ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಹಿಂಸೆ ತಡೆಯಲು ಆಗುತ್ತಿಲ್ಲ, ಒಂದು ತೊಟ್ಟು ವಿಷ ಕೊಡಿಸಿʼ; ಕೋರ್ಟ್‌ನಲ್ಲಿ ಪವಿತ್ರಾ ಗೌಡ ಪರ ವಕೀಲರು ಹೇಳಿದ್ರು ಶಾಕಿಂಗ್‌ ವಿಚಾರ!

ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯ ವೇಳೆ ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಪರಪ್ಪನ ಅಗ್ರಹಾರದಲ್ಲಿ ನೈಜೀರಿಯನ್ ಕೈದಿಗಳಿಂದ ತೀವ್ರ ಹಿಂಸೆ ಮತ್ತು ಕೊಲೆ ಬೆದರಿಕೆ ಎದುರಿಸುತ್ತಿರುವ ಪವಿತ್ರಾ, ‘ವಿಷವಾದರೂ ಕೊಡಿ’ ಎಂದು ಗೋಳಾಡುತ್ತಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ (ಎ1) ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಶಾಕಿಂಗ್‌ ವಿಚಾರ ಬಯಲಾಗಿದೆ. ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪವಿತ್ರಾ ಗೌಡ ಪರ ವಕೀಲರು ಜೈಲಿನಲ್ಲಿ ತಮ್ಮ ಕಕ್ಷಿದಾರರು ಎದುರಿಸುತ್ತಿರುವ ಕಷ್ಟವನ್ನು ವಿವರಿಸಿದ್ದು, ‘ಜೈಲಿನ ಹಿಂಸೆ ತಡೆಯಲು ಸಾಧ್ಯವಾಗುತ್ತಿಲ್ಲ, ತಮಗೆ ಜಾಮೀನನ್ನಾದರೂ ಕೊಡಿಸಿ ಇಲ್ಲವೇ ಸಾಯಲು ಒಂದಿಷ್ಟು ವಿಷವನ್ನಾದರೂ ಕೊಡಿ’ ಎಂದು ಪವಿತ್ರಾ ಗೌಡ ಗೋಳಾಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ನ್ಯಾಯಾಧೀಶರ ಮುಂದೆ ತೆರೆದಿಟ್ಟಿದ್ದಾರೆ.

ಪವಿತ್ರಾಗೆ ಮಾನಸಿಕ ಮತ್ತು ದೈಹಿಕ ಹಿಂಸೆ

ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ಹಾಗೂ ನಾರಾಯಣಸ್ವಾಮಿ ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದರು. ಜೈಲಿನಲ್ಲಿರುವ ನೈಜೀರಿಯನ್ ಮೂಲದ ಮಹಿಳಾ ಕೈದಿಗಳು ಪವಿತ್ರಾ ಗೌಡ ಅವರಿಗೆ ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಜೈಲಿನ ಅಧಿಕಾರಿಗಳು ಕೂಡ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅಷ್ಟೇ ಅಲ್ಲದೆ, ಜೈಲಿನ ಒಳಗೆ ಪವಿತ್ರಾ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದ್ದು, ಅವರ ಜೀವಕ್ಕೆ ತೀವ್ರ ಬೆದರಿಕೆಯಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಈ ಆತಂಕಕ್ಕೆ ಪ್ರತಿಕ್ರಿಯಿಸಿದ ವಿಶೇಷ ಸರ್ಕಾರಿ ಅಭಿಯೋಜಕರು, ನ್ಯಾಯಾಲಯದ ಹಿಂದಿನ ಆದೇಶದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪವಿತ್ರಾ ಗೌಡ ಅವರ ಭದ್ರತೆಯ ದೃಷ್ಟಿಯಿಂದ ಅವರನ್ನು ಈಗಾಗಲೇ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಜಾಮೀನು ನಿರ್ಬಂಧದ ನಿಯಮ ಪವಿತ್ರಾಗೆ ಅನ್ವಯಿಸುವುದಿಲ್ಲ!

ಇದೇ ವೇಳೆ ಜಾಮೀನಿಗೆ ಸಮರ್ಥನೆ ನೀಡಿದ ಪವಿತ್ರಾ ಗೌಡ ಪರ ವಕೀಲರು, ಪ್ರಕರಣದ ವಿಚಾರಣೆ ನಿರಂತರವಾಗಿ ವಿಳಂಬವಾಗುತ್ತಿದ್ದು, ತಮ್ಮ ಕಕ್ಷಿದಾರರು ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲೇ ಕಳೆದಿದ್ದಾರೆ. ಅವರೊಬ್ಬ ಮಹಿಳೆಯಾಗಿದ್ದು, ಮನೆಯಲ್ಲಿರುವ ವಯಸ್ಸಾದ ತಾಯಿ ಹಾಗೂ ಶಾಲೆಗೆ ಹೋಗುತ್ತಿರುವ ಅಪ್ರಾಪ್ತ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ.

Pavithra Gowda: ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌ ಸಂಜಯ್‌ ಸಿಂಗ್‌ಗೆ ಏನಾಯ್ತು?

ಪ್ರಕರಣದ ಬಹುತೇಕ ಮಹತ್ವದ ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಕೆಲವೇ ಕೆಲವು ಸರ್ಕಾರಿ ಸಾಕ್ಷಿಗಳು ಮಾತ್ರ ಬಾಕಿ ಇವೆ. ಹೀಗಾಗಿ ಜಾಮೀನು ನೀಡಿದರೆ ಯಾವುದೇ ಸಾಕ್ಷ್ಯನಾಶಕ್ಕೆ ಯತ್ನಿಸುವುದಿಲ್ಲ ಮತ್ತು ತನಿಖೆಗೆ ಪೂರ್ಣ ಸಹಕಾರ ನೀಡಲಿದ್ದಾರೆ, ಸುಪ್ರೀಂ ಕೋರ್ಟ್‌ನ ಒಂದು ವರ್ಷದ ಜಾಮೀನು ನಿರ್ಬಂಧದ ನಿಯಮ ಪವಿತ್ರಾ ಗೌಡ ಅವರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದರು.

ವಿಚಾರಣೆ ಮುಂದೂಡಿಕೆ

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್, ಪ್ರಕರಣದ ಗಂಭೀರತೆಯನ್ನು ಪ್ರಸ್ತಾಪಿಸಿದರು. ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಪ್ರಕಾರ ಒಂದು ವರ್ಷದ ಕಾಲಮಿತಿಯಲ್ಲಿ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳಬೇಕಿದೆ. ಅಲ್ಲಿಯವರೆಗೆ ಯಾವುದೇ ಆರೋಪಿಗಳಿಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ.

ಈ ಆದೇಶವು ಪವಿತ್ರಾ ಗೌಡ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂದು ವಾದ ಮಂಡಿಸಿ ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದರು. ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು.