ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ಪವಿತ್ರಾ ಗೌಡಗೆ ಮತ್ತೆ ನಿರಾಸೆ; ಇಬ್ಬರು ಆರೋಪಿಗಳ ಜಾಮೀನು ತಿರಸ್ಕಾರ

Pavitra Gowda Plea Dismiss: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್ ಬದಲಾವಣೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶರ ಖುದ್ದು ಭೇಟಿಯ ಬೇಡಿಕೆಯೂ ತಿರಸ್ಕೃತಗೊಂಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಎ 1 ಆರೋಪಿ ಪವಿತ್ರಾ ಗೌಡ ಅವರಿಗೆ ಬೆಂಗಳೂರಿನ 59ನೇ ಸಿಸಿಎಚ್‌ ಸೆಷನ್ಸ್‌ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮ್ಮ ಬ್ಯಾರಕ್ ಬದಲಾವಣೆ ಮಾಡಬೇಕು ಹಾಗೂ ನ್ಯಾಯಾಧೀಶರೇ ಖುದ್ದು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರೊಂದಿಗೆ, ಇದೇ ಪ್ರಕರಣದ ಇತರ ಪ್ರಮುಖ ಆರೋಪಿಗಳಾದ ಜಗದೀಶ್ ಹಾಗೂ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದೆ.

ಪವಿತ್ರಾ ಸಲ್ಲಿಸಿದ್ದ ಅರ್ಜಿಯಲ್ಲಿ ಏನಿತ್ತು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸದ್ಯ ತಮ್ಮನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ನೈಜೀರಿಯನ್ ಮೂಲದ ಮಹಿಳಾ ಕೈದಿಗಳಿದ್ದು, ಅವರಿಂದ ತಮಗೆ ನಿರಂತರ ಕಿರುಕುಳ ಮತ್ತು ತೊಂದರೆ ಉಂಟಾಗುತ್ತಿದೆ ಎಂದು ಪವಿತ್ರಾ ಗೌಡ ಪರ ವಕೀಲರು ಅಕ್ಟೋಬರ್ 6ರಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಸಹಕೈದಿಗಳು ತಮ್ಮ ಬಟ್ಟೆಗಳನ್ನು ಬಳಸುತ್ತಿದ್ದಾರೆ, ಮೂಲಭೂತ ಸೌಕರ್ಯಗಳ ಕೊರತೆಯಿದೆ ಮತ್ತು ಜೈಲು ಅಧಿಕಾರಿಗಳು ನ್ಯಾಯಾಲಯದ ಹಿಂದಿನ ಆದೇಶಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಲಾಗಿತ್ತು. ಆದ್ದರಿಂದ ಬ್ಯಾರಕ್ ಬದಲಾಯಿಸಬೇಕು, ಪ್ರತ್ಯೇಕ ಆರೋಗ್ಯ ತಪಾಸಣೆಗೆ ಅವಕಾಶ ನೀಡಬೇಕು ಹಾಗೂ ನ್ಯಾಯಾಧೀಶರ ಸಮಿತಿಯೇ ಜೈಲಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕೆಂದು ಕೋರಿದ್ದರು.

Pavithra Gowda: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆ; ಅರ್ಜಿ ವಜಾ ಮಾಡಿದ ಕೋರ್ಟ್‌

ಪವಿತ್ರಾ ಅರ್ಜಿಯನ್ನು ವಜಾಗೊಳಿಸಿದ ಜಡ್ಜ್‌

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜೈಲು ಆಡಳಿತ ಮಂಡಳಿಯಿಂದ ಸಮಗ್ರ ವರದಿ ಕೇಳಿತ್ತು. ಜೈಲಾಧಿಕಾರಿಗಳು ಇ-ಮೇಲ್ ಮೂಲಕ ನ್ಯಾಯಾಲಯಕ್ಕೆ ವಿವರವಾದ ವರದಿ ಸಲ್ಲಿಸಿದ ನಂತರ, ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ತೀರ್ಪನ್ನು ಅಕ್ಟೋಬರ್ 23ಕ್ಕೆ ಕಾಯ್ದಿರಿಸಿದ್ದರು. ಇದೀಗ ಅಂತಿಮ ಆದೇಶ ಪ್ರಕಟಿಸಿರುವ ನ್ಯಾಯಾಧೀಶರು, ಪವಿತ್ರಾ ಗೌಡ ಅವರ ಮನವಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದಾರೆ. ಇದರಿಂದಾಗಿ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರದ ಅದೇ ಬ್ಯಾರಕ್‌ನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

ಮತ್ತೊಂದೆಡೆ, ಈ ಪ್ರಕರಣದ 7ನೇ ಆರೋಪಿ ಅನುಕುಮಾರ್ ಹಾಗೂ ಜಗದೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ 59ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಬಂದ ತಂಡದಲ್ಲಿ ಅನುಕುಮಾರ್ ಪ್ರಮುಖ ಪಾತ್ರ ವಹಿಸಿದ್ದರೆ, ಕೃತ್ಯದ ಬಳಿಕ ಜಗದೀಶ್ ಚಿತ್ರದುರ್ಗ ಡಿವೈಎಸ್ಪಿ ಎದುರು ಶರಣಾಗಿದ್ದ. ಪ್ರಕರಣದ ಗಂಭೀರತೆ ಹಾಗೂ ಪೊಲೀಸರು ಸಲ್ಲಿಸಿರುವ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯ, ಇಬ್ಬರಿಗೂ ಜಾಮೀನು ನೀಡಲು ನಿರಾಕರಿಸಿದೆ.