ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻರಾಮಾಯಣʼ ಚಿತ್ರದ ಬಜೆಟ್‌ 4 ಸಾವಿರ ಕೋಟಿನಾ? ಕೊನೆಗೂ ʻರಾವಣʼ ಯಶ್‌ ಕಡೆಯಿಂದಲೇ ಸಿಕ್ತು ಫುಲ್‌ ಕ್ಲಾರಿಟಿ!

'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ನಟ ಯಶ್, 'ರಾಮಾಯಣ' ಚಿತ್ರದ 4,000 ಕೋಟಿ ರೂಪಾಯಿ ಮೊತ್ತವು ಕೇವಲ ನಿರ್ಮಾಣ ವೆಚ್ಚವಲ್ಲ, ಅದರಲ್ಲಿ ಹಾಲಿವುಡ್ ಮಟ್ಟದ ಜಾಗತಿಕ ಪ್ರಚಾರ ವೆಚ್ಚವೂ ಸೇರಿದೆ ಎಂದಿದ್ದಾರೆ.

'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್, ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದ ನಿರೂಪಕ ರಜತ್ ಶರ್ಮಾ ಅವರು, ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ' ಸಿನಿಮಾದ 4,000 ಕೋಟಿ ರೂಪಾಯಿ ಬಜೆಟ್‌ ಕುರಿತು ಪ್ರಶ್ನಿಸಿದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತ ಇದಾಗಿರುವುದರಿಂದ, ಈ ಬಜೆಟ್‌ನ ಅಂಕಿ-ಅಂಶವು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಯಶ್‌ ಕೊಟ್ಟ ಉತ್ತರವಿಲ್ಲಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ನಟ ಯಶ್, "ಈ ಗೊಂದಲವನ್ನು ನಾನು ಬಗೆಹರಿಸುತ್ತೇನೆ. ನೀವೆಲ್ಲ ಕೇಳುತ್ತಿರುವ ಈ ಮೊತ್ತವನ್ನು ಕೇವಲ ಸಿನಿಮಾ ನಿರ್ಮಾಣದ ವೆಚ್ಚವೆಂದು ಪರಿಗಣಿಸಬಾರದು. ಈ ಚಿತ್ರವನ್ನು ಆರಂಭದಿಂದಲೇ ಜಾಗತಿಕ ಮಟ್ಟದಲ್ಲಿ ರೂಪಿಸಲಾಗುತ್ತಿದ್ದು, ಹಾಲಿವುಡ್ ರಿಲೀಸ್ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಚಾರದ ವೆಚ್ಚವೂ ಇದರಲ್ಲಿ ಒಳಗೊಂಡಿದೆ" ಎಂದು ವಿವರಿಸಿದರು.

ಹಾಲಿವುಡ್‌ನಲ್ಲಿ ಯೋಜನೆಗಳನ್ನು ರೂಪಿಸುವುದು ಹೀಗೆಯೇ

"4,000 ಕೋಟಿ ರೂ. ವೆಚ್ಚದ ಈ ಎರಡು ಭಾಗಗಳ ಸಿನಿಮಾಗೆ ಹಾಲಿವುಡ್ ಮಟ್ಟದ ಬಿಡುಗಡೆ ಇರಲಿದೆ. ಈ ವೆಚ್ಚದಲ್ಲಿ ಪ್ರಚಾರದ ಬಜೆಟ್ ಕೂಡ ಸೇರಿದೆ. ಹಾಲಿವುಡ್‌ನಲ್ಲಿ ಯೋಜನೆಗಳನ್ನು ರೂಪಿಸುವುದು ಹೀಗೆಯೇ. ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಅಲ್ಲಿ ಪ್ರಚಾರದ ವೆಚ್ಚವೇ ಸಿನಿಮಾದ ಮೂಲ ಬಜೆಟ್‌ಗಿಂತ ಹೆಚ್ಚಾಗಿರುತ್ತದೆ. 'ರಾಮಾಯಣ' ಮತ್ತು 'ಟಾಕ್ಸಿಕ್' ಎರಡೂ ಚಿತ್ರಗಳನ್ನು ಜಾಗತಿಕ ಸಿನಿಮಾಗಳಾಗಿಯೇ ರೂಪಿಸಲಾಗುತ್ತಿದೆ" ಎಂದು ಯಶ್‌ ತಿಳಿಸಿದರು.

ಭಾರತೀಯರಿಗೆ ಈಗಾಗಲೇ ಚಿರಪರಿಚಿತವಾಗಿರುವ 'ರಾಮಾಯಣ' ಕಥೆಯನ್ನಾಧರಿಸಿ ಸಿನಿಮಾ ಮಾಡುವ ಸವಾಲಿನ ಬಗ್ಗೆಯೂ ಯಶ್ ಅವರನ್ನು ಪ್ರಶ್ನಿಸಲಾಯಿತು. ಈ ಹಿಂದೆ ಇದೇ ಮಹಾಕಾವ್ಯವನ್ನು ಆಧರಿಸಿ ಬಂದ ಹಲವು ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ ಎಂಬುದನ್ನು ರಜತ್ ಶರ್ಮಾ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಯಶ್, "ರಾಮಾಯಣ ಎಲ್ಲರಿಗೂ ತಿಳಿದಿದೆ ಎಂದ ಮಾತ್ರಕ್ಕೆ ಸಿನಿಮಾ ಹೇಗಿರುತ್ತದೆ ಎಂಬುದನ್ನು ಮೊದಲೇ ನಿರ್ಧರಿಸಲಾಗದು. ಪ್ರತಿಯೊಬ್ಬರಿಗೂ ಬಾಲ್ಯದಲ್ಲಿ ಕೇಳಿದ ಕಥೆಗಳ ಆಧಾರದ ಮೇಲೆ ರಾಮಾಯಣದ ಬಗ್ಗೆ ತಮ್ಮದೇ ಆದ ಕಲ್ಪನೆ ಮತ್ತು ಗ್ರಹಿಕೆ ಇರುತ್ತದೆ" ಎಂದರು.

ಅದ್ಭುತವಾಗಿ ಕಟ್ಟಿಕೊಡಲು ಕಠಿಣ ಪರಿಶ್ರಮ

"ರಾಮಾಯಣದ ಬಗ್ಗೆ ಪ್ರತಿಯೊಬ್ಬರಿಗೂ ಅವರದೇ ಆದ ಕಲ್ಪನೆಯಿರುತ್ತದೆ. ನಾನು ಬಾಲ್ಯದಲ್ಲಿ ನನ್ನ ಅಜ್ಜನಿಂದ ರಾಮಾಯಣದ ಕಥೆಗಳನ್ನು ಕೇಳುತ್ತಿದ್ದೆ; ನಂತರ ಧಾರಾವಾಹಿಗಳು ಮತ್ತು ಸಿನಿಮಾಗಳನ್ನು ನೋಡಿದೆ. ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಧಾರ್ಮಿಕ ಮೌಲ್ಯಗಳನ್ನೂ ಸಮತೋಲನದಲ್ಲಿ ಜೋಡಿಸಬೇಕಾಗುತ್ತದೆ. ಇದು ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಕಥೆ. ನನ್ನ ಪಾಲುದಾರ ನಮಿತ್ ಮಲ್ಹೋತ್ರಾ ಇದನ್ನು ಅದ್ಭುತವಾಗಿ ಕಟ್ಟಿಕೊಡಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಜನರು ಖಂಡಿತವಾಗಿ ಆಶೀರ್ವದಿಸುತ್ತಾರೆ" ಎಂದರು ಯಶ್‌.

ರಾಮನ ಪಾತ್ರ ಬಿಟ್ಟು ರಾವಣನ ಪಾತ್ರ ಆರಿಸಿಕೊಂಡಿದ್ದೇಕೆ?

"ರಾಮನ ಒಳ್ಳೆಯತನ ಮತ್ತು ಶ್ರೇಷ್ಠತೆಯನ್ನು ತೋರಿಸಬೇಕಾದರೆ, ರಾವಣನ ಶಕ್ತಿ ಮತ್ತು ಕ್ರೌರ್ಯವನ್ನೂ ಅಷ್ಟೇ ಪ್ರಬಲವಾಗಿ ಬಿಂಬಿಸಬೇಕಾಗುತ್ತದೆ. ನನಗಿಂತ ಉತ್ತಮವಾಗಿ ಅದನ್ನು ಯಾರೂ ತೋರಿಸಲು ಸಾಧ್ಯವಿಲ್ಲ. ಚಿತ್ರದಲ್ಲಿ ಪ್ರೇಕ್ಷಕರು 'ಇವನನ್ನು ಸೋಲಿಸುವುದು ಹೇಗೆ ಸಾಧ್ಯ? ಇವನ ಬಳಿ ಎಲ್ಲಾ ವರಗಳೂ ಇವೆ, ಎಲ್ಲವೂ ಇದೆ' ಎಂದು ಯೋಚಿಸುವಂತಹ ಪರಿಸ್ಥಿತಿ ಸೃಷ್ಟಿಯಾಗಬೇಕು. ಅಂತಹ ರಾವಣನನ್ನು ಪ್ರಭು ಶ್ರೀರಾಮನು ಸೋಲಿಸುತ್ತಾನೆ. ಈ ಮಹಾಕಾವ್ಯಕ್ಕಾಗಿ ನಾವೆಲ್ಲರೂ ನಮ್ಮ ಅಹಂಕಾರಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ" ಎಂದಿದ್ದಾರೆ ಯಶ್.

Ramayana: ದೀಪಾವಳಿಗೂ ಎರಡು ದಿನ ಮುನ್ನ ರಾಮಾಯಣ ತೆರೆಗೆ! ನಮಿತ್ ಮಲ್ಹೋತ್ರಾ ಕೊಟ್ಟ ಕಾರಣ ಇದು

'ಡಿಎನ್‌ಇಜಿ' (DNEG) ಸಂಸ್ಥೆಯು ಈ ಸಿನಿಮಾದ ವಿಎಫ್‌ಎಕ್ಸ್ (VFX) ಜವಾಬ್ದಾರಿಯನ್ನು ಹೊತ್ತಿದೆ. 'ರಾಮಾಯಣ: ಭಾಗ 1' ಚಿತ್ರವು ನವೆಂಬರ್ 6ರಂದು ವಿದೇಶಗಳಲ್ಲಿ ಹಾಗೂ ನವೆಂಬರ್ 8ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. 'ರಾಮಾಯಣ: ಭಾಗ 2' ಚಿತ್ರವು 2027ರ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.