ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೇಣುಕಾಸ್ವಾಮಿ ಕೊಲೆ ಕೇಸ್: ʻನೂರಕ್ಕೆ ನೂರರಷ್ಟು ಸತ್ಯ ಹೇಳುವೆʼ ಎಂದ ಆರೋಪಿ ಪ್ರದೋಷ್; ನಟ ದರ್ಶನ್‌ಗೆ ಹೆಚ್ಚಿತು ಸಂಕಷ್ಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನಟ ದರ್ಶನ್‌ಗೆ ಕಾನೂನು ಸಂಕಷ್ಟ ಹೆಚ್ಚಿಸಿದೆ. 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಯಾರ ಒತ್ತಡವೂ ಇಲ್ಲದೆ ಸತ್ಯಾಂಶ ಬಹಿರಂಗಪಡಿಸುವುದಾಗಿ ಪ್ರದೋಷ್ ಸ್ಪಷ್ಟಪಡಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ತೀವ್ರ ಕುತೂಹಲಕಾರಿ ಘಟ್ಟ ತಲುಪಿದೆ. ಪ್ರಕರಣದ ಎ-14 ಆರೋಪಿ ಪ್ರದೋಷ್ ತಾನು ‘ಅಪ್ರೂವರ್’ (ಮಾಫಿ ಸಾಕ್ಷಿ) ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಬೆಳವಣಿಗೆ ನಟ ದರ್ಶನ್ ಸೇರಿದಂತೆ ಇತರ ಪ್ರಮುಖ ಆರೋಪಿಗಳಿಗೆ ಭಾರೀ ಕಾನೂನು ಸಂಕಷ್ಟ ತಂದಿಡುವ ಸಾಧ್ಯತೆ ದಟ್ಟವಾಗಿದೆ.

ಅರ್ಜಿಯ ವಿವರ ತಿಳಿದೇ ಸಹಿ ಮಾಡಿದ್ದೇನೆ: ಪ್ರದೋಷ್

ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರ ನೇತೃತ್ವದಲ್ಲಿ ನಡೆದ ವಿಚಾರಣೆ ವೇಳೆ, ಪ್ರದೋಷ್‌ನನ್ನು ನ್ಯಾಯಾಲಯ ತೀವ್ರ ವಿಚಾರಣೆಗೆ ಒಳಪಡಿಸಿತು. ಅರ್ಜಿಯ ಗಂಭೀರತೆ ಮತ್ತು ಅದರಲ್ಲಿರುವ ಅಂಶಗಳ ಕುರಿತು ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರದೋಷ್, "ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಓದಿ, ಅರ್ಥಮಾಡಿಕೊಂಡೇ ಸಹಿ ಹಾಕಿದ್ದೇನೆ. ರೇಣುಕಾಸ್ವಾಮಿ ಹತ್ಯೆ ನಡೆದ ಸಂದರ್ಭದಲ್ಲಿ ನನ್ನ ಪಾತ್ರವೇನು ಹಾಗೂ ಇತರೆ ಆರೋಪಿಗಳು ಏನೆಲ್ಲಾ ಪಾತ್ರ ವಹಿಸಿದ್ದರು ಎಂಬುದನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದೇನೆ" ಎಂದು ಕೋರ್ಟ್‌ಗೆ ಹೇಳಿಕೆ ನೀಡಿದ್ದಾನೆ.

ಯಾರದ್ದೂ ಒತ್ತಡವಿಲ್ಲ, ಸಂಪೂರ್ಣ ಸತ್ಯ ಹೇಳುವೆ

ಯಾರದ್ದಾದರೂ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೀರಾ ಮತ್ತು ನ್ಯಾಯಾಲಯಕ್ಕೆ ಸತ್ಯವನ್ನೇ ತಿಳಿಸುತ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪ್ರದೋಷ್, "ನನ್ನ ಮೇಲೆ ಯಾರದ್ದೇ ಪ್ರಭಾವ ಅಥವಾ ಒತ್ತಡವಿಲ್ಲ. ಸ್ವಯಂಪ್ರೇರಿತನಾಗಿ ಈ ಅರ್ಜಿ ಸಲ್ಲಿಸುತ್ತಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸತ್ಯ ಸಂಗತಿಗಳನ್ನು ನ್ಯಾಯಾಲಯದ ಮುಂದೆ ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ" ಎಂದು ಹೇಳಿಕೆ ನೀಡಿದ್ದಾನೆ.

Vijayalakshmi Darshan: ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಪ್ರಕರಣ; 4ನೇ ಆರೋಪಿಗೆ ಜಾಮೀನು ಮಂಜೂರು

ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ ಎಂದ ಪೊಲೀಸರು

ವಿಚಾರಣೆ ವೇಳೆ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಪ್ರದೋಷ್ ಕ್ರಿಮಿನಲ್‌ ಹಿನ್ನೆಲೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರದೋಷ್ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಹಾಗೂ ಜೈಲಿನಲ್ಲಿ ಆತನ ನಡವಳಿಕೆ ಉತ್ತಮವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಇದೇ ವೇಳೆ ತನ್ನ ವಿದ್ಯಾಭ್ಯಾಸದ ಕುರಿತು ಪ್ರತಿಕ್ರಿಯಿಸಿದ ಪ್ರದೋಷ್, "ನಾನು ಎಂಬಿಎ (ಫೈನಾನ್ಸ್) ಪದವೀಧರನಾಗಿದ್ದು, ಉತ್ತಮ ಇಂಗ್ಲಿಷ್ ಜ್ಞಾನ ಹೊಂದಿದ್ದೇನೆ. ಈ ಘಟನೆಗೂ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೆ" ಎಂದು ಕೋರ್ಟ್‌ಗೆ ವಿವರಿಸಿದ್ದಾನೆ.

Actor Darshan: ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ

ಆಗಸ್ಟ್ 24ಕ್ಕೆ ವಿಚಾರಣೆ ಮುಂದೂಡಿಕೆ

ಆರೋಪಿ ಪ್ರದೋಷ್ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ 59ನೇ ಸಿಸಿಎಚ್ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿದೆ. ಪ್ರದೋಷ್‌ನನ್ನು ಅಧಿಕೃತವಾಗಿ 'ಅಪ್ರೂವರ್' ಆಗಿ ಪರಿಗಣಿಸುವ ಕುರಿತು ಅಂದು ನ್ಯಾಯಾಲಯ ಅಂತಿಮ ಆದೇಶ ಪ್ರಕಟಿಸುವ ನಿರೀಕ್ಷೆಯಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾದರೆ, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಈ ಪ್ರಕರಣದಲ್ಲಿ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.