ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ'; ನಟ ದರ್ಶನ್‌ ಮಾತು ಕೇಳಿ ನಡುಗಿಹೋಗಿದ್ದ ಆಪ್ತರು! ಆ ರಾತ್ರಿ ರೇಣುಕಾಸ್ವಾಮಿ ಶವ ವಿಲೇವಾರಿ ಮಾಡಲು ಹೇಗೆಲ್ಲಾ ನಡೆದಿತ್ತು ಪ್ಲ್ಯಾನ್?

Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನ ತನಿಖೆಯಲ್ಲಿ ಮಾಫಿ ಸಾಕ್ಷಿ ಪ್ರದೋಷ್ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ರೇಣುಕಾಸ್ವಾಮಿ ಸಾವನ್ನಪ್ಪಿದ ಸುದ್ದಿ ಕೇಳುತ್ತಿದ್ದಂತೆಯೇ ದರ್ಶನ್ ತೀವ್ರ ಆತಂಕಗೊಂಡು, ಶೂಟ್ ಮಾಡಿಕೊಳ್ಳುತ್ತೇನೆ, ನೇಣು ಬಿಗಿದುಕೊಳ್ಳುತ್ತೇನೆ ಎಂದೆಲ್ಲಾ ಹೇಳಿದ್ದರಂತೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಶ್‌ ಅವರು ಹಲವು ವಿಚಾರಗಳನ್ನು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಅದರಲ್ಲೂ ಮುಖ್ಯವಾಗಿ ದರ್ಶನ್‌ ಅವರಿಗೆ ಮೊದಲ ಬಾರಿಗೆ ರೇಣುಕಾಸ್ವಾಮಿ ಸಾವನ್ನಪ್ಪಿರುವ ವಿಚಾರ ತಿಳಿದಾಗ, ಅವರು ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಿದರು ಎಂಬುದು ಅಚ್ಚರಿ ಮೂಡಿಸುವಂತಿದೆ. "ಏನಾಯಿತು ಎಂದು ನೋಡಿ ಹೇಳಿ, ಇಲ್ಲದಿದ್ದರೆ ನಾನು ಶೂಟ್ ಮಾಡಿಕೊಳ್ಳುತ್ತೇನೆ" ಎಂದು ಪ್ರದೋಶ್‌ಗೆ ದರ್ಶನ್‌ ಹೇಳಿದ್ದರಂತೆ. ಇದನ್ನು ಪ್ರದೋಶ್‌ ಕೋರ್ಟ್‌ ಮುಂದೆ ಹಂಚಿಕೊಂಡಿದ್ದಾರೆ.

"ನಾನು ರೇಣುಕಾಸ್ವಾಮಿ ಸಾವನ್ನಪ್ಪಿದ ವಿಚಾರ ತಿಳಿಸಿದಾಗ, ದರ್ಶನ್‌ರವರು ತಮ್ಮ ತಲೆಯ ಮೇಲೆ ಕೈಯಿಟ್ಟುಕೊಂಡು ಕುಸಿದು ಮಂಚದ ಮೇಲೆ ಕುಳಿತುಕೊಂಡರು. ಆಗ ದರ್ಶನ್‌ರವರು ಸಂಪೂರ್ಣ ಆತಂಕದ ಸ್ಥಿತಿಯಲ್ಲಿದ್ದು (complete state of panic), ಪದೇಪದೇ 'ಯಾರು? ಯಾರು?' ಎಂದು ಕೇಳಿದ ಪ್ರಶ್ನೆಯನ್ನೇ ಕೇಳುತ್ತಿದ್ದರು. ನಾನು ಅವರ ಎದುರುಗಡೆ ನಿಂತುಕೊಂಡಿದ್ದೆ; ಅವರು ನನ್ನ ಕೈಹಿಡಿದುಕೊಂಡು 'ಪ್ರದೋಷ್, ಏನಾಯಿತು ಎಂದು ನೋಡಿ ಹೇಳಿ, ಇಲ್ಲದಿದ್ದರೆ ನಾನು ಶೂಟ್ ಮಾಡಿಕೊಳ್ಳುತ್ತೇನೆ' ಎಂದು ಕೈಯನ್ನು ತಲೆಯ ಕಡೆಗೆ ಹಿಡಿದು ತೋರಿಸಿದರು. ಆಗ ನನಗೂ ಭಯವಾಗಲು ಶುರುವಾಯಿತು. ಏಕೆಂದರೆ ನಾನು ಎಂದಿಗೂ ದರ್ಶನ್‌ರವರನ್ನು ಆ ಸ್ಥಿತಿಯಲ್ಲಿ ನೋಡಿರಲಿಲ್ಲ" ಎಂದು ಪ್ರದೋಷ್ ಹೇಳಿದ್ದಾರೆ.

"ದರ್ಶನ್ ನನಗೆ, 'ಅಲ್ಲಿಗೆ ಹೋಗಿ ಏನಾಯಿತು ಎಂದು ನೋಡಿ, ನಾವು ಅಲ್ಲಿಂದ ಹೊರಟಾಗ ಆತ ಬದುಕೇ ಇದ್ದ' ಎಂದು ಹೇಳಿದರು. ಆಗ ನಾನು ಅವರಿಗೆ, 'ನೀವು ಆತಂಕಪಡಬೇಡಿ, ನಾನು ನೋಡುತ್ತೇನೆ' ಎಂದು ಹೇಳಿ ಹೊರಟೆ. ನಂತರ ನಾನು ನಾಗರಾಜ್‌ಗೆ, 'ನಾನು ನಿಮಗೆ ಆಗಲೇ ಕರೆ ಮಾಡಿದ್ದೆ, ಆದರೆ ನೀವು ನನ್ನ ಕರೆಯನ್ನು ಸ್ವೀಕರಿಸಿರಲಿಲ್ಲ' ಎಂದು ತಿಳಿಸಿದೆ. ಅವರು 'ಏನು ವಿಷಯ?' ಎಂದು ಕೇಳಿದಾಗ, 'ನಾನು ದರ್ಶನ್ ಮನೆಗೆ ಹೋಗಿ ರೇಣುಕಾಸ್ವಾಮಿ ಮೃತಪಟ್ಟ ವಿಷಯ ತಿಳಿಸಿದೆ. ಅದಕ್ಕೆ ಅವರು ಶೂಟ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದು, ಇದರಿಂದ ನನಗೆ ಭಯವಾಗಿ ಅದನ್ನು ಹಂಚಿಕೊಳ್ಳಲು ಕರೆ ಮಾಡಿದ್ದೆ' ಎಂದು ತಿಳಿಸಿದೆ" ಎಂದು ಪ್ರದೋಷ್ ಹೇಳಿದ್ದಾರೆ.

ನಟ ದರ್ಶನ್‌ ಜೊತೆ ಗೆಳೆತನ ಶುರುವಾಗಿದ್ದು ಹೇಗೆ? ಕೋರ್ಟ್‌ ಮುಂದೆ ಎಲ್ಲವನ್ನು ತಿಳಿಸಿದ ʻಮಾಫಿ ಸಾಕ್ಷಿʼ ಪ್ರದೋಷ್‌!

"ನಾವು ಮನೆಯಿಂದ ಹೊರಡುವ ಸಮಯದಲ್ಲಿ ದರ್ಶನ್ ನಮ್ಮನ್ನೆಲ್ಲ ಉದ್ದೇಶಿಸಿ, 'ಸಹಾಯ ಮಾಡಿ, ಇಲ್ಲದಿದ್ದರೆ ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಕತ್ತಿನ ಹತ್ತಿರ ಕೈಯಿಟ್ಟುಕೊಂಡು ಬೇಡಿಕೊಂಡರು. ಆಗ ಲಕ್ಷ್ಮಣ್, 'ಆ ರೀತಿ ಮಾತನಾಡಬೇಡಿ, ಏನಾದರೂ ನಾವು ಮಾಡುತ್ತೇವೆ' ಎಂದು ಹೇಳಿದರು. ಅದಾದ ನಂತರ ನಾವೆಲ್ಲರೂ ಹಣವನ್ನು ತೆಗೆದುಕೊಂಡು ದರ್ಶನ್‌ರವರ ಮನೆಯಿಂದ ಹೊರಗೆ ಬಂದೆವು" ಎಂದು ಪ್ರದೋಷ್ ಹೇಳಿದ್ದಾರೆ.

"ನಾನು ಮತ್ತು ಲಕ್ಷ್ಮಣ್ ಇಬ್ಬರೂ ಅಲ್ಲೇ ನಿಂತಿದ್ದಾಗ, ಲಕ್ಷ್ಮಣ್ ನನಗೆ, 'ಏನಣ್ಣ, ದರ್ಶನ್ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರಲ್ಲ' ಎಂದು ಮತ್ತೆ ಹೇಳಿ, ಅದನ್ನು ಕೇಳಿ ತನಗೆ ಗಾಬರಿಯಾಗಿತ್ತು ಎಂದು ತಿಳಿಸಿದರು. ಅದಕ್ಕೆ ನಾನು 'ಏನೂ ಆಗುವುದಿಲ್ಲ' ಎಂದು ಸಮಾಧಾನಪಡಿಸಿದೆ. ಆ ಸಮಯದಲ್ಲಿ ನನ್ನ ಮನಸ್ಸಿನಲ್ಲಿ 'ಮೃತದೇಹವನ್ನು ಎಲ್ಲಿ ವಿಲೇವಾರಿ ಮಾಡುವುದು?' ಎಂಬ ಚಿಂತೆ ಇತ್ತು. ಶೆಡ್‌ನಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಶವವನ್ನು ಎಸೆದರೆ ಒಳ್ಳೆಯದು ಎಂದು ಯೋಚಿಸುತ್ತಿದ್ದೆ" ಎಂದು ಪ್ರದೋಷ್ ಹೇಳಿದ್ದಾರೆ.

"ಶೆಡ್‌ಗೆ ಹೋದಮೇಲೆ ವಿನಯ್‌ ನನ್ನ ಬಳಿ ಬಂದು, 'ನಮ್ಮ ಶೆಡ್‌ಗೆ ಕೆಟ್ಟ ಹೆಸರು ಬರಬಾರದು' ಎಂದು ಹೇಳಿದರು. ಆಗ ನಾನು, 'ಮೃತದೇಹವನ್ನು ತೆಗೆದುಕೊಂಡು ಚಿತ್ರದುರ್ಗಕ್ಕೆ ಹೋಗಿ' ಎಂದು ರಾಘವೇಂದ್ರ, ಅನುಕುಮಾರ್‌, ಜಗದೀಶ್‌ ಮತ್ತು ರವಿಗೆ ಹೇಳಿದೆನು. ಆದರೆ ರವಿ ಎಂಬಾತ, 'ನಾನು ಬಾಡಿಗೆಗೆ ಬಂದಿದ್ದೇನೆ, ನಾನೇಕೆ ಮೃತದೇಹವನ್ನು ತೆಗೆದುಕೊಂಡು ಹೋಗಬೇಕು?' ಎಂದು ಪ್ರಶ್ನಿಸಿದ. ಅಂತಿಮವಾಗಿ ದರ್ಶನ್‌ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನನ್ನು ಸೆರೆಂಡರ್‌ ಮಾಡಿಸಲು ಒಪ್ಪಿಸಿದೆವು. ನಂತರ ಇನ್ನೂ ಕೆಲವರನ್ನು ಶರಣಾಗಿಸಲು ಯೋಜಿಸಿದೆವು. ನಾನು ದರ್ಶನ್‌ ಅವರ ಬಳಿ ಹೋಗಿ, 'ಇದಕ್ಕೆ ಸುಮಾರು 30 ಲಕ್ಷ ರೂಪಾಯಿ ಬೇಕಾಗಬಹುದು; ಅವರ ಮನೆ ಖರ್ಚು, ಜಾಮೀನು ಹಾಗೂ ಜೈಲಿನ ಖರ್ಚುಗಳಿಗೆ ಹಣ ಬೇಕಾಗುತ್ತದೆ' ಎಂದು ಹೇಳಿದೆ. ಅದಕ್ಕೆ ಅವರು ಹಣ ನೀಡಿದರು" ಎಂದು ಪ್ರದೋಷ್ ಹೇಳಿದ್ದಾರೆ.

"ನಾನು ಮತ್ತು ಲಕ್ಷ್ಮಣ್‌ ಪಟ್ಟಣಗೆರೆ ಶೆಡ್‌ನಿಂದ ನಾಯಂಡಹಳ್ಳಿ ದಾಟಿ ಮುಂದೆ ಸಾಗಿದೆವು. ಶವನನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂದು ನಾನು ಜಾಗ ಹುಡುಕುತ್ತಿದ್ದೆ. ಮಾಗಡಿ ರಸ್ತೆ ಜಂಕ್ಷನ್‌ವರೆಗೆ ಬಂದೆವು. ಆಗ ನಾನು ಲಕ್ಷ್ಮಣ್‌ಗೆ, 'ಇಲ್ಲಿಯೇ ಬಲತಿರುವು ತೆಗೆದುಕೊಳ್ಳಿ, ನಾವು ವಾಪಸ್ ಹೋಗೋಣ' ಎಂದು ಹೇಳಿದೆ. ನಾವು ಯು-ಟರ್ನ್ ತೆಗೆದುಕೊಂಡು ಬರುವಾಗ ಎಡಬದಿಯಲ್ಲಿ ಒಂದು ದೊಡ್ಡ ಚರಂಡಿ (ಮೋರಿ) ಹರಿಯುತ್ತಿತ್ತು. ಆ ಸ್ಥಳವನ್ನು ನಾನು ನೋಡಿದಾಗ, ಅಲ್ಲಿ ಯಾವುದೇ ರಸ್ತೆಗಳಿರಲಿಲ್ಲ, ಸಂಪೂರ್ಣ ಕತ್ತಲೆಯಿಂದ ಕೂಡಿದ ನಿರ್ಜನ ಪ್ರದೇಶವಾಗಿತ್ತು. ಆ ಚರಂಡಿಯ ಹತ್ತಿರ ವಾಹನವನ್ನು ಎಡಬದಿಗೆ ನಿಲ್ಲಿಸಲು ಲಕ್ಷ್ಮಣ್‌ಗೆ ತಿಳಿಸಿದೆ. ಅಲ್ಲಿ 'ಸತ್ತ್ವ ಅಪಾರ್ಟ್‌ಮೆಂಟ್‌' ಇರುವುದು ಕಂಡುಬಂತು. ಆ ಅಪಾರ್ಟ್‌ಮೆಂಟ್‌ಗಿಂತ ಮುಂಚೆಯೇ ಒಂದು ರಸ್ತೆಯಿದ್ದು, ಅಲ್ಲಿಗೆ ನಾವು ವಾಹನವನ್ನು ಎಡತಿರುವು ಪಡೆದುಕೊಂಡು ಹೋದೆವು. ಆ ರಸ್ತೆ ಸಂಪೂರ್ಣವಾಗಿ ಕತ್ತಲೆಯಿಂದ ಕೂಡಿತ್ತು ಹಾಗೂ ಒಂದೂ ಬೀದಿದೀಪ ಇರಲಿಲ್ಲ. ಅದೇ ರಸ್ತೆಯಲ್ಲಿ ನಾವು ಮುಂದೆ ಸಾಗಿ ಬಲತಿರುವು ತೆಗೆದುಕೊಂಡಾಗ, ಅಲ್ಲಿ ಮರಗಳಿರುವ ತೋಪು ಕಾಣಿಸಿತು. ಆ ಜಾಗದಲ್ಲಿಯೂ ಯಾವುದೇ ಬೆಳಕು ಇರಲಿಲ್ಲ, ಕಗ್ಗತ್ತಲೆಯಿಂದ ಕೂಡಿತ್ತು" ಎಂದು ಹೇಳಿದ್ದಾರೆ.

ನಂತರ ವಾಪಸ್ ಶೆಡ್‌ಗೆ ಹೋಗಿ, ಇನ್ನೊಂದು ಕಾರಿನಲ್ಲಿ ರೇಣುಕಾಸ್ವಾಮಿಯ ಶವವನ್ನು ತಂದು ಅದೇ ಜಾಗದಲ್ಲಿ ಎಸೆಯಲಾಯಿತು ಎಂಬುದಾಗಿ ಪ್ರದೋಶ್ ಅವರೇ ತಿಳಿಸಿದ್ದಾರೆ.