ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಯಾಂಡಲ್‌ವುಡ್‌ನಲ್ಲಿ ಎಐ ಕುರಿತ ಮೊದಲ ಸಿನಿಮಾ; ಕೃತಕ ಬುದ್ಧಿಮತ್ತೆ ಆಧಾರಿತ 'ಗರುಡ' ಚಿತ್ರ ಬಿಡುಗಡೆಗೆ ರೆಡಿ

ಆಧುನಿಕ ಜಗತ್ತಿನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಕಾರಾತ್ಮಕ ಮತ್ತು ನಕಾರಾತ್ಮಕ ಮುಖಗಳನ್ನು ಪರಿಚಯಿಸಲು ಕನ್ನಡ ಚಿತ್ರರಂಗದ ಮೊದಲ ಎಐ ಆಧಾರಿತ ಸಿನಿಮಾ 'ಗರುಡ' ಸಜ್ಜಾಗಿದೆ. ಕಿರಣ್ ಎಸ್. ನಿರ್ದೇಶನದ ಈ ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ನಾಲ್ಕು ವಿಭಿನ್ನ ಕಥೆಗಳ ಸಂಯೋಜನೆಯಾಗಿದ್ದು, ನಾನ್-ಲೀನಿಯರ್ ಶೈಲಿಯಲ್ಲಿ ಮೂಡಿಬಂದಿದೆ.

ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸಂಚಲನ ಮೂಡಿಸುತ್ತಿರುವ ಎಐ (Artificial Intelligence) ತಂತ್ರಜ್ಞಾನ ಈಗ ಕನ್ನಡ ಚಿತ್ರರಂಗಕ್ಕೂ ಲಗ್ಗೆ ಇಟ್ಟಿದೆ. ಎಐ ತಂತ್ರಜ್ಞಾನದ ಸಕಾರಾತ್ಮಕ ಮತ್ತು ನಕಾರಾತ್ಮಕ ಮುಖಗಳನ್ನು ಅನಾವರಣಗೊಳಿಸುವ ಸ್ಯಾಂಡಲ್‌ವುಡ್‌ನ ಮೊದಲ ಪ್ರಯತ್ನವಾಗಿ 'ಗರುಡ' ಸಿನಿಮಾ ಮೂಡಿಬಂದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

ನಾಲ್ಕು ಕಥೆ, ಒಂದು ಸಿನಿಮಾ

'ಶೈವಂ ಫಿಲಂಸ್' ಬ್ಯಾನರ್ ಅಡಿಯಲ್ಲಿ ಕಿರಣ್ ಎಸ್. ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಅವರು, "ಇದೊಂದು ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಮತ್ತು ನಾನ್-ಲೀನಿಯರ್ ಶೈಲಿಯ ಸಿನಿಮಾ. ಚಿತ್ರದಲ್ಲಿ ನಾಲ್ಕು ವಿಭಿನ್ನ ಕಥೆಗಳು ಸಾಗುತ್ತಾ ಒಂದು ಹಂತದಲ್ಲಿ ಪರಸ್ಪರ ಬೆರೆಯುತ್ತವೆ. ಶೇ. 30-40 ರಷ್ಟು ಕಥೆ ಎಐ ತಂತ್ರಜ್ಞಾನದ ಮೇಲೆ ಸಾಗಿದರೆ, ಉಳಿದ ಭಾಗವು ಭಾವನಾತ್ಮಕ ಡ್ರಾಮಾವನ್ನು ಒಳಗೊಂಡಿದೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ" ಎಂದು ಮಾಹಿತಿ ನೀಡಿದರು.

ಎಐ-ಲೇಸರ್ ತಂತ್ರಜ್ಞಾನದಿಂದ ದೃಷ್ಟಿ ಚಿಕಿತ್ಸೆಯಲ್ಲಿ ದೊಡ್ಡ ಯಶಸ್ಸು

ಪಾತ್ರವರ್ಗದಲ್ಲಿ ಯಾರೆಲ್ಲಾ ಇದ್ದಾರೆ?

ಈ ಹಿಂದೆ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದ ರೀತ್ವಾನ್ ಶ್ರೀನಿವಾಸ್ ಈ ಚಿತ್ರದ ಮೂಲಕ ನಾಯಕ ನಟರಾಗಿ ಬಡ್ತಿ ಹೊಂದಿದ್ದಾರೆ. "ಕಥೆಯ ಎಲ್ಲಾ ತಾಂತ್ರಿಕ ಬೆಳವಣಿಗೆಗಳ ಹಿಂದೆ ಇರುವ ಪ್ರಮುಖ ಪಾತ್ರ ನನ್ನದು" ಎಂದು ಅವರು ತಿಳಿಸಿದರು. 'ನಮೋ ಭೂತಾತ್ಮ-2' ಖ್ಯಾತಿಯ ದಿವ್ಯಾ ಚಂದ್ರ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು, 'ಅಪೂರ್ವ' ಎಂಬ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಮತ್ತೊಬ್ಬ ಕಲಾವಿದ ಸೌರವ್ ಪ್ರಶಾಂತ್ ಅವರು 'ಹೀರೋ ಕಮ್ ವಿಲನ್' ಶೈಲಿಯ ವಿಶಿಷ್ಟ ಪಾತ್ರದಲ್ಲಿ ಅಬ್ಬರಿಸಲಿದ್ದಾರಂತೆ.

ಎಐ-ಚಾಲಿತ ಗ್ರಾಮೀಣಾಭಿವೃದ್ಧಿ ಮತ್ತು ಬಿಎಫ್ಎಸ್ಐ ಆವಿಷ್ಕಾರ ಉದ್ದೇಶದಿಂದ ಜಾಗತಿಕ ಪಾಲುದಾರಿಕೆ ಘೋಷಿಸಿದ ಕೆಡಿಇಎಂ

ಈ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ?

ಸಂತೋಷ್ ಜೋಶ್ವಾ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಅಭಿಷೇಕ್, ಕಿರಣ್, ವಿವೇಕ್, ಅಭಿ ಮಹೇಶ್, ಸೌಭಾಗ್ಯ ಹಂದ್ರಾಳ್, ವಿನಯ್ ಪ್ರಭಾಕರ್, ದಿಲೀಪ್ ಕುಮಾರ್, ಬಾಹುಬಲಿ ಮಂಜು ಸೇರಿದಂತೆ ದೊಡ್ಡ ತಾರಾಗಣವಿದೆ. ಎಐ ತಂತ್ರಜ್ಞಾನವು ಮುಂದಿನ ಪೀಳಿಗೆಯ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬ ಗಂಭೀರ ವಿಷಯವನ್ನು ಮನರಂಜನೆಯ ಚೌಕಟ್ಟಿನಲ್ಲಿ ಕಟ್ಟಿಕೊಡಲಾಗಿದೆಯಂತೆ. 'ಗರುಡ' ಸಿನಿಮಾವು ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ.