ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ನ್ಯಾಯಾಲಯದ ವಿಚಾರಣೆಯ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ನಡೆದ ಆಪ್ತ ಮಾತುಕತೆಯ ವಿವರಗಳು ಇದೀಗ ಬಹಿರಂಗವಾಗಿವೆ.
ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಪುನೀತ್ಗೆ ಕ್ರಾಸ್ ಎಕ್ಸಾಮಿನೇಷನ್ ನಡೆಯುತ್ತಿದ್ದ ವೇಳೆ, ವಿಡಿಯೋ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿದ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸ್ವಲ್ಪ ದಿನ ತಾಳ್ಮೆಯಿಂದಿರು; ಪವಿತ್ರಾಗೆ ದಚ್ಚು ಸಲಹೆ
ಈ ವೇಳೆ ದರ್ಶನ್ ಜೊತೆಗೆ ಜೈಲಿನಲ್ಲಿರುವ ಇತರೆ ಆರೋಪಿಗಳು ಅಲ್ಲಿಂದ ಹೊರಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಜೈಲುವಾಸದ ಯಾತನೆಯಿಂದ ಕಂಗೆಟ್ಟಿರುವ ಪವಿತ್ರಾ ಗೌಡ, ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಅವರನ್ನು ಮಾತನಾಡಿಸುತ್ತಾ, "ಇಲ್ಲಿ ನನಗೆ ಬಹಳ ಸಮಸ್ಯೆಯಾಗುತ್ತಿದೆ, ನರಕ ಅನುಭವಿಸುವಂತಾಗಿದೆ. ಇನ್ನೂ ಎಷ್ಟು ದಿನ ಹೀಗೆಯೇ ಇರಬೇಕು?" ಎಂದು ತೀವ್ರ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, "ಇಲ್ಲಿ ನಮಗೂ ಸಮಸ್ಯೆಗಳಿವೆ, ಆದರೆ ಈಗ ಏನೂ ಮಾಡಲು ಸಾಧ್ಯವಿಲ್ಲ. ಇನ್ನೂ ಕನಿಷ್ಠ ನಾಲ್ಕು ತಿಂಗಳಾದರೂ ಹೀಗೆಯೇ ಇರಬೇಕಾಗಬಹುದು. ಸ್ವಲ್ಪ ದಿನ ತಾಳ್ಮೆಯಿಂದಿರು, ಮನಸ್ಸು ಮತ್ತು ಹೃದಯವನ್ನು ಗಟ್ಟಿ ಮಾಡಿಕೋ" ಎಂದು ಸಮಾಧಾನಪಡಿಸಿದ್ದಾರೆ.
ಜಡ್ಜ್ ಬದಲಾಗುತ್ತಾರೆ ಎಂದ್ರಾ ದರ್ಶನ್?
ಅಲ್ಲದೆ, "ಇನ್ನು ನಾಲ್ಕು ತಿಂಗಳು ಕಳೆದರೆ ನ್ಯಾಯಾಧೀಶರು ಬದಲಾಗುತ್ತಾರೆ, ಆ ಬಳಿಕ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸೋಣ" ಎಂದು ದರ್ಶನ್ ಭರವಸೆಯ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪವಿತ್ರಾ ಗೌಡ ಅವರು ದರ್ಶನ್ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿಚಾರಿಸಿದ್ದಾರೆ.
Actor Darshan: ಜೈಲಿನಲ್ಲಿ ನಟ ದರ್ಶನ್ಗೆ ಬೆನ್ನು ನೋವು; ಫಿಸಿಯೋಥೆರಪಿ ಚಿಕಿತ್ಸೆ ಆರಂಭ
ಬೆನ್ನು ನೋವಿನ ಬಗ್ಗೆ ವಿಚಾರಿಸಿದ ಪವಿತ್ರಾ
"ಊಟ ಆಯ್ತಾ? ನಿಮ್ಮ ಬೆನ್ನು ನೋವು ಈಗ ಹೇಗಿದೆ?" ಎಂದು ಪವಿತ್ರಾ ಪ್ರಶ್ನಿಸಿದಾಗ, ದರ್ಶನ್ ಅವರು ತಮ್ಮ ಬೆನ್ನು ಮುರಿದುಹೋಗಿದೆ ಎಂಬಂತೆ ಕೈಸನ್ನೆ ಮಾಡಿ ನೋವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುತ್ತಾ, ಸದ್ಯಕ್ಕೆ ಒಂದು ಸೆಷನ್ ಫಿಸಿಯೋಥೆರಪಿ ಆಗಿದೆ ಎಂದು ತಿಳಿಸಿದ್ದಾರೆ. ಬಳಿಕ ದರ್ಶನ್ ಕೂಡ ಪವಿತ್ರಾ ಅವರಿಗೆ "ಊಟ ಆಯ್ತಾ?" ಎಂದು ವಿಚಾರಿಸಿದ್ದಾರೆ. ಹೀಗೆ ಇಬ್ಬರೂ ಪರಸ್ಪರ ನೋವು ಹಂಚಿಕೊಳ್ಳುತ್ತಿದ್ದಂತೆಯೇ ಮತ್ತೆ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಸಕ್ರಿಯಗೊಂಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ದರ್ಶನ್ ಮತ್ತು ಪವಿತ್ರಾ ಗೌಡ ತಮ್ಮ ಮಾತುಕತೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.