ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವರ್ಲ್ಡ್ ಬಾಕ್ಸ್‌ ಆಫೀಸ್‌ನಲ್ಲಿ ಯಶ್‌ ʻರುದ್ರ ತಾಂಡವʼ! ಮೊದಲ ದಿನ ʻಟಾಕ್ಸಿಕ್‌ʼ ಗಳಿಸಿದ್ದೆಷ್ಟು ಕೋಟಿ?

Toxic Day 1 Collection: ʻಟಾಕ್ಸಿಕ್‌ʼ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ ₹140.75 ಕೋಟಿ ಗಳಿಸಿ ದಾಖಲೆ ಸೃಷ್ಟಿಸಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರವು ದೇಶಾದ್ಯಂತ ₹120.75 ಕೋಟಿ ಹಾಗೂ ವಿದೇಶದಲ್ಲಿ ₹20 ಕೋಟಿ ಬಾಚಿದೆ. 'ಜವಾನ್' ಮತ್ತು 'ಕಲ್ಕಿ' ಗಳಿಕೆಯನ್ನು ಹಿಂದಿಕ್ಕಿದ್ದರೂ 'ಕೆಜಿಎಫ್ 2' ದಾಖಲೆ ಮುಟ್ಟಲಾಗಿಲ್ಲ.

'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ವಿಶ್ವಾದ್ಯಂತ ಬರೋಬ್ಬರಿ ₹140.75 ಕೋಟಿ ಗಳಿಸುವ ಮೂಲಕ ಅದ್ಧೂರಿ ಆರಂಭ ಪಡೆದುಕೊಂಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವು ದೇಶಾದ್ಯಂತ ನಡೆದ 24,579 ಪ್ರದರ್ಶನಗಳಿಂದ ₹120.75 ಕೋಟಿ ಕಲೆಕ್ಷನ್ ಮಾಡಿದ್ದರೆ, ವಿದೇಶಿ ಮಾರುಕಟ್ಟೆಯಿಂದ ₹20 ಕೋಟಿ ಗ್ರಾಸ್ ಸಂಗ್ರಹಿಸಿದೆ.

ಮೊದಲ ದಿನದ ಭಾರತೀಯ ನೆಟ್ ಕಲೆಕ್ಷನ್‌ನಲ್ಲಿ ಶಾರುಖ್ ಖಾನ್ ಅವರ 'ಜವಾನ್', ಪ್ರಭಾಸ್ ಅವರ 'ಕಲ್ಕಿ 2898 ಎಡಿ' ಹಾಗೂ 'ಸಲಾರ್' ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದ್ದರೂ, ಯಶ್ ಅವರದೇ ಹಿಂದಿನ ಬ್ಲಾಕ್‌ಬಸ್ಟರ್ 'ಕೆಜಿಎಫ್: ಚಾಪ್ಟರ್ 2' ದಾಖಲೆಯನ್ನು ಮುರಿಯಲು ಇದಕ್ಕೆ ಸಾಧ್ಯವಾಗಿಲ್ಲ.

ದೇಶಾದ್ಯಂತ 'ರಾಯ'ನ ಹವಾ!

'ಟಾಕ್ಸಿಕ್‌' ಚಿತ್ರದ ಗಳಿಕೆಯಲ್ಲಿ ಉತ್ತರ ಭಾರತ ಸೇರಿದಂತೆ ದೇಶದ ಇತರೆ ಭಾಗಗಳ ಕೊಡುಗೆ ನಿರ್ಣಾಯಕವಾಗಿದೆ. ಭಾರತದ ಒಟ್ಟು ₹120.75 ಕೋಟಿ ಗ್ರಾಸ್ ಕಲೆಕ್ಷನ್‌ನಲ್ಲಿ ಬರೋಬ್ಬರಿ ₹62.75 ಕೋಟಿ ಉತ್ತರ ಭಾರತದ ಹೊರರಾಜ್ಯಗಳಿಂದಲೇ ಹರಿದುಬಂದಿದೆ. ದಕ್ಷಿಣ ಭಾರತದ ಪೈಕಿ ಕರ್ನಾಟಕದಿಂದ ಗರಿಷ್ಠ ಅಂದರೆ ₹30.50 ಕೋಟಿ ಗಳಿಕೆಯಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ₹18.50 ಕೋಟಿ, ತಮಿಳುನಾಡಿನಿಂದ ₹6.75 ಕೋಟಿ ಹಾಗೂ ಕೇರಳದಿಂದ ₹2.25 ಕೋಟಿ ಮೊದಲ ದಿನ ಸಂಗ್ರಹವಾಗಿದೆ. ಈ ಮೂಲಕ ಯಶ್ ಅವರ ಪ್ಯಾನ್-ಇಂಡಿಯಾ ಕ್ರೇಜ್ ಇಡೀ ದೇಶಾದ್ಯಂತ ವ್ಯಾಪಿಸಿರುವುದು ಸಾಬೀತಾಗಿದೆ.

ಭರ್ಜರಿ ಮುಂಗಡ ಬುಕಿಂಗ್

ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಚಿತ್ರದ ಮೊದಲ ದಿನದ ಪ್ರದರ್ಶನಕ್ಕಾಗಿ ದೇಶಾದ್ಯಂತ ಸುಮಾರು 18.48 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಬ್ಲಾಕ್ಡ್ ಸೀಟುಗಳನ್ನು ಒಳಗೊಂಡಂತೆ ದೇಶೀಯ ಮುಂಗಡ ಬುಕಿಂಗ್ ಮೊತ್ತ ₹73.43 ಕೋಟಿ ತಲುಪಿದ್ದರೆ, ಅಮೆರಿಕ ಸೇರಿದಂತೆ ವಿದೇಶಿ ಮಾರುಕಟ್ಟೆಗಳಿಂದ ವಿಶ್ವಾದ್ಯಂತ ₹85 ಕೋಟಿಗೂ ಅಧಿಕ ಮೊತ್ತ ಮುಂಗಡವಾಗಿಯೇ ಹರಿದುಬಂದಿತ್ತು.

Yash: ಕೊನೆಗೂ ತೆಲಂಗಾಣದಲ್ಲಿ 'ಟಾಕ್ಸಿಕ್‌' ಟಿಕೆಟ್ ಬುಕಿಂಗ್ ಆರಂಭ; ಚಿತ್ರತಂಡಕ್ಕೆ ಅಲ್ಲಿನ ಸರ್ಕಾರ ವಿಧಿಸಿರುವ ನಿಯಮಗಳೇನು ಗೊತ್ತಾ?

ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಪಾತ್ರಗಳ ವಿಶಿಷ್ಟ ಚಿತ್ರಣ ಹಾಗೂ ಬೋಲ್ಡ್ ದೃಶ್ಯಗಳಿದ್ದರೂ ಸಿಬಿಎಫ್‌ಸಿಯಿಂದ ಯಾವುದೇ ಕಟ್ ಇಲ್ಲದೆ 'ಎ' (A) ಪ್ರಮಾಣಪತ್ರ ಪಡೆದುಕೊಂಡಿರುವ ಈ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರದ ಜಟಿಲ ಕಥಾಹಂದರ ಹಾಗೂ ಏರಿಳಿತದ ನಿರೂಪಣೆ ಚಿತ್ರದ ಆಕರ್ಷಣೆಯನ್ನು ಕೊಂಚ ತಗ್ಗಿಸಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಆದಾಗ್ಯೂ, ಮೊದಲ ದಿನದ ಭರ್ಜರಿ ಗಳಿಕೆಯು ಮೊದಲ ವಾರಾಂತ್ಯದ ಬಾಕ್ಸ್ ಆಫೀಸ್ ಮೇಲೆ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದೆ.