ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ಗಾನಕೋಗಿಲೆ, ‘ಭಾರತ ರತ್ನ’ ಡಾ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುವುದು ಇದೀಗ ಅಧಿಕೃತವಾಗಿದೆ. ಈ ಮಹೋನ್ನತ ಪಾತ್ರಕ್ಕಾಗಿ ರಶ್ಮಿಕಾ ಸ್ಕ್ರೀನ್ ಟೆಸ್ಟ್‌ನಲ್ಲಿ ಭಾಗಿಯಾಗಿದ್ದ ಸುದ್ದಿ ಈ ಹಿಂದೆಯೇ ಹರಿದಾಡಿ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡ ‘ಎಂ.ಎಸ್. – ಎ ಲೆಗಸಿ ಆನ್ ಸ್ಕ್ರೀನ್’ (M.S. – A Legacy on Screen) ಎಂಬ ಶೀರ್ಷಿಕೆಯೊಂದಿಗೆ ರಶ್ಮಿಕಾ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ನಿರ್ಮಾಣದ ಹೊಣೆ ರಾಕ್‌ಲೈನ್ ಪಾಲಿಗೆ
ಈ ಮಹತ್ವಾಕಾಂಕ್ಷೆಯ ಚಿತ್ರದ ಮತ್ತೊಂದು ಬಹುದೊಡ್ಡ ಹೈಲೈಟ್ ಎಂದರೆ, ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಈ ಚಿತ್ರಕ್ಕೆ ಹಣ ಹಾಕುತ್ತಿರುವುದು. ರಾಕ್‌ಲೈನ್ ವೆಂಕಟೇಶ್, ಟಾಲಿವುಡ್‌ನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಮತ್ತು ಬನ್ನಿ ವಾಸು ಅವರೊಂದಿಗೆ ಕೈಜೋಡಿಸಿ ಈ ಜಾಗತಿಕ ಮಟ್ಟದ ಐತಿಹಾಸಿಕ ಬಯೋಪಿಕ್‌ಗೆ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಕನ್ನಡತಿಯೊಬ್ಬರು ಇಂತಹ ಸಂಗೀತ ಸಾಮ್ರಾಜ್ಞಿಯ ಪಾತ್ರ ನಿರ್ವಹಿಸುತ್ತಿರುವಾಗ, ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್’ ಈ ಚಿತ್ರದ ಮುಂಚೂಣಿಯಲ್ಲಿ ನಿಂತಿರುವುದು ಸ್ಯಾಂಡಲ್‌ವುಡ್ ಪಾಲಿಗೂ ಹೆಮ್ಮೆಯ ವಿಷಯವಾಗಿದೆ.
ರಶ್ಮಿಕಾಗೆ ಇದು ಸವಾಲಿನ ಪಾತ್ರ
ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನಾಚರಣೆಯ ಸುಸಂದರ್ಭದಲ್ಲಿ ಸೆಪ್ಟೆಂಬರ್ 16 ರಂದು ಚೆನ್ನೈನಲ್ಲಿ ಈ ಅದ್ಧೂರಿ ಚಿತ್ರ ಅಧಿಕೃತವಾಗಿ ಸೆಟ್ಟೇರಲಿದೆ. ಈ ಸಮಾರಂಭಕ್ಕೆ ಕಮಲ್ ಹಾಸನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ‘ಇಂಡಿಯನ್ ಕೋರಲ್ ಎನ್‌ಸೆಂಬಲ್’ ತಂಡವು ಸುಬ್ಬುಲಕ್ಷ್ಮಿ ಅವರ ಪ್ರಸಿದ್ಧ ಗೀತೆಗಳನ್ನು ಹಾಡುವ ಮೂಲಕ ಸಂಗೀತ ನಮನ ಸಲ್ಲಿಸಲಿದೆ. ‘ಸೇವಾಸದನಂ’, ‘ಶಾಕುಂತಲೈ’, ‘ಸಾವಿತ್ರಿ’ ಹಾಗೂ ಸಾರ್ವಕಾಲಿಕ ದಾಖಲೆಯ ‘ಮೀರಾ’ ಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲೂ ಛಾಪು ಮೂಡಿಸಿದ್ದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರ ರಶ್ಮಿಕಾ ಅವರ ಸಿನಿಮಾ ವೃತ್ತಿಜೀವನದಲ್ಲೇ ಅತ್ಯಂತ ಗೌರವಾನ್ವಿತ ಹಾಗೂ ಸವಾಲಿನ ಪಾತ್ರವಾಗಲಿದೆ.
Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!
ಅನಿರುದ್ಧ್ ಸಂಗೀತ ನಿರ್ದೇಶನ
ಈ ಬಹುನಿರೀಕ್ಷಿತ ಚಿತ್ರಕ್ಕೆ ‘ಜೆರ್ಸಿ’ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 2017ರ ‘ಮಳ್ಳಿ ರಾವಾ’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟು, ನಂತರ ತೆಲುಗಿನಲ್ಲಿ ಜೆರ್ಸಿ ಸಿನಿಮಾದಿಂದ ಗೆದ್ದು, ಅದನ್ನು ಶಾಹಿದ್ ಕಪೂರ್ ನಟನೆಯಲ್ಲಿ ‘ಜೆರ್ಸಿ’ ಹಿಂದಿಗೂ ರಿಮೇಕ್ ಮಾಡಿದ್ದ ಗೌತಮ್, ಈಚೆಗೆ ತೆಲುಗಿನ ಸ್ಪೈ ಥ್ರಿಲ್ಲರ್ ‘ಕಿಂಗ್‌ಡಮ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಇದೀಗ ಈ ಚಿತ್ರದ ಮೂಲಕ ಮತ್ತೊಂದು ಕ್ಲಾಸಿಕ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಈ ಬಯೋಪಿಕ್‌ಗೆ ಸಂಗೀತ ಸಂಯೋಜಿಸುತ್ತಿರುವುದು ಚಿತ್ರದ ಮೇಲಿನ ತೂಕವನ್ನು ಹೆಚ್ಚಿಸಿದೆ.
ಸಖತ್ ಬ್ಯುಸಿ ಇರುವ ರಶ್ಮಿಕಾ
ಸದ್ಯ ರಶ್ಮಿಕಾ ಮಂದಣ್ಣ ಸಾಲು ಸಾಲು ಬೃಹತ್ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ‘ರಣಬಾಲಿ’, ಗೋಂಡ್ ಬುಡಕಟ್ಟು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಮೈಸಾ’ ಸಿನಿಮಾ, ಹಾಗೂ ನಿರ್ದೇಶಕ ಅಟ್ಲೀ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‌ನ ಸೈ-ಫೈ ಆಕ್ಷನ್ ಚಿತ್ರ ʻರಾಕಾʼ ಚಿತ್ರಗಳು ತೆರೆಕಾಣಲು ಸಜ್ಜಾಗಿವೆ. ಈ ಎಲ್ಲ ಬಿಗ್ ಬಜೆಟ್ ಚಿತ್ರಗಳ ನಡುವೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ರಶ್ಮಿಕಾ ಅವರ ಕರಿಯರ್‌ಗೆ ಸ್ಪೆಷಲ್ಟ್ ಸಿನಿಮಾವಾಗಲಿದೆ.