!
ಟ್ರೋಲ್‌ಗಳಿಗೆ ಸಿಕ್ಕಿಹಾಕಿಕೊಂಡಿದ್ದ ನಟಿ
ಈಚೆಗೆ ಯಾವುದಾದರೂ ನಟಿ ಬಗ್ಗೆ ಹೆಚ್ಚು ಟ್ರೋಲ್‌ಗಳು ಆಗಿವೆ ಎಂದರೆ, ಅದು ರಶ್ಮಿಕಾ ವಿಚಾರಕ್ಕೆ ಎನ್ನಬಹುದು. ನಿಶ್ಚಿತಾರ್ಥ ಬ್ರೇಕ್ ಮಾಡಿಕೊಂಡಿದ್ದಕ್ಕೆ ರಕ್ಷಿತ್ ಫ್ಯಾನ್ಸ್, ರಶ್ಮಿಕಾ ಮೇಲೆ ಉರಿದುಬಿದ್ದರು. ಅವಕಾಶ ನೀಡಿದ ರಕ್ಷಿತ್ ಶೆಟ್ಟಿಯನ್ನು ಮರೆತರು ಎಂಬ ಕಾರಣಕ್ಕೆ ಟ್ರೋಲ್ ಆದರು ರಶ್ಮಿಕಾ. ಆನಂತರ ಕೊಡವರಲ್ಲಿ ನಾನೇ ಮೊದಲ ನಟಿ ಎಂದಿದ್ದು, ಹೈದರಾಬಾದ್‌ನಿಂದ ಬಂದವಳು ನಾನು ಎಂದಿದ್ದೆಲ್ಲಾ ಕರ್ನಾಟಕದಲ್ಲಿ ಅವರ ಮೇಲಿನ ಕೋಪಕ್ಕೆ ತುಪ್ಪ ಸುರಿದವು. ಇದೆಲ್ಲದರ ಪರಿಣಾಮವೋ ಏನೋ, ಸ್ಯಾಂಡಲ್‌ವುಡ್‌ನಿಂದ ರಶ್ಮಿಕಾ ಕೂಡ ದೂರ ಉಳಿದರು.
ದಾಂಪತ್ಯ ಬದುಕಿಗೆ ಕಾಲಿಡುತ್ತಿರುವ ನಟಿ
20ನೇ ವಯಸ್ಸಿಗೆ ನಟಿಯಾಗಿ ಸಕ್ಸಸ್, 21ನೇ ವಯಸ್ಸಿಗೆ ಮದುವೆ ನಿಶ್ಚಿತಾರ್ಥ, 22ನೇ ವಯಸ್ಸಿನಲ್ಲಿ ಮುರಿದುಬಿದ್ದ ಮದುವೆ... ಹೀಗೆ ಚಿಕ್ಕ ವಯಸ್ಸಿನಲ್ಲೇ ಬದುಕಿನ ಹಲವು ತಿರುವುಗಳಿಗೆ ಸಾಕ್ಷಿಯಾದ ರಶ್ಮಿಕಾ, ಆನಂತರ ಭಾರತದ ಟಾಪ್ 5 ನಟಿಯರಲ್ಲಿ ಒಬ್ಬರಾಗಿದ್ದು ಈಗ ಇತಿಹಾಸ. ಇದೀಗ ತಮ್ಮ 30ನೇ ವಯಸ್ಸಿನಲ್ಲಿ ದೀರ್ಘಕಾಲದ ಬಾಯ್‌ಫ್ರೆಂಡ್ ನಟ ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದಾರೆ ರಶ್ಮಿಕಾ. ಅಭಿಮಾನಿಗಳು ಇವರಿಬ್ಬರನ್ನು ಪ್ರೀತಿಯಿಂದ 'ವಿರೋಶ್' (VIROSH) ಎಂದು ಕರೆಯುತ್ತಿದ್ದಾರೆ.
ರಶ್ಮಿಕಾ ಮತ್ತು ವಿಜಯ ದೇವರಕೊಂಡ ಕೂಡ ತಮ್ಮ ಮದುವೆಯನ್ನು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಲಾಗಿದೆ. ತಮ್ಮ ಮದುವೆಯನ್ನು "The Wedding of VIROSH" ಎಂದು ರಶ್ಮಿಕಾ ಮತ್ತು ವಿಜಯ್ ಕರೆದುಕೊಂಡಿದ್ದಾರೆ. ಸದ್ಯ ಉದಯಪುರದಲ್ಲಿ ಮದುವೆಯ ಸಂಭ್ರಮ ಶುರುವಾಗಿದ್ದು, ಕೊಡಗಿನ ಕುವರಿ ದೇವರಕೊಂಡ ಕುಟುಂಬದ ಸೊಸೆಯಾಗಲು ಸಿದ್ಧರಾಗಿದ್ದಾರೆ!