ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ (A1) ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ. ಅನಾರೋಗ್ಯದ ಕಾರಣ ನೀಡಿ ತಮ್ಮನ್ನು ಪರಪ್ಪನ ಅಗ್ರಹಾರ ಜೈಲಿನ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಕೋರಿದ್ದ ಅವರ ಮನವಿಯನ್ನು ನ್ಯಾಯಾಲಯವು ಭಾಗಶಃ ಪುರಸ್ಕರಿಸಿದೆ.
ಆರೋಪಿಯ ಆರೋಗ್ಯದ ಹಿತದೃಷ್ಟಿಯಿಂದ ಜೈಲು ಕೈಪಿಡಿ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಪರಿಶೀಲಿಸಿ, ಅಗತ್ಯವಿದ್ದರೆ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಆದೇಶದಿಂದಾಗಿ ಪವಿತ್ರಾ ಗೌಡ ಅವರಿಗೆ ಸದ್ಯ ಸಣ್ಣ ಮಟ್ಟದ ಸಮಾಧಾನ ದೊರೆತಂತಾಗಿದೆ.
ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್
ಇತ್ತ ಪ್ರಕರಣದ ಎರಡನೇ ಆರೋಪಿ (A2) ನಟ ದರ್ಶನ್ ತೂಗುದೀಪ ಅವರು ವಿಡಿಯೋ ಕಾನ್ಫರೆನ್ಸಿಂಗ್‌ನ ತಾಂತ್ರಿಕ ಅಡಚಣೆಗಳಿಂದ ಬೇಸತ್ತು, ಖುದ್ದು ವಿಚಾರಣೆಗೆ ಅವಕಾಶ ಕಲ್ಪಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿಂದೆ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಅವರನ್ನು ಖುದ್ದಾಗಿ ಹಾಜರುಪಡಿಸಲು ನಿರಾಕರಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ದರ್ಶನ್ ಉಲ್ಲೇಖಿಸಿರುವ ಪ್ರಮುಖ ಅಂಶಗಳೇನು?
ಸಾಕ್ಷ್ಯ ವಿಚಾರಣೆಯ ಪ್ರಕ್ರಿಯೆಯನ್ನು ನೇರವಾಗಿ ಆಲಿಸುವುದು ಮತ್ತು ವೀಕ್ಷಿಸುವುದು ಆರೋಪಿಯ ಮೂಲಭೂತ ಹಕ್ಕು. ಸಾಕ್ಷಿಯು ಆರೋಪಿಯ ಸಮ್ಮುಖದಲ್ಲೇ ತನ್ನ ಹೇಳಿಕೆಯನ್ನು ದಾಖಲಿಸಬೇಕು. ಪರಪ್ಪನ ಅಗ್ರಹಾರ ಜೈಲು ಹಾಗೂ ನ್ಯಾಯಾಲಯದಲ್ಲಿ ಸಮರ್ಪಕ ತಾಂತ್ರಿಕ ಉಪಕರಣಗಳ ಕೊರತೆಯಿದೆ. ಈ ವ್ಯವಸ್ಥೆಯನ್ನು ಉನ್ನತೀಕರಿಸದೇ ಇರುವುದರಿಂದ ವಿಡಿಯೋ ಕಾನ್ಫರೆನ್ಸಿಂಗ್ ವೇಳೆ ಪದೇಪದೆ ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ.
Actress Ramya: ಕೇಸ್ ಹಿಂಪಡೆಯಿರಿ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್! ನಟಿಯ ಖಡಕ್ ರಿಪ್ಲೈ ಇದು
ತಾಂತ್ರಿಕ ತೊಡಕುಗಳಿಂದಾಗಿ ವಿಚಾರಣೆಯ ಸಂದರ್ಭದಲ್ಲಿ ವಕೀಲರೊಂದಿಗೆ ಕಾಲಕಾಲಕ್ಕೆ ನೇರ ಸಂಪರ್ಕ ಸಾಧಿಸಲು ಮತ್ತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭದ್ರತೆಯ ದೃಷ್ಟಿಯಿಂದ ವಿಡಿಯೋ ಕಾನ್ಫರೆನ್ಸಿಂಗ್‌ಗೆ ಆದ್ಯತೆ ನೀಡಲಾಗುತ್ತದೆ. ಆದರೆ, ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಹಾಜರಿದ್ದು ಸಾಕ್ಷ್ಯಗಳನ್ನು ಗಮನಿಸಲು ಮತ್ತು ವಕೀಲರೊಂದಿಗೆ ಸಮಾಲೋಚಿಸಲು ಅನುಮತಿ ಕೋರಿರುವ ದರ್ಶನ್ ಅವರ ಈ ಮನವಿಯನ್ನು ಹೈಕೋರ್ಟ್ ಹೇಗೆ ಪರಿಗಣಿಸಲಿದೆ ಎಂಬುದು ಮುಂದಿನ ವಿಚಾರಣೆಯಲ್ಲಿ ಗೊತ್ತಾಗಲಿದೆ.