ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಕಂಟ್ರಿ ಮೇಡ್ - ಭಾಗ 2' ಚಿತ್ರದ ಟೈಟಲ್‌ ಲಾಂಚ್‌ ಮಾಡಿದ ʻರಿಯಲ್ ಸ್ಟಾರ್ʼ ಉಪೇಂದ್ರ; ನಿರ್ದೇಶಕ ಅರವಿಂದ್ ಕೌಶಿಕ್ ಸಿನಿಮಾಗೆ ಉಪ್ಪಿ ಸಾಥ್!

Country Made - Part 2: ಸ್ಯಾಂಡಲ್‌ವುಡ್‌ ನಿರ್ದೇಶಕ ಅರವಿಂದ್ ಕೌಶಿಕ್ ಅವರ 'ಕಂಟ್ರಿ ಮೇಡ್ - ಭಾಗ 2' ಚಿತ್ರದ ಶೀರ್ಷಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಬಿಡುಗಡೆ ಮಾಡಿದ್ದಾರೆ. 'ಪೆಂಡಾಲ್ಪುರ' ಎಂಬ ಕಾಲ್ಪನಿಕ ಊರಿನ ಹಿನ್ನೆಲೆಯಲ್ಲಿ ನಡೆಯುವ ಈ ಸಿನಿಮಾ, ಮನುಷ್ಯನ ರಾಕ್ಷಸ ಪ್ರವೃತ್ತಿ ಮತ್ತು ಹಿಂಸೆಯ ಕರಾಳ ಮುಖವನ್ನು ಅನಾವರಣಗೊಳಿಸಲಿದೆಯಂತೆ.

ಸ್ಯಾಂಡಲ್‌ವುಡ್‌ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ʻಕಂಟ್ರಿ ಮೇಡ್‌ - ಭಾಗ 2ʼಚಿತ್ರದ ಶೀರ್ಷಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚೆಗೆ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. “ನಮ್ಮೂರಲ್ಲಿ ನೊಣಗಳು ಜಾಸ್ತಿ ಯಾಕೆ ಅಂದ್ರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ” ಎಂಬ ವಿಭಿನ್ನ ಹಾಗೂ ಕುತೂಹಲಕಾರಿ ಸಂಭಾಷಣೆಯೊಂದಿಗೆ ಚಿತ್ರತಂಡ ಪ್ರಚಾರ ಆರಂಭಿಸಿದೆ.

'ಪೆಂಡಾಲ್ಪುರ' ಎಂಬ ಕಾಲ್ಪನಿಕ ಊರು

ದೊಡ್ಡ ಬಜೆಟ್, ತಾರಾಗಣ ಅಥವಾ ತಾಂತ್ರಿಕ ಅದ್ದೂರಿತನಗಳಿಗಿಂತ ಹೆಚ್ಚಾಗಿ ಕಂಟೆಂಟ್ ಮೇಲೆ 'ಕಂಟ್ರಿ ಮೇಡ್' ಸಿನಿಮಾ ಗಮನ ಹರಿಸಲಿದೆಯಂತೆ. ಮನುಷ್ಯನ ಮನಸ್ಸಿನ ರಾಕ್ಷಸ ಪ್ರವೃತ್ತಿ ಮತ್ತು ಭಾವನೆಗಳ ತಲ್ಲಣವನ್ನು ಬಿಂಬಿಸುವ ವಿಶಿಷ್ಟ ಕಥಾಹಂದರವನ್ನು ಈ ಸಿನಿಮಾ ಹೊಂದಿದೆಯಂತೆ ನಿರ್ದೇಶಕ ಅರವಿಂದ್ ಕೌಶಿಕ್ ಅವರು 'ಪೆಂಡಾಲ್ಪುರ' ಎಂಬ ಕಾಲ್ಪನಿಕ ಊರನ್ನು ಸೃಷ್ಟಿಸಿ, ಅಲ್ಲಿ ದೈವ ಮತ್ತು ದೈತ್ಯರ ನಡುವಿನ ಒಪ್ಪಂದಗಳ ಕುರಿತಾದ ಹಿಂಸೆ ಹಾಗೂ ಭಾವನೆಗಳ ಸಮ್ಮಿಶ್ರಣವನ್ನು ತೆರೆಯ ಮೇಲೆ ತರುತ್ತಿದ್ದಾರೆ.

Raktha Kashmira Movie: ಉಪೇಂದ್ರ-ರಮ್ಯಾ ಕಾಂಬಿನೇಷನ್‌ನಲ್ಲಿ ಶೀಘ್ರವೇ ತೆರೆಗೆ ಬರಲಿದೆ ‘ರಕ್ತ ಕಾಶ್ಮೀರ’

"ಪುರುಷರು ತಮ್ಮ ರಕ್ತಸಿಕ್ತ ಯುದ್ಧಗಳನ್ನು ನಡೆಸಿದಾಗ, ಅದರ ಗಾಯದ ಗುರುತುಗಳನ್ನು ಹೊರಬೇಕಾದವರು ಹೆಣ್ಣುಮಕ್ಕಳು" ಎನ್ನುತ್ತಾ ಅರವಿಂದ್ ಕೌಶಿಕ್ ಅವರು ಈ ಬಾರಿ ಹಗೆತನ ಮತ್ತು ಹಿಂಸೆ ಹೇಗೆ ಅನೇಕ ಜೀವನಗಳನ್ನು ನಾಶಪಡಿಸುತ್ತವೆ ಎಂಬುದನ್ನು ಹೇಳಲಿದ್ದಾರಂತೆ. "ವಿಭಿನ್ನ ನಿರೂಪಣಾ ಶೈಲಿ ಮತ್ತು ಸಿನಿಮಾ ಮುಗಿದ ನಂತರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವ ಮರೆಯಲಾಗದ ಪಾತ್ರಗಳು. ಅತ್ಯಂತ ಉತ್ಸಾಹಿ ಮತ್ತು ಭಾವನಾತ್ಮಕ ತಂಡದ ಬೆಂಬಲದೊಂದಿಗೆ ಮೂಡಿಬರುತ್ತಿರುವ ಈ ಚಿತ್ರವು, ಮುಂಬರುವ ವರ್ಷಗಳಲ್ಲಿ ಸಿನಿಮಾ ಚರ್ಚೆಗಳ ಒಂದು ಶಾಶ್ವತ ಭಾಗವಾಗುವ ಗುರಿಯನ್ನು ಹೊಂದಿದೆ" ಎನ್ನುವುದು ಚಿತ್ರತಂಡದ ಮಾತು.

ಉಪೇಂದ್ರ ಮಗನ ಆಯುಷ್ ಮೊದಲ ಚಿತ್ರಕ್ಕೆ ಕಾಶ್ಮೀರದಲ್ಲಿ ಮುಹೂರ್ತ;‌ 25 ದಿನಗಳ ಶೂಟಿಂಗ್ ಮುಕ್ತಾಯ

ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?

ʻಕಂಟ್ರಿ ಮೇಡ್‌ - ಭಾಗ 2ʼ ಚಿತ್ರದಲ್ಲಿ ಅಭಿಲಾಷ್ ದ್ವಾರಕೀಶ್, ರಾಘವ ರಾಮ್, ಪ್ರದೀಪ್ ರೋಷನ್, ಕುಲದೀಪಕ, ಗೌರವ್ ಆರ್ಯನ್, ಅಶ್ವಿತ ಗೌಡ, ಅಪೂರ್ವ ಶ್ರೀ ಮತ್ತು ಸುಧಾ ಪ್ರಸನ್ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಸೂರ್ಯ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ರಾಮು ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಈ ಸಿನಿಮಾವನ್ನು ಉಮೇಶ್ ಮಠಪತಿ, ಸೂರ್ಯ, ಅರವಿಂದ್ ಕೌಶಿಕ್ ಹಾಗೂ ಚಂದನ್ ಗೌಡ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂತೋಷ್ ರಾಧಾಕೃಷ್ಣನ್ ವಿಎಫ್‌ಎಕ್ಸ್ ಮತ್ತು ಪೋಸ್ಟರ್‌ಗಳ ಜವಾಬ್ದಾರಿ ಹೊತ್ತಿದ್ದಾರೆ. ಸತೀಶ್ ಬ್ರಹ್ಮಾವರ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಪ್ರಸ್ತುತ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ. ತಾಜಾ ನಿರೂಪಣೆ ಮತ್ತು ಜನಮಾನಸದಲ್ಲಿ ಉಳಿಯುವ ಪಾತ್ರಗಳ ಮೂಲಕ ʻಕಂಟ್ರಿ ಮೇಡ್‌ - ಭಾಗ 2ʼ ಸಿನಿಮಾವು ಚಿತ್ರಪ್ರೇಮಿಗಳ ಮನಸ್ಸಲ್ಲಿ ಜಾಗ ಪಡೆಯಲಿದೆ ಎಂಬುದು ಚಿತ್ರತಂಡದ ಮಾತು.