Rashmika Mandanna: ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ರಶ್ಮಿಕಾ; ವಿಡಿಯೊ ನೋಡಿ ಫ್ಯಾನ್ಸ್ ಫುಲ್ ಖುಷ್
ಇತ್ತೀಚೆಗೆ ನ್ಯಾಶನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಅವರು ತಮ್ಮ ಮುಂಬರುವ ಹಿಂದಿ ಚಿತ್ರ ʼಛಾವಾʼ ಪ್ರಮೋಷನ್ ಕಾರ್ಯಕ್ರಮದಲ್ಲಿ ಕುಂಟುತ್ತಾ ಭಾಗವಹಿಸಿದ್ದರು. ಸದ್ಯ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಅವರು ಯಾರ ಸಹಾಯವೂ ಇಲ್ಲದೆ ಓಡಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
![ಕಾಲಿನ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ರಶ್ಮಿಕಾ; ವಿಡಿಯೊ ನೋಡಿ](https://cdn-vishwavani-prod.hindverse.com/media/original_images/Rashmika_Mandanna_1.jpg)
ರಶ್ಮಿಕಾ ಮಂದಣ್ಣ (ಇನ್‌ಸ್ಟಾಗ್ರಾಮ್ ಚಿತ್ರ).
![Profile](https://vishwavani.news/static/img/user.png)
ಮುಂಬೈ: ʼಕಿರಿಕ್ ಪಾರ್ಟಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿ ಬಳಿಕ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಅತ್ಯಂತ ಬ್ಯುಸಿ ನಟಿ ಎನಿಸಿಕೊಂಡಿದ್ದಾರೆ. ಹಿಂದಿ, ತಮಿಳು, ತೆಲುಗು ಚಿತ್ರಗಳ ಶೂಟಿಂಗ್, ಪ್ರಮೋಷನ್ ಹೀಗೆ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈಗೆೆ ಸತತವಾಗಿ ಓಡಾಡುತ್ತಿದ್ದಾರೆ. ಈ ಮಧ್ಯೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಅವರ ಕಾಲಿಗೆ ಪೆಟ್ಟಾಗಿತ್ತು. ಸದ್ಯ ಅವರು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಯಾರ ಸಹಾಯವೂ ಇಲ್ಲದೆ ನಡೆದುಕೊಂಡು ಹೋಗುವ ವಿಡಿಯೊ ವೈರಲ್ ಆಗಿದೆ (Viral Video). ತಮ್ಮ ನೆಚ್ಚಿನ ನಟಿ ಚೇತರಿಸಿಕೊಂಡಿರುವುದನ್ನು ನೋಡಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮುಂಬೈಯಲ್ಲಿ ನಡೆದ ʼಛಾವಾʼ (Chhaava) ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಶ್ಮಿಕಾ ಕುಂಟುತ್ತಾ ಭಾಗವಹಿಸಿದ್ದರು. ವ್ಹೀಲ್‌ಚೇರ್‌ನಲ್ಲಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ನೋಡಿ ಫ್ಯಾನ್ಸ್ ಶಾಕ್‌ಗೆ ಒಳಗಾಗಿದ್ದರು. ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು. ಸದ್ಯ ಅವರು ಮುಂಬೈಗೆ ಹೊರಟ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ಅವರು ಯಾರ ಸಹಾಯವಿಲ್ಲದೆ ಆರಾಮವಾಗಿ ನಡೆಯುತ್ತಿರುವುದು ಕಂಡು ಬಂದಿದೆ.
ಛಾವಾ ಚಿತ್ರದ ಪ್ರಮೋಷನ್
ಬಾಲಿವುಡ್‌ನ ಪ್ರತಿಭಾನ್ವಿತ ನಟ ವಿಕ್ಕಿ ಕೌಶಲ್ ಜತೆ ರಶ್ಮಿಕಾ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ ʼಛಾವಾʼ ಚಿತ್ರ ಫೆ. 14ರಂದು ತೆರೆಗೆ ಬರಲಿದೆ. ಐತಿಹಾಸಿಕ ಕಥಾ ಹಂದರ ಹೊಂದಿರುವ ಈ ಚಿತ್ರ ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಸಂಭಾಜಿ ಮಹಾರಾಜ ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಸಂಭಾಜಿ ಮಹಾರಾಜ ಅವರ ಪತ್ನಿ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರತಂಡ ಪ್ರಮೋಷನ್ ಕಾರ್ಯದಲ್ಲಿ ನಿರತವಾಗಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾದ ಟ್ರೈಲರ್, ಹಾಡು ಈಗಾಗಲೇ ಗಮನ ಸೆಳೆದಿದ್ದು, ನಿರೀಕ್ಷೆ ಹೆಚ್ಚಿಸಿದೆ.
ಈ ಹಿಂದೆ ಜಾಹೀರಾತಿನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ʼಛಾವಾʼ ಚಿತ್ರಕ್ಕಾಗಿ ಬೆಳ್ಳಿ ತೆರೆ ಮೇಲೆ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರಿಗೂ ಇದು ಮೊದಲ ಐತಿಹಾಸಿಕ ಚಿತ್ರ ಎನ್ನುವುದು ವಿಶೇಷ. ಸದ್ಯ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ.
ಈ ಸುದ್ದಿಯನ್ನೂ ಓದಿ: Chhava Trailer: ಐತಿಹಾಸಿಕ ಪಾತ್ರದಲ್ಲಿ ವಿಕ್ಕಿ ಕೌಶಲ್-ರಶ್ಮಿಕಾ ಮಿಂಚು; 'ಛಾವಾ' ಟ್ರೈಲರ್ ಔಟ್
ʼಛಾವಾʼ ಸಿನಿಮಾದ ಜತೆಗೆ ಪ್ರಸ್ತುತ ರಶ್ಮಿಕಾ ಐದಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಜತೆ ʼಸಿಕಂದರ್ʼ ಮತ್ತು ಅಟ್ಲಿ ನಿರ್ದೇಶನದ ಮುಂದಿನ ಚಿತ್ರ, ಆಯುಷ್ಮಾನ್ ಖುರಾನ ಜತೆಗೆ ʼಥಮʼ, ತಮಿಳಿನಲ್ಲಿ ಧನುಷ್‌ನೊಂದಿಗೆ ʼಕುಬೇರʼ, ತೆಲುಗಿನಲ್ಲಿ ದೀಕ್ಷಿತ್ ಶೆಟ್ಟಿ ಜತೆಗೆ ʼದಿ ಗರ್ಲ್‌ಫ್ರೆಂಡ್ʼ ಮತ್ತು ʼರೈನ್ ಬೋʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಅಲ್ಲು ಅರ್ಜುನ್ ಜತೆಗಿನ ʼಪುಷ್ಪ 2ʼ ಚಿತ್ರ ಕೊಡಗಿನ ಬೆಡಗಿ ರಶ್ಮಿಕಾಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ.