ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಮಂಜುಮ್ಮೆಲ್ ಬಾಯ್ಸ್’ ನಿರ್ದೇಶಕನ ಜೊತೆ ರಿಷಬ್ ಶೆಟ್ಟಿ ಹೊಸ ಸಿನಿಮಾ; ಎರಡೆರಡು ಗುಡ್‌ ನ್ಯೂಸ್‌ ಕೊಟ್ಟ ‌ʻಡಿವೈನ್‌ ಸ್ಟಾರ್ʼ!

Rishab Shetty: ಹೊಸ ಚಿತ್ರಕ್ಕಾಗಿ ಖ್ಯಾತ ನಿರ್ದೇಶಕ ಚಿದಂಬರಂ ಜೊತೆ ರಿಷಬ್‌ ಶೆಟ್ಟಿ ಕೈಜೋಡಿಸಿದ್ದಾರೆ. ಈ ಕಾಂಬಿನೇಷನ್‌ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಕೊಂಡಿದೆ. ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಈ ಬಿಗ್ ಬಜೆಟ್ ಸಿನಿಮಾವನ್ನು ಶಿಬು ಥಮೀನ್ಸ್ ನಿರ್ಮಿಸಲಿದ್ದು, ಮುಂದಿನ ವರ್ಷ ಸೆಟ್ಟೇರಲಿದೆ.

‘ಕಾಂತಾರ: ಚಾಪ್ಟರ್‌ 1’ ಚಿತ್ರದ ಅಭೂತಪೂರ್ವ ಯಶಸ್ಸಿನ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ಮತ್ತೊಂದು ಕುತೂಹಲಕಾರಿ ಪ್ರಾಜೆಕ್ಟ್‌ಗೆ ಕೈಜೋಡಿಸಿದ್ದಾರೆ.

ಮಲಯಾಳಂನ ಬ್ಲಾಕ್‌ಬಸ್ಟರ್ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ನಿರ್ದೇಶಕ ಚಿದಂಬರಂ ಅವರ ಜೊತೆ ರಿಷಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ. ಇದೊಂದು ಸ್ಪೋರ್ಟ್ಸ್ ಡ್ರಾಮಾ ಆಗಿರಲಿದ್ದು, ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಈ ಬಿಗ್ ಬಜೆಟ್ ಸಿನಿಮಾವನ್ನು ಶಿಬು ಥಮೀನ್ಸ್ ನಿರ್ಮಿಸಲಿದ್ದು, ಮುಂದಿನ ವರ್ಷ ಸೆಟ್ಟೇರಲಿದೆ.

ಸಾಕಷ್ಟು ಬ್ಯುಸಿ ಇರುವ ರಿಷಬ್

ಮಣ್ಣಿನ ಸೊಗಡಿನ ಕಥೆಗಳು ಹಾಗೂ ನೈಜ ಭಾವನಾತ್ಮಕ ನಿರೂಪಣೆಗೆ ಹೆಸರಾದ ಈ ಇಬ್ಬರು ಸೃಜನಶೀಲ ಪ್ರತಿಭೆಗಳು ಒಂದಾಗುತ್ತಿರುವುದು ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಸದ್ಯ ‘ಜೈ ಹನುಮಾನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿಗೆ ಈ ಸ್ಪೋರ್ಟ್ಸ್ ಡ್ರಾಮಾ ಅವರ ವೃತ್ತಿಜೀವನದಲ್ಲೇ ವಿಭಿನ್ನ ತಿರುವು ನೀಡುವ ಸಾಧ್ಯತೆಯಿದೆ. ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ ಮುಂತಾದವರ ನಟನೆಯ ‘ಮಂಜುಮ್ಮೆಲ್ ಬಾಯ್ಸ್’ ಮೂಲಕ ಚಿದಂಬರಂ ದೊಡ್ಡ ಹೆಸರು ಮಾಡಿದ್ದರು.

ಹಾಗೆಯೇ, ಸ್ಥಳೀಯ ಸೊಗಡನ್ನು ಅದ್ಭುತವಾಗಿ ತೆರೆಗೆ ತರುವ ರಿಷಬ್ ಅವರು ಜಾಗತಿಕವಾಗಿ ಯಶಸ್ಸು ಕಂಡವರು. ಇವರಿಬ್ಬರು ಒಂದಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಪೂರ್ಣ ತಾರಾಗಣ ಹಾಗೂ ತಾಂತ್ರಿಕ ಬಳಗದ ವಿವರಗಳನ್ನು ಶೀಘ್ರದಲ್ಲೇ ಚಿತ್ರತಂಡ ಪ್ರಕಟಿಸಲಿದೆ.

ನಿರ್ಮಾಣದಲ್ಲೂ ರಿಷಬ್ ಸಕ್ರಿಯ

ಇನ್ನೊಂದೆಡೆ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತಮ್ಮ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯ ಮೂಲಕ ಕನ್ನಡದ ಹೊಸ ಪ್ರತಿಭೆಗಳು ಮತ್ತು ವಿಶಿಷ್ಟ ಕಥೆಗಳಿಗೆ ವೇದಿಕೆ ಕಲ್ಪಿಸುವುದನ್ನು ರಿಷಬ್ ಶೆಟ್ಟಿ ಮುಂದುವರಿಸಿದ್ದಾರೆ. ಈ ಸಂಸ್ಥೆಯ ಅಡಿಯಲ್ಲಿ ಈಗಾಗಲೇ ‘ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’, ‘ಕಥಾ ಸಂಗಮ’, ‘ಹೀರೋ’, ‘ಪೆದ್ರೋ’, ‘ಶಿವಮ್ಮ’ ಹಾಗೂ ‘ಲಾಫಿಂಗ್ ಬುದ್ಧ’ದಂತಹ ಸದಭಿರುಚಿಯ ಚಿತ್ರಗಳು ಮೂಡಿಬಂದಿವೆ. ಅದೇ ಹಾದಿಯಲ್ಲಿ ಸಂಸ್ಥೆಯು ಶಿವಚಿರಂತನ ಎಂಬ ಹೊಸ ಪ್ರತಿಭೆಯ ಚೊಚ್ಚಲ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ.

‘ಕಾಂತಾರ: ಚಾಪ್ಟರ್‌ 1’ ಸಿನಿಮಾಗೆ ಒಂದು ವರ್ಷ; ಸಂಭ್ರಮಿಸಿದ ರಿಷಬ್‌ ಶೆಟ್ಟಿ – ಹೊಂಬಾಳೆ ಫಿಲ್ಮ್ಸ್! ಆದ್ರೆ, ಈ ಒಂದು ವಿಷಯವನ್ನು ನೀವು ಗಮನಿಸಿದ್ರಾ?

ಅಸೋಸಿಯೇಟ್ ಡೈರೆಕ್ಟರ್‌ಗೆ ಚಾನ್ಸ್

ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ದುಡಿದಿರುವ ಶಿವಚಿರಂತನ, ಸಹಾಯಕ ನಿರ್ದೇಶಕರಾಗಿ ಪಯಣ ಆರಂಭಿಸಿ ನಂತರ ಜಯತೀರ್ಥ, ಸಂತೋಷ್ ಆನಂದ್‌ರಾಮ್ ಹಾಗೂ ನಿತಿನ್ ಶೆಟ್ಟಿ ಮುಂತಾದ ನಿರ್ದೇಶಕರ ಸುಮಾರು 10-11 ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಮ್’ ಚಿತ್ರದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಒಡನಾಟಕ್ಕೆ ಬಂದ ಶಿವಚಿರಂತನ, ನಂತರ ‘ಕಾಂತಾರ’ ಸರಣಿಯ ಎರಡೂ ಭಾಗಗಳಿಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಪ್ರಮುಖ ಜವಾಬ್ದಾರಿ ನಿಭಾಯಿಸಿದ್ದರು.

ಆಡಿಷನ್‌ ಮೂಲಕ ಕಲಾವಿದರ ಆಯ್ಕೆ

ಈಗ ರಿಷಬ್ ಶೆಟ್ಟಿ ಅವರ ಬೆಂಬಲದೊಂದಿಗೆ ಸ್ವತಂತ್ರ ನಿರ್ದೇಶಕರಾಗಿ ಅಂಗಳಕ್ಕಿಳಿಯುತ್ತಿರುವ ಅವರ ಚೊಚ್ಚಲ ಚಿತ್ರದ ಮುಕ್ತ ಆಡಿಷನ್‌ಗೆ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಎರಡು ಸಾವಿರದಷ್ಟು ಅರ್ಜಿಗಳನ್ನು ನಿರೀಕ್ಷಿಸಿದ್ದ ಚಿತ್ರತಂಡಕ್ಕೆ ಬರೋಬ್ಬರಿ ಆರು ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಅಚ್ಚರಿ ಮೂಡಿಸಿದೆ. ಮೊದಲ ಸುತ್ತಿನಲ್ಲಿ ಸುಮಾರು 1,000 ಪ್ರೊಫೈಲ್‌ಗಳನ್ನು ಪರಿಶೀಲಿಸಲಾಗಿದ್ದು, ಮೂರನೇ ಸುತ್ತಿಗೆ ಆ ಸಂಖ್ಯೆಯನ್ನು 600 ರಿಂದ 700 ಅಭ್ಯರ್ಥಿಗಳಿಗೆ ಇಳಿಸಲಾಗಿದೆ. ಚಿತ್ರದಲ್ಲಿ ಒಟ್ಟು 60ಕ್ಕೂ ಹೆಚ್ಚು ಕಲಾವಿದರು ಬಣ್ಣಹಚ್ಚಲಿದ್ದು, ಇದರಲ್ಲಿ ಶೇ.70 ರಷ್ಟು ಮಂದಿಯನ್ನು ನೇರವಾಗಿ ಆಡಿಷನ್ ಮೂಲಕವೇ ಆಯ್ಕೆ ಮಾಡಲಾಗುತ್ತಿದೆ.