ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Toxic Movie: 'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ 'ರಾಕಿ ಭಾಯ್‌' ಯಶ್ ಖಡಕ್ ಉತ್ತರ!

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿನ ಟೀಕೆಗಳಿಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ್ದಾರೆ. ಈ ಹಾಡು ಕಾಂಡೋಮ್ ಜಾಹೀರಾತಿನಂತಿದೆ ಎಂದವರಿಗೆ ಚಾಟಿ ಬೀಸಿದ ಯಶ್, ದೃಶ್ಯಗಳಲ್ಲಿ ಎಲ್ಲಿಯೂ ಅಶ್ಲೀಲತೆಯ ಗೆರೆ ದಾಟಿಲ್ಲ ಎಂದಿದ್ದಾರೆ.

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡು ಬಿಡುಗಡೆಯಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ಹಾಡಿನಲ್ಲಿ ನಾಯಕ ಯಶ್ ಹಾಗೂ ಕಿಯಾರಾ ಅಡ್ವಾಣಿ ನಡುವಿನ ಇಂಟಿಮೇಟ್ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಕೆಲವರಿಂದ ಟೀಕೆಗಳಿಗೂ ಕಾರಣವಾಗಿತ್ತು.

ಜಾಹೀರಾತಿಗೂ ದುಡ್ಡು ಪಡೆದುಕೊಳ್ಳುತ್ತೇನೆ

ಖ್ಯಾತ ಟಿವಿ ಶೋ 'ಆಪ್ ಕಿ ಅದಾಲತ್'ನಲ್ಲಿ ಭಾಗವಹಿಸಿದ್ದ ಯಶ್ ಅವರಿಗೆ ಕಾರ್ಯಕ್ರಮದ ನಿರೂಪಕ ರಜತ್ ಶರ್ಮಾ ಇದೇ ವಿಚಾರವಾಗಿ ನೇರ ಪ್ರಶ್ನೆ ಎಸೆದಿದ್ದರು. "ತಬಾಹಿ ಹಾಡಿನ ವಿಡಿಯೋ ನೋಡಿದ ಕೆಲವರು ಇದನ್ನು ಕಾಂಡೋಮ್ ಜಾಹೀರಾತಿಗೆ ಹೋಲಿಸುತ್ತಿದ್ದಾರಲ್ಲ?" ಎಂಬ ಪ್ರಶ್ನೆಗೆ ಯಶ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ, ತಮಾಷೆಯ ಧಾಟಿಯಲ್ಲೇ ಖಡಕ್ ಉತ್ತರ ನೀಡಿದ್ದಾರೆ. "ಒಂದು ವೇಳೆ ನಾನು ಕಾಂಡೋಮ್ ಜಾಹೀರಾತು ಮಾಡುವುದೇ ಆದಲ್ಲಿ, ಅಧಿಕೃತವಾಗಿ ಹಣ ಪಡೆದುಕೊಂಡೇ ಮಾಡುತ್ತೇನೆ. ಹೀಗೆ ಪುಕ್ಕಟೆಯಾಗಿ ಅಂತೂ ಖಂಡಿತ ಮಾಡುವುದಿಲ್ಲ" ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

ಅಶ್ಲೀಲತೆ ಖಂಡಿತ ತಪ್ಪು. ಆದರೆ..

ಚಿತ್ರದಲ್ಲಿನ ಆಪ್ತ ದೃಶ್ಯಗಳು ಮತ್ತು ಬೋಲ್ಡ್ ಕಂಟೆಂಟ್ ಕುರಿತು ಮುಕ್ತವಾಗಿ ಮಾತನಾಡಿದ ಯಶ್, ಚಿತ್ರತಂಡ ಎಲ್ಲಿಯೂ ಅಶ್ಲೀಲತೆಯ ಗೆರೆ ದಾಟಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. "ಅಶ್ಲೀಲತೆ ಖಂಡಿತ ತಪ್ಪು. ಆದರೆ ನೀವು ಹಾಡನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಕಿಸ್ಸಿಂಗ್ ದೃಶ್ಯ ಕೂಡ ಇಲ್ಲ. ಚಿತ್ರೀಕರಣದ ವೇಳೆ ಪ್ರತಿಯೊಂದಕ್ಕೂ ಒಂದು ಗೌರವಯುತ ಮಿತಿ ಇರುತ್ತದೆ ಮತ್ತು ಅದರ ಅರಿವು ನಮಗಿದೆ. ದೃಶ್ಯಗಳನ್ನು ಕಲಾತ್ಮಕವಾಗಿ, ಸೌಂದರ್ಯಪ್ರಜ್ಞೆಯೊಂದಿಗೆ ಸೆರೆಹಿಡಿಯುವುದು ನಮ್ಮ ಕೆಲಸ. ಪರದೆಯ ಮೇಲೆ ಅದು ಅದ್ಧೂರಿಯಾಗಿ ಹಾಗೂ ಆಕರ್ಷಕವಾಗಿ ಕಾಣಿಸುವುದು ಸಿನಿಮಾದ ಶಕ್ತಿ ಮತ್ತು ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ" ಎಂದು ಯಶ್ ಸ್ಪಷ್ಟಪಡಿಸಿದರು.

ಯುವಜನತೆ ಪ್ರಶ್ನೆ ಮಾಡುತ್ತಿದ್ದಾರೆ

ಇದೇ ಸಂದರ್ಭದಲ್ಲಿ 'ಟಾಕ್ಸಿಕ್' ಸಿನಿಮಾದ ಮೂಲ ಆಶಯ ಹಾಗೂ ಸಮಾಜಕ್ಕೆ ಅದು ನೀಡುವ ಸಂದೇಶದ ಬಗ್ಗೆಯೂ ಯಶ್ ಬೆಳಕು ಚೆಲ್ಲಿದ್ದಾರೆ. ಈ ಚಿತ್ರವು ಪ್ರಮುಖವಾಗಿ ಇಂದಿನ ಯುವ ಪೀಳಿಗೆಯ (Gen-Z) ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದ ಅವರು, "ಹಳೆಯ ತಲೆಮಾರಿನ ಜನರು ಸಮಾಜದಲ್ಲಿ ನಿಗದಿಪಡಿಸಿರುವ ಕಟ್ಟುಪಾಡುಗಳು ಮತ್ತು ನಿಯಮಗಳ ಬಗ್ಗೆ ಇಂದಿನ ಯುವಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಹಿರಿಯರ ಜೊತೆಗಿನ ಭಿನ್ನಾಭಿಪ್ರಾಯಗಳು ಹಾಗೂ ಹೊಸ ಆಲೋಚನೆಗಳೇನು ಎಂಬುದನ್ನು ಈ ಕಥೆ ಚರ್ಚಿಸುತ್ತದೆ. ಹಳೆಯ ಪದ್ಧತಿಗಳ ಬಗ್ಗೆ ಪ್ರಶ್ನಿಸುವುದರಲ್ಲಿ ತಪ್ಪೇನಿದೆ? ಪ್ರತಿಯೊಂದಕ್ಕೂ ನಿಗದಿತ ನಿಯಮಗಳೇ ಏಕೆ ಇರಬೇಕು? ಎಂಬ ಯುವಕರ ಪ್ರಶ್ನೆಗಳ ಸುತ್ತಲೇ ಈ ಸಿನಿಮಾ ಸಾಗುತ್ತದೆ" ಎಂದು ವಿವರಿಸಿದರು.

Tabaahi Song: ʻಟಾಕ್ಸಿಕ್‌ʼ ಸಿನಿಮಾದ ಮೊದಲ ಸಾಂಗ್‌ ರಿಲೀಸ್‌; ʻತಬಾಹಿʼ ಹಾಡಿನಲ್ಲಿ ಬಯಲಾಯ್ತು ನಟ ಯಶ್ ಚಾಣಕ್ಷತನ!

ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲು ಸಜ್ಜಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಬಹುಕೋಟಿ ವೆಚ್ಚದ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಆಗಲಿದೆ.