ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾಫಿ ಸಾಕ್ಷಿ ಪ್ರದೋಷ್‌ಗೆ ಮಧ್ಯಂತರ ಜಾಮೀನು ನೀಡದಂತೆ ನಟ ದರ್ಶನ್‌ ಪರ ವಕೀಲರ ಖಡಕ್‌ ವಾದ; ಕೋರ್ಟ್‌ನಲ್ಲಿ ಹೇಗಿತ್ತು ವಾದ?

ನಟ ದರ್ಶನ್‌ ಪರ ಹಿರಿಯ ವಕೀಲ ಹಷ್ಮತ್ ಪಾಷಾ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಗೆ ಕೋರ್ಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಂದೆಯ ಪಿತೃಕಾರ್ಯದ ನೆಪದಲ್ಲಿ ಹೊರಬಂದರೆ ಸಾಕ್ಷ್ಯ ತಿರುಚುವ ಅಪಾಯವಿದೆ ಎಂದು ವಾದಿಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಪ್ರೂವರ್ ಆಗಿರುವ ಆರೋಪಿ ಪ್ರದೋಷ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಗೆ ನಟ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಂದೆಯ ವಾರ್ಷಿಕ ಪಿತೃಕಾರ್ಯ ನೆರವೇರಿಸಲು ಜಾಮೀನು ಕೋರಿರುವ ಪ್ರದೋಷ್ ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಮಂಗಳವಾರ ಸುದೀರ್ಘ ಹಾಗೂ ತೀವ್ರ ವಾದ-ಪ್ರತಿವಾದಗಳು ನಡೆದಿವೆ.

ಒಂದು ದಿನ ಮಟ್ಟಿಗೂ ಜಾಮೀನು ನೀಡಬಾರದು!

ನ್ಯಾಯಾಲಯದಲ್ಲಿ ವಾದ ಮಂಡಿಸಿದ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ, "ಪ್ರದೋಷ್ ಮೇಲೆ ಈಗಾಗಲೇ ಒತ್ತಡ ಹಾಗೂ ಪ್ರಭಾವ ಬೀರಲಾಗಿದೆ ಎಂಬ ಆರೋಪ ನಮ್ಮ ಮೇಲಿದೆ. ಪ್ರದೋಷ್ ಅವರ ಕ್ರಾಸ್ ಎಕ್ಸಾಮಿನೇಷನ್ ಇನ್ನೂ ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಆತನಿಗೆ ಒಂದು ದಿನದ ಮಟ್ಟಿಗೂ ಮಧ್ಯಂತರ ಜಾಮೀನು ನೀಡಬಾರದು. ಹೊರಗೆ ಬಿಟ್ಟರೆ ಮತ್ತೆ ಆತನಿಗೆ ತನಿಖಾಧಿಕಾರಿಗಳು ಅಥವಾ ಇತರರು ಹೇಳಿಕೊಡುವ ಸಾಧ್ಯತೆ ಇರುತ್ತದೆ. ಪ್ರದೋಷ್ ಯಾರಿಗೂ ಸಂಪರ್ಕಕ್ಕೆ ಸಿಗಬಾರದು ಎಂಬ ಕಾರಣಕ್ಕಾಗಿಯೇ ಜೈಲಿನಲ್ಲಿ ಇರಿಸಲಾಗಿದೆ. ಈಗ ಜಾಮೀನು ನೀಡಿ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸಿದರೆ ಈ ಹಿಂದೆ ನ್ಯಾಯಾಲಯ ವಿಧಿಸಿದ್ದ ಕಠಿಣ ಷರತ್ತುಗಳೇ ವ್ಯರ್ಥವಾಗುತ್ತವೆ" ಎಂದು ವಾದಿಸಿದರು.

ಮಾಫಿ ಸಾಕ್ಷಿಗೆ ಜಾಮೀನು?

"ಜಾಮೀನು ನೀಡುವುದು ಆರೋಪಿಗಳಿಗೇ ಹೊರತು ಮಾಫಿ ಸಾಕ್ಷಿಗಲ್ಲ. ಕಾನೂನಿನಲ್ಲಿ ಮಾಫಿ ಸಾಕ್ಷಿಯಾದವರಿಗೆ ಜಾಮೀನು ನೀಡಲು ಅವಕಾಶವಿಲ್ಲ. ಮಾನವೀಯತೆಯ ಆಧಾರದಲ್ಲೂ ಈ ರಿಲೀಫ್ ನೀಡಲು ಸಾಧ್ಯವಿಲ್ಲ ಹಾಗೂ ಈ ಬಗ್ಗೆ ಆದೇಶ ಹೊರಡಿಸಲು ನ್ಯಾಯಾಲಯಕ್ಕೂ ಅಧಿಕಾರ ವ್ಯಾಪ್ತಿಯಿಲ್ಲ. ಒಂದು ವೇಳೆ ಪ್ರದೋಷ್‌ಗೆ ಜಾಮೀನು ನೀಡಿದರೆ ಅದು ಇತರ ಆರೋಪಿಗಳಿಗೂ ಮೇಲ್ಪಂಕ್ತಿಯಾಗಲಿದೆ. ಸಂಬಂಧಿಕರು ಮೃತಪಟ್ಟಿದ್ದಾರೆ ಅಥವಾ ಕಾರ್ಯಗಳಿವೆ ಎಂದು ನಾಳೆ ಇತರ ಆರೋಪಿಗಳೂ ಅರ್ಜಿ ಹಿಡಿದು ಬರುತ್ತಾರೆ. ಹೀಗಾಗಿ ಕ್ರಾಸ್ ಎಕ್ಸಾಮಿನೇಷನ್ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಪ್ರದೋಷ್‌ನನ್ನು ಹೊರಗೆ ಬಿಡಬಾರದು" ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ನಟ ಧನ್ವೀರ್‌ ವಿರುದ್ಧ ದೂರು ದಾಖಲಿಸಿದ ವಿಜಯಲಕ್ಷ್ಮೀ ದರ್ಶನ್‌ ಮ್ಯಾನೇಜರ್;‌ ‘ಮುಖವಾಡ ಕಳಚುವ ಕಾಲ ಬಂದಿದೆ’ ಎಂದು ಗುಡುಗಿದ ಶೋಕ್ದಾರ್!

ನಮ್ಮ ಗಮನಕ್ಕೆ ಬಾರದೇ ಅರ್ಜಿ

ಇದೇ ವೇಳೆ ಅರ್ಜಿಯ ಪ್ರಕ್ರಿಯೆಯ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದರ್ಶನ್ ಪರ ವಕೀಲರು, "ಪ್ರದೋಷ್ ಪರ ವಕೀಲರು ನಮ್ಮ ಗಮನಕ್ಕೇ ತರದೆ ಏಕಾಏಕಿ ಈ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಪ್ರದೋಷ್ ಅರ್ಜಿಗೆ ಎಸ್‌ಪಿಪಿ ಲಿಖಿತ ರೂಪದ ಆಕ್ಷೇಪಣೆ ಸಲ್ಲಿಸಬೇಕಿತ್ತು. ಅವರು ಖುದ್ದಾಗಿ ಹಾಜರಿದ್ದು ವಾದ ಮಂಡಿಸಬೇಕಿತ್ತು" ಎಂದು ಆಕ್ಷೇಪಿಸಿದರು.

ಪಿತೃಕಾರ್ಯಕ್ಕೆ ಅವಕಾಶ ಕೊಡಿ ಎಂದ ಪ್ರದೋಷ್ ಪರ ವಕೀಲರು

ಇದಕ್ಕೆ ಪ್ರತಿಯಾಗಿ ವಾದಿಸಿದ ಪ್ರದೋಷ್ ಪರ ವಕೀಲರು, "ಈ ಹಿಂದೆ ಪ್ರದೋಷ್ ಅವರ ತಂದೆ ನಿಧನರಾದ ಸಂದರ್ಭದಲ್ಲೂ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದೀಗ ತಂದೆಯ ಮೊದಲ ವರ್ಷದ ವಾರ್ಷಿಕ ಪಿತೃಕಾರ್ಯವನ್ನು ಮಗನಾಗಿ ನೆರವೇರಿಸಬೇಕಾದ ಕರ್ತವ್ಯವಿದೆ. ಹೀಗಾಗಿ ಕೆಲವೇ ದಿನಗಳ ಮಟ್ಟಿಗೆ ಮಧ್ಯಂತರ ಜಾಮೀನು ನೀಡಬೇಕು. ಈ ಅರ್ಜಿಯನ್ನು ವಿರೋಧಿಸಲು ಆರೋಪಿ ದರ್ಶನ್‌ಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ" ಎಂದು ಪ್ರತಿಪಾದಿಸಿದರು.

ವಿಚಾರಣೆ ಅಕ್ಟೋಬರ್ 28ಕ್ಕೆ ಮುಂದೂಡಿಕೆ

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯದಲ್ಲಿ ವಿಶೇಷ ಅಭಿಯೋಜಕರು ಗೈರಾಗಿದ್ದ ವಿಚಾರ ಪ್ರಸ್ತಾಪವಾಯಿತು. ಈ ವೇಳೆ ಹಾಜರಿದ್ದ ಸಹಾಯಕ ಎಸ್‌ಪಿಪಿ ಸಚಿನ್ ಅವರು, "ಎಸ್‌ಪಿಪಿ ಅವರಿಗೆ ಅನಾರೋಗ್ಯದ ಕಾರಣ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ ವಾದ ಮಂಡನೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು" ಎಂದು ಕೋರಿದರು. ಈ ಮನವಿಯನ್ನು ಪುರಸ್ಕರಿಸಿದ 59ನೇ ಸಿಸಿಹೆಚ್ ನ್ಯಾಯಾಲಯವು ಮಧ್ಯಂತರ ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.