ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಶಾಂತಿ ಕ್ರಾಂತಿ’ ರೀ-ರಿಲೀಸ್‌ ಬಗ್ಗೆ ಕೊನೆಗೂ ಸಿಕ್ತು ಕ್ಲಾರಿಟಿ; ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್‌ ಸಹೋದರ ಬಾಲಾಜಿ ಬಿಚ್ಚಿಟ್ಟ ಸತ್ಯವಿದು!

ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅಭಿನಯದ 'ಶಾಂತಿ ಕ್ರಾಂತಿ' ಸಿನಿಮಾದ ಮರುಬಿಡುಗಡೆ ಸುದ್ದಿ ಸದ್ಯ ಭಾರಿ ಚರ್ಚೆಯಲ್ಲಿದ್ದು, ಈ ಬಗ್ಗೆ ಅದರ ಹಕ್ಕುಗಳನ್ನು ಹೊಂದಿರುವ ರವಿ ಸಹೋದರ ಬಾಲಾಜಿ ವೀರಾಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ನೆಗೆಟಿವ್ಸ್‌ಗಳು ಹಾಳಾಗಿದ್ದು, ಹೊಸ ಮೂಲಗಳನ್ನು ಹುಡುಕಲಾಗುತ್ತಿದೆ. ಅದಕ್ಕೆ ಹೆಚ್ಚು ಸಮಯ ಬೇಕಾಗಲಿದೆ ಎಂದು ಹೇಳಿದ್ದಾರೆ.

ʻಕ್ರೇಜಿ ಸ್ಟಾರ್‌ʼ ರವಿಚಂದ್ರನ್‌ ಅಭಿನಯದ ʻಶಾಂತಿ ಕ್ರಾಂತಿʼ ಸಿನಿಮಾ ಸಖತ್ ಟ್ರೆಂಡಿಂಗ್‌ನಲ್ಲಿ ಇರುವುದು ಗೊತ್ತೇ ಇದೆ. ಈ ಸಿನಿಮಾವನ್ನು ಮರುಬಿಡುಗಡೆ ಮಾಡುವಂತೆ ಫ್ಯಾನ್ಸ್‌ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ರವಿಚಂದ್ರನ್‌ ಅವರು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಚಿತ್ರದ ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್‌ ಸಹೋದರ ಬಾಲಾಜಿ ವೀರಾಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮರುಬಿಡುಗಡೆ ಪ್ರಕ್ರಿಯೆಯನ್ನು ಈಗ ಶುರು ಮಾಡಿದರೂ, ಅದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಮ್ಮ ಪ್ರಯತ್ನವೂ ಶುರುವಾಗಿದೆ

"ನೀವೆಲ್ಲ 'ಶಾಂತಿ ಕ್ರಾಂತಿ' ಸಿನಿಮಾಗಾಗಿರಬಹುದು, ನಮ್ಮ ಅಣ್ಣನಿಗಾಗಿರಬಹುದು ಅಥವಾ ನಮಗಾಗಿರಬಹುದು ತೋರಿಸಿರುವ ಪ್ರೀತಿ ಅಪಾರವಾದದ್ದು. ಅದಕ್ಕೆ ನಾವು ಎಂದೆಂದಿಗೂ ಚಿರಋಣಿಯಾಗಿರುತ್ತೇವೆ. ನಿಮ್ಮ ಈ ಪ್ರೀತಿ ವ್ಯಕ್ತವಾಗಲು ಶುರುವಾದ ಎರಡು-ಮೂರು ದಿನಗಳಲ್ಲೇ ನಾನು ಮತ್ತು ನಮ್ಮ ಅಣ್ಣ 'ಶಾಂತಿ ಕ್ರಾಂತಿ' ರೀ-ರಿಲೀಸ್ ಬಗ್ಗೆ ಮಾತನಾಡಿದೆವು. ಅವತ್ತಿನಿಂದಲೇ ನಮ್ಮ ಪ್ರಯತ್ನವೂ ಶುರುವಾಗಿದೆ" ಎಂದು ಬಾಲಾಜಿ ಹೇಳಿದ್ದಾರೆ.

ರೀ-ರಿಲೀಸ್ ಮಾಡುವ ಆಸೆ ನಮ್ಮೆಲ್ಲರಿಗೂ ಇದೆ

"ನಿಮಗೆ ನಾನೊಂದು ಸ್ಪಷ್ಟನೆ ನೀಡುತ್ತೇನೆ. 'ಶಾಂತಿ ಕ್ರಾಂತಿ' ಸಿನಿಮಾದ ನೆಗೆಟಿವ್ಸ್‌ಗಳು ಹಾಳಾಗಿವೆ (ಮೆಲ್ಟ್ ಆಗಿವೆ). ಹಾಗಾಗಿ ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಅದನ್ನು ಸರಿಪಡಿಸುವುದು ತುಂಬಾ ಕಷ್ಟ. ನಾವು ಬೇರೆ ಮೂಲಗಳಿಂದ (ಸೋರ್ಸ್) ನೆಗೆಟಿವ್ಸ್‌ಗಳನ್ನು ಹುಡುಕುತ್ತಿದ್ದೇವೆ. ಅಲ್ಲಿಂದ ಏನಾದರೂ ಸಿಕ್ಕಿದರೆ ಖಂಡಿತವಾಗಿಯೂ ಅದನ್ನು ರೀ-ರಿಲೀಸ್ ಮಾಡುವ ಆಸೆ ನಮ್ಮೆಲ್ಲರಿಗೂ ಇದೆ. ಅದನ್ನು ನಿಮ್ಮ ಮುಂದೆ ತಂದುಕೊಡಬೇಕೆಂಬ ಆಸೆ ನಮಗಿದೆ" ಎಂದಿದ್ದಾರೆ ಬಾಲಾಜಿ.

1 ವರ್ಷಕ್ಕಿಂತಲೂ ಹೆಚ್ಚಿನ ಸಮಯ ಬೇಕಾಗಬಹುದು

"ನಿಮಗೆಲ್ಲಾ ಹೇಳಬೇಕಾದ ಇನ್ನೊಂದು ವಿಷಯವೆಂದರೆ... ನಾನು ನಾಳೆಯೇ ಈ ಕೆಲಸವನ್ನು ಪ್ರಾರಂಭಿಸಿದರೂ, ಅದು ಪೂರ್ಣಗೊಳ್ಳಲು 8 ರಿಂದ 10 ತಿಂಗಳು ಅಥವಾ 1 ವರ್ಷಕ್ಕಿಂತಲೂ ಹೆಚ್ಚಿನ ಸಮಯ ಬೇಕಾಗಬಹುದು. ಏಕೆಂದರೆ, ನಾವು ಮತ್ತೆ ಕಲರಿಂಗ್ ಮಾಡಬೇಕು, ಫೇಡ್ ಆಗಿರುವ ನೆಗೆಟಿವ್ಸ್‌ಗಳನ್ನು ಸರಿಪಡಿಸಬೇಕು, ಮ್ಯೂಸಿಕ್, ರೀ-ರೆಕಾರ್ಡಿಂಗ್, ಎಫೆಕ್ಟ್ಸ್, ಡಿಐ ಹಾಗೂ ಮತ್ತೆ ಸೆನ್ಸಾರ್ ಮಾಡಿಸಬೇಕಾಗುತ್ತದೆ. ಹೀಗೆ ಹತ್ತಾರು ಕೆಲಸಗಳಿವೆ" ಎಂದು ಬಾಲಾಜಿ ವೀರಾಸ್ವಾಮಿ ತಿಳಿಸಿದ್ದಾರೆ.

‘ಶಾಂತಿ ಕ್ರಾಂತಿ’ ರೀ-ರಿಲೀಸ್‌ ಮಾಡೋಕೆ ರೈಟ್ಸ್‌ ಕೇಳಲು ಹೋದವರಿಗೆ ʻಕ್ರೇಜಿ ಸ್ಟಾರ್‌ʼ ರವಿಚಂದ್ರನ್‌ ಹೇಳಿದ್ದೇನು?

ನಿಮಗೇ ತಿಳಿಸಿ ನಂತರವೇ ಮುಂದಿನ ಹೆಜ್ಜೆ ಇಡುತ್ತೇವೆ

"ಅಂದೇ ನಮ್ಮ ಅಣ್ಣ ಅದ್ಭುತವಾದ ತಾಂತ್ರಿಕ ಗುಣಮಟ್ಟದಲ್ಲಿ ಕೊಟ್ಟಂತಹ ಚಿತ್ರವಿದು. ಇವತ್ತು ನಿಮ್ಮ ಆಸೆಯಂತೆ ಅದನ್ನು ಮತ್ತೆ ನಿಮ್ಮ ಮುಂದೆ ತರಬೇಕಾದರೆ, ಅದು ಅಷ್ಟೇ ಚೆನ್ನಾಗಿರಬೇಕು. ಇಂದಿನ ಪೀಳಿಗೆಗೆ ಖುಷಿ ಕೊಡುವಂತಹ ಸೌಂಡ್ ಸಿಗಬೇಕು, ಡಾಲ್ಬಿ, ಡಿಟಿಎಸ್ ಹಾಗೂ ಅಟ್ಮಾಸ್ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಬೇಕಾಗಿದೆ" ಎಂದು ಹೇಳಿದ್ದಾರೆ.

ʻಶಾಂತಿ ಕ್ರಾಂತಿ ಬಗ್ಗೆ ನೀವು ಕೇಳಿರುವ ಆ ಮಾಹಿತಿ ಸುಳ್ಳುʼ



"ಇನ್ನೊಂದು ಸ್ಪಷ್ಟನೆ ಏನೆಂದರೆ, ತುಂಬಾ ಮಾಧ್ಯಮಗಳು, ಅಭಿಮಾನಿಗಳು ಹಾಗೂ ಕಲಾಭಿಮಾನಿಗಳು ನಮಗೆ ಕರೆ ಮಾಡಿ 'ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೀರಾ?' ಎಂದು ಕೇಳುತ್ತಿದ್ದಾರೆ. ಅದೆಲ್ಲವೂ ಸುಳ್ಳು, ಸದ್ಯಕ್ಕಂತೂ ಅದು ನಮ್ಮ ಕೈಯಲ್ಲಾಗುವುದಿಲ್ಲ. ಆ ಸಿನಿಮಾದ ಮೂಲ ಪ್ರತಿಗಳನ್ನು (ಸೋರ್ಸ್) ಹುಡುಕುತ್ತಿದ್ದೇವೆ, ಅದು ಸಿಕ್ಕ ತಕ್ಷಣವೇ ಕೆಲಸ ಶುರು ಮಾಡುತ್ತೇವೆ. ಪ್ರತಿಯೊಂದನ್ನೂ ನಿಮಗೇ ತಿಳಿಸಿ ನಂತರವೇ ಮುಂದಿನ ಹೆಜ್ಜೆ ಇಡುತ್ತೇವೆ" ಎಂದು ಬಾಲಾಜಿ ತಿಳಿಸಿದ್ದಾರೆ.