Chhava Trailer: ಐತಿಹಾಸಿಕ ಪಾತ್ರದಲ್ಲಿ ವಿಕ್ಕಿ ಕೌಶಲ್-ರಶ್ಮಿಕಾ ಮಿಂಚು; 'ಛಾವಾ' ಟ್ರೈಲರ್ ಔಟ್
Chhava Trailer: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಮೇಲೆ ಒಂದಾಗುತ್ತಿರುವ ಚಿತ್ರ ಬಾಲಿವುಡ್‌ನ ʼಛಾವಾʼ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ ಟ್ರೈಲರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ.
ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಚಿತ್ರ ಬಾಲಿವುಡ್‌ನ 'ಛಾವಾ' (Chhava). ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ವಿಕ್ಕಿ ಕೌಶಲ್ (Vicky Kaushal) ಮತ್ತು ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿ ತೆರೆ ಮೇಲೆ ಒಂದಾಗುತ್ತಿರುವ ಈ ಚಿತ್ರ ಸೆಟ್ಟೇರಿದಾಗಿನಿಂದಲೇ ದೇಶದ ಗಮನ ಸೆಳೆದಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿ ಆ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಇದೀಗ ಸಿನಿಮಾ ತಂಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟ್ರೈಲರ್ (Chhava Trailer) ರಿಲೀಸ್ ಮಾಡಿದೆ.
ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಸಂಭಾಜಿ ಮಹಾರಾಜ ಜೀವನದ ಮೇಲೆ ಬೆಳಕು ಚೆಲ್ಲುವ ಚಿತ್ರ ʼಛಾವಾʼ. ತಂದೆಯಂತೆಯೇ ಪರಾಕ್ರಮಿಯಾಗಿದ್ದರೂ ಸಂಭಾಜಿ ಮಹಾರಾಜರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೀಗಾಗಿ ಇತಿಹಾಸದಲ್ಲಿ ದಾಖಲಾಗಿರುವ ಅಪರೂಪದ ವಿವರಗಳನ್ನು ಚಿತ್ರತಂಡ ತೆರೆ ಮೇಲೆ ತಂದಿದೆ. ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿಕೊಡಲಾಗಿದ್ದು, ಲಕ್ಷ್ಮಣ್ ಉಟೇಕರ್ ಅವರ ನಿರ್ದೇಶನ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಅದ್ಧೂರಿಯಾಗಿ ಟ್ರೈಲರ್ ಮೂಡಿ ಬಂದಿದ್ದು, ನಿರೀಕ್ಷೆ ಗರಿಗೆದರಿದೆ. ಸಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕ್ಕಿ ಕೌಶಲ್ ಅಬ್ಬರಿಸಿದರೆ, ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದಾರೆ.
Dinesh Vijan and Maddock Films present the trailer of Hindi Cinema's biggest spectacle ever - #Chhaava
— Maddockfilms (@MaddockFilms) January 22, 2025
Yeh Sher Shiva ka Chhaava shor nahin karta, seedha shikaar karta hai!#ChhaavaTrailer #ChhaavaTrailerOutNow
🔗 - https://t.co/Vs9D5Y0Rre
Releasing in cinemas on 14th… pic.twitter.com/10wqWrp2I4
ಐತಿಹಾಸಿಕ ಪಾತ್ರದಲ್ಲಿ ವಿಕ್ಕಿ-ರಶ್ಮಿಕಾ
ಈ ಹಿಂದೆ ಜಾಹೀರಾತಿನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ʼಛಾವಾʼ ಚಿತ್ರಕ್ಕಾಗಿ ಬೆಳ್ಳಿ ತೆರೆ ಮೇಲೆ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರಿಗೂ ಇದು ಮೊದಲ ಐತಿಹಾಸಿಕ ಚಿತ್ರ ಎನ್ನುವುದು ವಿಶೇಷ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರಿಬ್ಬರು ಇದುವರೆಗೆ ವಿವಿಧ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಐತಿಹಾಸಿಕ ಪಾತ್ರದಲ್ಲಿ ನಟಿಸಿರಲಿಲ್ಲ. ಹೀಗಾಗಿ ಇವರ ಈ ಪ್ರಥಮ ಪ್ರಯೋಗ ಗಮನ ಸೆಳೆಯುತ್ತಿದೆ. ಇದೀಗ ಅದ್ಧೂರಿ ಮೇಕಿಂಗ್ ಮೂಲಕವೂ ಚಿತ್ರದ ಟ್ರೈಲರ್ ಸದ್ದು ಮಾಡುತ್ತಿದೆ.
ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನೀಡಿದ್ದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಅಕ್ಷಯ್ ಖನ್ನಾ, ಆಶುತೋಷ್ ರಾಣಾ, ದಿವ್ಯಾ ದತ್ತಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Rashmika Mandanna: ಮಹಾರಾಣಿ ಯೆಸುಬಾಯಿ ಅವತಾರದಲ್ಲಿ ರಶ್ಮಿಕಾ ಮಿಂಚು; ವಿಕ್ಕಿ ಕೌಶಲ್ ಜತೆಗಿನ 'ಛಾವಾ' ಚಿತ್ರದ ಪೋಸ್ಟರ್ ಔಟ್
ವ್ಹೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ
ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ʼಸಿಕಂದರ್ʼ ಚಿತ್ರದಲ್ಲಿ ನಾಯಕಿಯಾಗಿರುವ ರಶ್ಮಿಕಾ ಇತ್ತೀಚೆಗೆ ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಮುಂಬೈಯಲ್ಲಿ ನಡೆದ ʼಛಾವಾʼ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಅವರು ವ್ಹೀಲ್‌ಚೇರ್‌ನಲ್ಲಿ ತೆರಳಿರುವ ವಿಡಿಯೊ ಭಾರೀ ಸದ್ದು ಮಾಡಿದೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಶ್ಮಿಕಾ ಅವರನ್ನು ನೋಡಿ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಕಾರಿನಿಂದ ಕುಂಟುತ್ತಾ ಇಳಿದ ಅವರು ಬಳಿಕ ವ್ಹೀಲ್‌ಚೇರ್‌ನಲ್ಲಿ ಕುಳಿತಿರುವ ವಿಡಿಯೊ ಸೋಶಿಯಲ್ ಮೀಡಿಯಾ ವೈರಲ್ ಆಗಿದೆ. ಕಾಲಿಗೆ ಏಟಾಗಿದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೀತಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ʼಪುಷ್ಪ 2ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ʼಛಾವಾʼ ಫೆ. 14ರಂದು ತೆರೆಗೆ ಬರಲಿದೆ.