ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ಫೆಬ್ರವರಿ 26ರಂದು ರಾಜಸ್ಥಾನದಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಆನಂತರ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಆಚರಿಸಿಕೊಂಡಿದ್ದರು. ಈಗ ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರು ವಿರಾಜಪೇಟೆಗೆ ಪತಿ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಆಗಮಿಸಿದ್ದಾರೆ.
ಏಪ್ರಿಲ್ 5ರಂದು ರಶ್ಮಿಕಾ ಹುಟ್ಟುಹಬ್ಬವಿತ್ತು. ಈ ಬಾರಿ ಹುಟ್ಟುಹಬ್ಬವನ್ನು ಕುಟುಂಬದವರ ಜೊತೆಗೆ ಹುಟ್ಟೂರಿನಲ್ಲೇ ಆಚರಿಸಿಕೊಂಡಿದ್ದಾರೆ ರಶ್ಮಿಕಾ. ಜೊತೆಗೆ ಮರುದಿನ ಅಂದರೆ, ಸೋಮವಾರ (ಏ.6) ವಿರಾಜಪೇಟೆಯಲ್ಲಿ ಅದ್ದೂರಿ ಔತಣಕೂಟವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಕೊಡವ ಶೈಲಿಯ ಸೀರೆಯನ್ನು ಉಟ್ಟಿದ್ದರು ರಶ್ಮಿಕಾ. ಈ ಸಮಾರಂಭದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Rashmika Mandanna: ಹನಿಮೂನ್ ಮೂಡ್ನಲ್ಲಿ ರಶ್ಮಿಕಾ-ವಿಜಯ್; ಕ್ಯೂಟ್ ಫೋಟೊ ವೈರಲ್
ರಶ್ಮಿಕಾ ಕುಟುಂಬದ ಒಡೆತನದ ಕನ್ವೆನ್ಷನ್ ಹಾಲ್
ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರ ಒಡೆತನದ ಸೆರೆನಿಟಿ ಕನ್ವೆನ್ಷನ್ ಹಾಲ್ ವಿರಾಜಪೇಟೆಯಲ್ಲಿದೆ. ಅದೇ ಹಾಲ್‌ನಲ್ಲೇ ಈ ಅದ್ದೂರಿ ಔತಣಕೂಟದ ಸಮಾರಂಭ ನಡೆದಿದೆ. ವಿಜಯ್ ದೇವರಕೊಂಡ ಕಪ್ಪು ಬ್ಲೇಜರ್ ಮತ್ತು ಬಿಳಿ ಶರ್ಟ್‌ನಲ್ಲಿ ಮಿಂಚಿದರೆ, ರಶ್ಮಿಕಾ ಗುಲಾಬಿ ಮತ್ತು ಆಲಿವ್ ಗ್ರೀನ್ ಬಣ್ಣದ ರೇಷ್ಮೆ ಸೀರೆಯನ್ನು ಕೊಡವ ಶೈಲಿಯಲ್ಲಿ ಧರಿಸಿದ್ದರು. ಹುಟ್ಟುಹಬ್ಬ ಆಚರಣೆ ಮತ್ತು ಕೊಡಗಿನಲ್ಲಿ ಔತಣಕೂಟ ಆಯೋಜಿಸುವ ಸಲುವಾಗಿ ವಿಜಯ್ ದೇವರಕೊಂಡ ಪೋಷಕರ ಜೊತೆ ರಶ್ಮಿಕಾ ಏಪ್ರಿಲ್ 4ರಂದೇ ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದಲ್ಲಿರುವ ಕದನೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದರು.
ರಶ್ಮಿಕಾಗೆ ಸಿಕ್ಕಿದೆ ದೊಡ್ಡ ಉಡುಗೊರೆ
ಮದುವೆಯ ನಂತರ ಮೊದಲ ಬಾರಿಗೆ ಮಗಳು - ಅಳಿಯ ಆಗಮಿಸಿದ ಹಿನ್ನೆಲೆಯಲ್ಲಿ ಕದನೂರಿನಲ್ಲಿರುವ ಮನೆಯನ್ನು ವಿಶೇಷವಾಗಿ ನವೀಕರಣಗೊಳಿಸಿದ್ದರು ರಶ್ಮಿಕಾ ತಂದೆ ಮದನ್ ಮಂದಣ್ಣ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಶ್ಮಿಕಾ ಮತ್ತು ವಿಜಯ್ ದಂಪತಿ ಕೊಡಗಿನ ಆರಾಧ್ಯ ದೈವ, ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿರುವ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ವಿರಾಜಪೇಟೆಯಲ್ಲಿ ರಶ್ಮಿಕಾ ಮಂದಣ್ಣ
ಇನ್ನು, ರಶ್ಮಿಕಾ ಹುಟ್ಟುಹಬ್ಬಕ್ಕೆ ತಂದೆ ಮದನ್ ಮಂದಣ್ಣ ಕಡೆಯಿಂದ ದುಬಾರಿ ಉಡುಗೊರೆಯೇ ಸಿಕ್ಕಿದೆ. ಕದನೂರಿನಲ್ಲಿರುವ ಸೆರೆನಿಟಿ ಬಂಗಲೆಯನ್ನು ಮಗಳು ರಶ್ಮಿಕಾಗೆ ಗಿಫ್ಟ್ ಆಗಿ ನೀಡಿದ್ದಾರೆ ತಂದೆ ಮದನ್ ಮಂದಣ್ಣ.
ವಿರಾಜಪೇಟೆ ಚೆಂಚೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ನಿವಾಸಿ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಮುಂಡಚಾಡಿರ ಮದನ್ ಮಂದಣ್ಣ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1 ಮತ್ತು 142/2 ಐಷಾರಾಮಿ (ಸೆರಿನಿಟಿ) ಮನೆಯನ್ನು ವಿರಾಜಪೇಟೆ ಉಪ ನೋಂದಾಣಿ ಕಚೇರಿಯಲ್ಲಿ ತಮ್ಮ ಮಗಳಾದ ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಿಕೊಟ್ಟರು.
ಒಟ್ಟಿಗೆ ನಟಿಸುತ್ತಿರುವ ವಿರೋಶ್ ಜೋಡಿ
ಸದ್ಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯು ‘ರಣಬಾಲಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರವು ಸೆಪ್ಟೆಂಬರ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ರಶ್ಮಿಕಾ ಕಾಕ್‌ಟೇಲ್ 2 ಮತ್ತು ಮೈಸಾ ಸಿನಿಮಾಗಳನ್ನು ಒಪ್ಪಿಕೊಂಡಿದ್ದರೆ, ಅತ್ತ ವಿಜಯ್ ದೇವರಕೊಂಡ ʻರೌಡಿ ಜನಾರ್ದನʼ ಎಂಬ ಸಿನಿಮಾದಲ್ಲೂ ಸಕ್ರಿಯವಾಗಿದ್ದಾರೆ.