ನಟ ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ‘ರಂಗಸ್ಥಲಂ’ ಹಾಗೂ ‘ಪುಷ್ಪ’ ಖ್ಯಾತಿಯ ನಿರ್ದೇಶಕ ಸುಕುಮಾರ್ ಜೊತೆಗೆ ರಾಮ್ ಚರಣ್ ಮತ್ತೊಮ್ಮೆ ಕೈಜೋಡಿಸಿದ್ದು, ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ‘ಆರ್ಸಿ 17’ ಅಧಿಕೃತವಾಗಿ ಆರಂಭವಾಗಿದೆ. ನವೆಂಬರ್ 1 ರಂದು ಹೈದರಾಬಾದ್ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.
ಚಿತ್ರರಂಗದ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭಕ್ಕೆ ರಾಮ್ ಚರಣ್ ತಂದೆ, ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿ, ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು. ರಾಮ್ ಚರಣ್ ಅವರಿಗೆ ನಡೆದ ಶಸ್ತ್ರಚಿಕಿತ್ಸೆಯ ಕಾರಣದಿಂದ ಈ ಚಿತ್ರದ ಆರಂಭ ಸ್ವಲ್ಪ ತಡವಾಗಿತ್ತಾದರೂ, ಅಂತಿಮವಾಗಿ ಸಿನಿಮಾ ಸೆಟ್ಟೇರಿರುವುದು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ತಂದಿದೆ. ಶೀಘ್ರದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಮುಗಿಲು ಮುಟ್ಟಿದೆ ನಿರೀಕ್ಷೆ
‘ರಂಗಸ್ಥಲಂ’ ಸಿನಿಮಾದ ‘ಚಿಟ್ಟಿಬಾಬು’ ಪಾತ್ರದಲ್ಲಿ ರಾಮ್ ಚರಣ್ ನೀಡಿದ್ದ ಅಭಿನಯ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಂತಹ ಕಲ್ಟ್ ಕಾಂಬಿನೇಷನ್ ಇದೀಗ ಮತ್ತೆ ಒಂದಾಗಿರುವುದರಿಂದ ನಿರೀಕ್ಷೆ ಮುಗಿಲು ಮುಟ್ಟಿದೆ. ಸುಕುಮಾರ್ ತಮ್ಮದೇ ಶೈಲಿಯ ಎಮೋಷನಲ್ ಟ್ವಿಸ್ಟ್ & ಟರ್ನ್ ಇರುವಂತಹ ಬಿಗಿಯಾದ ಸ್ಕ್ರಿಪ್ಟ್ ಬರೆದಿರುತ್ತಾರೆ ಎಂಬ ನಂಬಿಕೆ ಸಿನಿಪ್ರಿಯರಿಗೆ ಇದೆ. ರಾಮ್ ಚರಣ್ ಅವರನ್ನು ಈ ಹಿಂದೆಂದೂ ಕಾಣದ ಭಿನ್ನ ಲುಕ್ನಲ್ಲಿ ತೋರಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಅನಿರುದ್ಧ್ ಸಂಗೀತ ನಿರ್ದೇಶನ
ಈ ಸಿನಿಮಾದ ಮುಹೂರ್ತಕ್ಕೂ ಕೆಲವೇ ಗಂಟೆಗಳ ಮುನ್ನ ನಿರ್ದೇಶಕ ಸುಕುಮಾರ್ ಪತ್ನಿ ತಬಿತಾ ಹಂಚಿಕೊಂಡ ವಿಶೇಷ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಕಥೆಗಾಗಿ ಸುಕುಮಾರ್ ಪಟ್ಟ ಪರಿಶ್ರಮ ಮತ್ತು ಬದ್ಧತೆಯನ್ನು ನೆನಪಿಸಿಕೊಂಡಿರುವ ಅವರು, ಆ ಕನಸು ಇಂದು ತೆರೆಯ ಮೇಲೆ ದೃಶ್ಯರೂಪ ಪಡೆಯುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹಂಚಿಕೊಂಡ ವಿಡಿಯೋದಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್ ಬಳಸಲಾಗಿದ್ದು, RC 17 ಚಿತ್ರಕ್ಕೆ ಅವರೇ ಸಂಗೀತ ನೀಡಲಿದ್ದಾರೆ ಎಂಬ ವಿಚಾರ ಪರೋಕ್ಷವಾಗಿ ಫೈನಲ್ ಆದಂತಿದೆ.
ಗಮನಸೆಳೆದ ಫಸ್ಟ್ಲುಕ್
ಚಿತ್ರದ ಅಧಿಕೃತ ಅನೌನ್ಸ್ಮೆಂಟ್ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಅದ್ಭುತ ಕಲಾತ್ಮಕ ವಿನ್ಯಾಸದಿಂದ ಎಲ್ಲರ ಗಮನ ಸೆಳೆಯುತ್ತಿದೆ. ನೀಲಿ, ಹಸಿರು ಮತ್ತು ಚಿನ್ನದ ಬಣ್ಣಗಳಿಂದ ಕೂಡಿದ ನವಿಲುಗರಿಯ ಕಲಾಕೃತಿಯಲ್ಲೇ ರಾಮ್ ಚರಣ್ ಅವರ ಮುಖವನ್ನು ಚಿತ್ರಿಸಲಾಗಿದ್ದು, ಪೋಸ್ಟರ್ನಲ್ಲಿರುವ You Can Imagine ಎಂಬ ಟ್ಯಾಗ್ಲೈನ್ ಸಿನಿಮಾ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ಮೈತ್ರಿ ಮೂವಿ ಮೇಕರ್ಸ್ ಲಾಂಛನದಲ್ಲಿ ನಿರ್ಮಾಪಕರಾದ ನವೀನ್ ಯೆರ್ನೇನಿ, ವೈ. ರವಿಶಂಕರ್, ಸುಕುಮಾರ್ ರೈಟಿಂಗ್ಸ್ನ ವಿಜಯ ಪ್ರಸಾದ್ ಬಂಡ್ರೆಡ್ಡಿ ಮತ್ತು ಟಿ-ಸೀರೀಸ್ನ ಭೂಷಣ್ ಕುಮಾರ್ ಅವರು ಈ ಚಿತ್ರವನ್ನು ಅದ್ದೂರಿ ಬಜೆಟ್ನಲ್ಲಿ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದ ಉಳಿದ ಪ್ರಮುಖ ತಾರಾಗಣ ಹಾಗೂ ತಾಂತ್ರಿಕ ಬಳಗದ ವಿವರಗಳನ್ನು ಶೀಘ್ರದಲ್ಲೇ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.