ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ದರ್ಶನ್‌ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲ; ಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಆರಂಭ!

Darshan Case: ನಟ ದರ್ಶನ್‌ಗೆ ಸದ್ಯಕ್ಕಂತೂ ಸಂಕಷ್ಟಗಳು ಕಮ್ಮಿ ಆಗುವಂತೆ ಕಾಣುತ್ತಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ದರ್ಶನ್‌ ಸಲ್ಲಿಸಿದ್ದ ತುರ್ತು ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ. ಇನ್ನು, ಮುಚ್ಚಿದ ಕೊಠಡಿಯಲ್ಲಿ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ದಿನೇ ದಿನೆ ಹೆಚ್ಚುತ್ತಿವೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಅಪ್ರೂವರ್ ಆಗಿ ಬದಲಾಗುವುದನ್ನು ತಡೆಯಲು ನಟ ದರ್ಶನ್ ನಡೆಸಿದ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ. ಪ್ರದೋಷ್ ಸಾಕ್ಷ್ಯ ವಿಚಾರಣೆಗೆ ತಡೆ ಕೋರಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಮೆಮೋವನ್ನು ಬೆಂಗಳೂರಿನ 59ನೇ ಸಿಸಿಹೆಚ್ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿದ್ದು, ಬೆನ್ನಲ್ಲೇ ಮಾಫಿ ಸಾಕ್ಷಿ ಪ್ರದೋಷ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ.

ಕಾಲಾವಕಾಶ ನೀಡಲು ಸಾಧ್ಯವಿಲ್ಲ

ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರೂ ಅಲ್ಲಿಯೂ ಅರ್ಜಿ ವಜಾಗೊಂಡು ವಿಚಾರಣಾ ನ್ಯಾಯಾಲಯದ ಆದೇಶವೇ ಎತ್ತಿಹಿಡಿಯಲ್ಪಟ್ಟಿತ್ತು.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಇದರ ಬೆನ್ನಲ್ಲೇ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕು ಮತ್ತು ಅಲ್ಲಿಯವರೆಗೆ ವಿಚಾರಣೆಯನ್ನು ಕನಿಷ್ಠ ಎರಡು ದಿನ ಮುಂದೂಡಬೇಕು ಎಂದು ಕೋರಿ ದರ್ಶನ್ ಪರ ವಕೀಲರು ಸಿಸಿಹೆಚ್ ಕೋರ್ಟ್‌ಗೆ ತುರ್ತು ಮೆಮೋ ಸಲ್ಲಿಸಿದ್ದರು. ಆದರೆ ಈ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, "ಶೀಘ್ರವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದೆ, ಆದ್ದರಿಂದ ವಿಚಾರಣೆ ಮುಂದೂಡಲು ಸಾಧ್ಯವಿಲ್ಲ" ಎಂದು ಬಲವಾಗಿ ವಾದಿಸಿದರು.

ಎರಡು ಕಡೆಯ ವಾದ ಆಲಿಸಿದ 59ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ದರ್ಶನ್ ಪರ ವಕೀಲರ ಅರ್ಜಿಯನ್ನು ವಜಾಗೊಳಿಸಿದರು. ಆರೋಪಿಗಳಿಗೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಂಪೂರ್ಣ ಹಕ್ಕಿದೆ, ಆದರೆ ಈಗ ದಾಖಲಾಗುವ ಪ್ರದೋಷ್ ಹೇಳಿಕೆಯು ಸುಪ್ರೀಂ ಕೋರ್ಟ್ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು. ಒಂದು ವೇಳೆ ಸುಪ್ರೀಂ ಕೋರ್ಟ್ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬಾರದು ಎಂದು ತೀರ್ಪು ನೀಡಿದರೆ, ಆಗ ಅವರ ಹೇಳಿಕೆಯನ್ನು ಪರಿಗಣಿಸದೆ ಕೈಬಿಡಲಾಗುವುದು ಎಂಬ ಷರತ್ತಿನೊಂದಿಗೆ ವಿಚಾರಣೆಗೆ ಹಸಿರು ನಿಶಾನೆ ತೋರಿಸಿದರು.

ಎಲ್ಲರನ್ನು ಹೊರಗೆ ಹೇಳಿಕೆ ದಾಖಲು

ಮೆಮೋ ವಜಾಗೊಳ್ಳುತ್ತಿದ್ದಂತೆಯೇ ಪೊಲೀಸರು ಬಿಗಿ ಭದ್ರತೆಯಲ್ಲಿ ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದಲ್ಲಿ ಆರೋಪಿಗಳ ಹಾಜರಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಸಾರ್ವಜನಿಕರನ್ನು ಕೊಠಡಿಯಿಂದ ಹೊರಗೆ ಕಳುಹಿಸಿ ಮುಚ್ಚಿದ ಕೊಠಡಿಯಲ್ಲಿ ಇನ್-ಕ್ಯಾಮರಾ ಪ್ರದೋಷ್ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು.

ಈ ಮಹತ್ವದ ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬರು ಸಾಕ್ಷಿಯಾಗಿ ಹೇಳಿಕೆ ನೀಡುತ್ತಿರುವುದು ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಭಾರೀ ಕಾನೂನು ಹಿನ್ನಡೆ ತಂದೊಡ್ಡಿದೆ.