Kantara Chapter 1:ʼಕಾಂತಾರ ಚಾಪ್ಟರ್ 1' ಯಶಸ್ಸಿನ ಬೆನ್ನಲ್ಲೇ ವಾರಣಾಸಿಗೆ ರಿಷಬ್ ಶೆಟ್ಟಿ ಭೇಟಿ; ಗಂಗಾ ಆರತಿಯಲ್ಲಿ ಭಾಗಿ
Rishab Shetty: ಅಕ್ಟೋಬರ್ 2ರಂದು ತೆರೆಗೆ ಬಂದಿರುವ ʼಕಾಂತಾರ ಚಾಪ್ಟರ್ 1' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಜಾಗತಿಕವಾಗಿ 700 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ರಿಷಬ್ ಶೆಟ್ಟಿ ವಾರಣಾಸಿಗೆ ಭೇಟಿ ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದಾರೆ.

-

ಲಖನೌ, ಅ. 17: ರಿಷಬ್ ಶೆಟ್ಟಿ (Rishab Shetty)-ಹೊಂಬಾಳೆ ಫಿಲ್ಮ್ಸ್ (Hombale Films) ಕಾಂಬಿನೇಷನ್ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ. ಘೋಷಣೆಯಾದಾಗಿನಿಂದಲೇ ಸಿನಿಪ್ರಿಯರ ಗಮನ ಸೆಳೆದಿದ್ದ ʼಕಾಂತಾರ ಚಾಪ್ಟರ್ 1ʼ (Kantara: Chapter 1) ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಗೆ ಬಂದಿರುವ ಈ ಚಿತ್ರ ರಿಲೀಸ್ ಆದ 15 ದಿನಗಳಲ್ಲಿ 700 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ರಿಲೀಸ್ ಆದ ಎಲ್ಲ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರತಂಡ ಯಶಸ್ಸಿನ ಸಂಭ್ರಮದಲ್ಲಿ ತೇಲುತ್ತಿದೆ. ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಭಾರತಾದ್ಯಂತ ಓಡಾಡುತ್ತಿದ್ದು, ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಗುರುವಾರ (ಅಕ್ಟೋಬರ್ 16) ಮೈಸೂರು ಚಾಮುಂಡಿ ಬೆಟ್ಟ, ನಂಜನಗೂಡು ದೇವಸ್ಥಾನಕ್ಕೆ ತೆರಳಿದ ರಿಷಬ್ ಶೆಟ್ಟಿ ಶುಕ್ರವಾರ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿ ಗಂಗಾ ಆರತಿಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ರಿಷಬ್ ಶೆಟ್ಟಿ ಅವರ ಎಕ್ಸ್ ಪೋಸ್ಟ್:
नमस्ते काशी 🙏 #KantaraChapter1 pic.twitter.com/cm5ddMAhz9
— Rishab Shetty (@shetty_rishab) October 17, 2025
ಈ ಸುದ್ದಿಯನ್ನೂ ಓದಿ: Kantara Chapter 1: 'ಕಾಂತಾರ: ಚಾಪ್ಟರ್ 1' ಚಿತ್ರತಂಡದಿಂದ ಹೊರಬಿತ್ತು ಮತ್ತೊಂದು ಅಪ್‌ಡೇಟ್; ಮುಖ್ಯ ಪಾತ್ರದಲ್ಲಿ ಕರ್ನಾಟಕ ಮೂಲದ ಬಾಲಿವುಡ್ ನಟ
ವಾರಣಾಸಿಗೆ ಬಂದಿಳಿದ ಅವರು ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿ, ʼʼಇಲ್ಲಿಗೆ ನಾನು ಭೇಟಿ ನೀಡುತ್ತಿರುವುದು ಇದು 2ನೇ ಬಾರಿ. ಮೊದಲ ಬಾರಿ ನಾನು ಕುಟುಂಬ ಸಮೇತ ಬಂದಿದ್ದೆ. ಒಂದು ದಿನ ಶಿವನ ಆಶೀರ್ವಾದಕ್ಕಾಗಿ ಇಲ್ಲಿಗೆ ಬರುತ್ತೇವೆ ಎಂದು ʼಕಾಂತಾರʼ ಆರಂಭಿಸುವಾಗ ನಮ್ಮೊಳಗೆ ಅಂದುಕೊಂಡಿದ್ದೆವು. ಅದರಂತೆ ಇಲ್ಲಿಗೆ ಬಂದಿದ್ದೇನೆʼʼ ಎಂದು ವಿವರಿಸಿದ್ದಾರೆ.

4ನೇ ಶತಮಾನದಲ್ಲಿ, ಕದಂಬರ ಆಡಳಿತದಲ್ಲಿ ಕರಾವಳಿಯಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು ರಿಷಬ್ ಶೆಟ್ಟಿ ಅದ್ಧೂರಿಯಾಗಿ ತೆರೆಮೇಲೆ ತಂದಿದ್ದಾರೆ. ಶಿಷ್ಟರ ರಕ್ಷಣೆಗಾಗಿ, ಅಧರ್ಮ ತಲೆ ಎತ್ತಿದಾಗ ಧರ್ಮ ಉಳಿವಿಗಾಗಿ ಶಿವ ತನ್ನ ಗಣಗಳನ್ನು ಕಳುಹಿಸುತ್ತಾನೆ ಎನ್ನುವ ಸಂದೇಶ ಈ ಚಿತ್ರದಲ್ಲಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಸಾಗುವ ಈ ಚಿತ್ರ ನೋಡುಗರನ್ನು ರೋಮಾಂಚನಗೊಳಿಸಿದೆ.
ಅಪರೂಪದ ದಾಖಲೆ ಬರೆದ ʼಕಾಂತಾರ ಚಾಪ್ಟರ್ 1'
ರಿಲೀಸ್ ಆದ 2 ವಾರಗಳಲ್ಲೇ ʼಕಾಂತಾರ ಚಾಪ್ಟರ್ 1' ಚಿತ್ರ 700 ಕೋಟಿ ರೂ. ಕ್ಲಬ್ ಸೇರಿದೆ. ಜಾಗತಿಕವಾಗಿ 717.50 ಕೋಟಿ ರೂ. ಗಳಿಸಿದೆ. ಆ ಮೂಲಕ 700 ಕೋಟಿ ರೂ. ಕ್ಲಬ್ ಸೇರಿದ 2ನೇ ಕನ್ನಡ ಚಿತ್ರ ಎನಿಸಿಕೊಂಡಿದೆ. 2022ರಲ್ಲಿ ತೆರೆಕಂಡಿದ್ದ ಯಶ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ʼಕೆಜಿಎಫ್ 2' ಸಿನಿಮಾ 1,200 ಕೋಟಿ ರೂ.ಗಿಂತ ಅಧಿಕ ಗಳಿಸಿತ್ತು. ಸದ್ಯ ʼಕಾಂತಾರ ಚಾಪ್ಟರ್ 1' ಈ ವರ್ಷ ಅತ್ಯಧಿಕ ಗಳಿಸಿದ 2ನೇ ಭಾರತೀಯ ಚಿತ್ರ ಎನಿಸಿಕೊಂಡಿದೆ. ಈ ಪಟ್ಟಿಯಲ್ಲಿ ಹಿಂದಿಯ 'ಛಾವʼ ಮೊದಲ ಸ್ಥಾನದಲ್ಲಿದೆ. ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಈ ಸಿನಿಮಾ 800 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ʼಕಾಂತಾರ ಚಾಪ್ಟರ್ 1' ಇದೇ ವೇಗದಲ್ಲಿ ಸಾಗಿದರೆ 1 ಸಾವಿರ ಕೋಟಿ ರೂ. ಕ್ಲಬ್ ಸೇರಲಿದೆ.
ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಜಯರಾಮ್, ರಾಕೇಶ್ ಪೂಜಾರಿ, ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ ಮತ್ತಿತರರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.