ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಪ್ರಮುಖ ಸಾಕ್ಷಿಗಳ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ನಟ ದರ್ಶನ್ ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ದರ್ಶನ್ ಖುದ್ದು ಹಾಜರಾತಿಗೆ ಸಮ್ಮತಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುವಾಗ ದರ್ಶನ್ ಖುದ್ದು ಕೋರ್ಟ್‌ನಲ್ಲಿ ಹಾಜರಿರಬೇಕೆಂದು ಕೋರಿ ಅವರ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ದರ್ಶನ್ ಅವರ ಖುದ್ದು ಹಾಜರಾತಿಗೆ ಸಮ್ಮತಿ ಸೂಚಿಸಿ, ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ. ಪ್ರಾಸಿಕ್ಯೂಷನ್ ಒಂದು ವರ್ಷದೊಳಗೆ ಒಟ್ಟು 60 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಇದರಲ್ಲಿ 7 ಪ್ರಮುಖ ಸಾಕ್ಷಿಗಳ ವಿಚಾರಣೆಯೂ ಕಡ್ಡಾಯವಾಗಿ ಒಳಗೊಂಡಿರಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ದರ್ಶನ್‌ಗೆ ಸೂಕ್ತ ಬಿಗಿ ಭದ್ರತೆ
ಮುಖ್ಯ ವಿಚಾರಣೆ ಮುಗಿದ ಬಳಿಕ ಕ್ರಾಸ್ ಎಕ್ಸಾಮಿನೇಷನ್‌ಗೆ ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಬೇಕು ಹಾಗೂ ಆ ನಿರ್ದಿಷ್ಟ ದಿನಗಳಂದು ಮಾತ್ರ ವಿಚಾರಣೆ ನಡೆಸಬೇಕು ಎಂದು ಕೋರ್ಟ್ ಸೂಚಿಸಿದೆ. ಆ ಸಂದರ್ಭದಲ್ಲಿ ಸರ್ಕಾರವು ಸೂಕ್ತ ಬಿಗಿ ಭದ್ರತೆ ಒದಗಿಸಿ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಕರೆತರಬೇಕು ಎಂದು ಆದೇಶಿಸಲಾಗಿದೆ. ಭದ್ರತೆ ಹಾಗೂ ಸೂಕ್ಷ್ಮತೆಯ ದೃಷ್ಟಿಯಿಂದ ಅಗತ್ಯವಿದ್ದರೆ ಈ ವಿಚಾರಣೆಯನ್ನು ‘ಇನ್ ಕ್ಯಾಮೆರಾ’ ರೂಪದಲ್ಲಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಈ ವಿಶೇಷ ಆದೇಶವನ್ನು ಬೇರೆ ಯಾವುದೇ ಪ್ರಕರಣಗಳಿಗೆ ನಿದರ್ಶನ ಅಥವಾ ಮಾದರಿಯಾಗಿ ಪರಿಗಣಿಸಬಾರದು ಎಂದೂ ಸ್ಪಷ್ಟಪಡಿಸಿದೆ.
ಮಾಫಿ ಸಾಕ್ಷಿಯಾಗಿರುವ ಪ್ರದೋಶ್
ಮತ್ತೊಂದೆಡೆ, ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ಮತ್ತೊಂದು ಮಹತ್ವದ ತಿರುವು ದಾಖಲಾಗಿದೆ. ಪ್ರಕರಣದಲ್ಲಿ ತನಗೆ ಕ್ಷಮಾದಾನ ನೀಡಿ, ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಕೋರಿ 14ನೇ ಆರೋಪಿ ಪ್ರದೋಷ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶೆ ಸುಜಾತಾ ಸಾಂಬ್ರಾಣಿ ಅವರು, ಆತನಿಗೆ ಕ್ಷಮಾದಾನ ನೀಡಿ ಮಾಫಿ ಸಾಕ್ಷಿಯಾಗಿ ಅಂಗೀಕರಿಸಿ ಷರತ್ತುಬದ್ಧ ಆದೇಶ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ತೀರ್ಪು ಪ್ರಕಟವನ್ನು ತಡೆಹಿಡಿಯಬೇಕೆಂದು ಕೋರಿ ನಟ ದರ್ಶನ್ ಸಲ್ಲಿಸಿದ್ದ ಮೆಮೋವನ್ನು ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಮೂಲಕ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ವಿಚಾರಣೆ ಮತ್ತಷ್ಟು ಬಿರುಸು ಪಡೆದುಕೊಂಡಿದೆ.