ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರ ಜಾಮೀನು ರದ್ದಾಗಿ ಮರಳಿ ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಗೆ (ಆಗಸ್ಟ್ 14) ಭರ್ತಿ ಒಂದು ವರ್ಷ ಪೂರೈಸಿದೆ. ಒಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದರೆ, ಇನ್ನೊಂದೆಡೆ ಹೈಕೋರ್ಟ್‌ನಿಂದ ನಟ ದರ್ಶನ್‌ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.
ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ!
ಗಂಡ ಜೈಲು ಪಾಲಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಜಾಲತಾಣದಲ್ಲಿ ಸುದೀರ್ಘ ಹಾಗೂ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ಆಗಲೇ 1 ವರ್ಷವಾಯಿತು. ನೋವು ಹಾಗೇ ಉಳಿದುಬಿಟ್ಟಿದೆ. ಗಾಯ ಇನ್ನೂ ವಾಸಿಯಾಗಿಲ್ಲ. ಆ ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಏನು ಎಂಬುದನ್ನು ಅರಿಯದೇ ಜಗತ್ತು ನಿಮ್ಮ ಬಗ್ಗೆ ತೀರ್ಪು ಕೊಡುವಂತೆ ಮಾತನಾಡುತ್ತದೆ. ಅವರಿಗೆಲ್ಲ ಈ ಬಗ್ಗೆ ವಿವರಿಸುವುದನ್ನು ಬಿಟ್ಟಿದ್ದೇನೆ. ಈಗ ನಾನು ಸುಮ್ಮನೆ ಮುಗುಳುನಗುತ್ತೇನೆ, ಕಾಲ ಮತ್ತು ದೇವರೇ ಎಲ್ಲವನ್ನೂ ನೋಡಿಕೊಳ್ಳಲು ಬಿಟ್ಟುಬಿಟ್ಟಿದ್ದೇನೆ" ಎಂದು ವಿಜಯಲಕ್ಷ್ಮಿ ದರ್ಶನ್ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ವಿಜಯಲಕ್ಷ್ಮಿ ಅವರು ಕಾಮಾಕ್ಯ ದೇವಿಯ ಫೋಟೋ ಹಂಚಿಕೊಂಡು, "ದೇವರಿಗೆ ಗೊತ್ತು ಅಷ್ಟೇ ಸಾಕು" ಎಂದು ಬರೆದುಕೊಂಡಿದ್ದರು. ಹಿನ್ನೆಲೆಯಲ್ಲಿ "ಎಲ್ಲಿಗೆ ಓಡುವೆ ಓ ಮನುಜ.. ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ" ಎಂಬ ಸಾಲುಗಳಿರುವ ಹಾಡನ್ನು ಸೇರಿಸಿ ತಮ್ಮ ಮನದ ಬೇಸರವನ್ನು ಹೊರಹಾಕಿದ್ದರು.
ಹೈಕೋರ್ಟ್‌ನಲ್ಲಿ ನಟ ದರ್ಶನ್‌ಗೆ ಹಿನ್ನಡೆ!
ಇನ್ನೊಂದೆಡೆ ನ್ಯಾಯಾಲಯದಲ್ಲೂ ದರ್ಶನ್‌ಗೆ ಕಾನೂನು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ 'ಮಾಫಿ ಸಾಕ್ಷಿ' ಆಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿರೋಧಿಸಿ ಆಕ್ಷೇಪಣೆ ದಾಖಲಿಸಲು ಅವಕಾಶ ನೀಡಬೇಕೆಂದು ದರ್ಶನ್ ಹಾಗೂ ಇತರ ಸಹ-ಆರೋಪಿಗಳು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆ ಮನವಿಯನ್ನು ನಿರಾಕರಿಸಿತ್ತು.
Actor Darshan: ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಗುರುವಾರ (ಆ.13) ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ದರ್ಶನ್ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಸಿಆರ್‌ಪಿಸಿ (CrPC) ಸೆಕ್ಷನ್ 306ರ ಅಡಿಯಲ್ಲಿ ಯಾವುದೇ ಒಬ್ಬ ಆರೋಪಿ 'ಮಾಫಿ ಸಾಕ್ಷಿ'ಯಾಗಲು ಕೋರಿ ಅರ್ಜಿ ಸಲ್ಲಿಸಿದಾಗ, ಆ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುವ ಹಂತದಲ್ಲಿ ಅದರ ವಿರುದ್ಧ ವಾದ ಮಂಡಿಸುವ ಅಥವಾ ಆಕ್ಷೇಪಿಸುವ ಯಾವುದೇ ಹಕ್ಕು ಸಹ-ಆರೋಪಿಗಳಿಗೆ ಇರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಪ್ರದೋಶ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ದರ್ಶನ್ ಕಡೆಯಿಂದ ತಡೆ ಒಡ್ಡುವ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ.