ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

First Salary: ತಮ್ಮ ಮೊದಲ ಸಂಬಳ ಎಷ್ಟು ಎಂಬುದನ್ನು ತಿಳಿಸಿದ ನಟಿ ಶ್ರುತಿ; ಪವನ್‌ ವೆಂಕಟೇಶ್‌ಗೆ ಸಿಕ್ತು ಹಿರಿಯರ ಆಶೀರ್ವಾದ

First Salary Short Movie: ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣದಲ್ಲಿ, ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶಿಸಿದ 'ಫಸ್ಟ್‌ ಸ್ಯಾಲರಿ' ಕಿರುಚಿತ್ರವು ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಶ್ರುತಿ ಅವರು, ಕಿರುಚಿತ್ರದ ತಾಯಿ-ಮಗನ ಸೆಂಟಿಮೆಂಟ್ ನೋಡಿ ಭಾವುಕರಾದರು. ಈ ಸಂದರ್ಭದಲ್ಲಿ ಅವರು ತಮ್ಮ ಮೊದಲ ಸಂಬಳದ ಬಗ್ಗೆ ಮಾತನಾಡಿದರು.

ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣ ಮಾಡಿರುವ, ಅವರ ಪುತ್ರ ಪವನ್ ವೆಂಕಟೇಶ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ʻಫಸ್ಟ್ ಸ್ಯಾಲರಿʼ ಶಾರ್ಟ್‌ ಮೂವೀಯನ್ನು ರಿಲೀಸ್ ಮಾಡಲಾಗಿದೆ. ಅದಕ್ಕಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟಿ ಶ್ರುತಿ ಮುಂತಾದವರು ಆಗಮಿಸಿ, ಪವನ್‌ಗೆ ಶುಭ ಹಾರೈಸಿದ್ದಾರೆ. ʻಫಸ್ಟ್ ಸ್ಯಾಲರಿʼ ಕಿರುಚಿತ್ರಕ್ಕೆ ಆಶೀರ್ವದಿಸಿದ್ದಾರೆ.

ಫಸ್ಟ್‌ ಸ್ಯಾಲರಿ ಬಗ್ಗೆ ಶ್ರುತಿ ಏನಂದ್ರು?

"ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಡಿ ವಿ ಸುಧೀಂದ್ರ ಅವರು ನಿರ್ಮಿಸಿದ್ದ ʻನಗುನಗುತಾ ನಲಿʼ ಚಿತ್ರದಲ್ಲಿ ನಾನು ಅಭಿನಯಿಸಿದ್ದೆ. ಇಂದು ಅವರ ಕುಟುಂಬದ ಪವನ್ ವೆಂಕಟೇಶ್ ಕಿರುಚಿತ್ರ ನಿರ್ದೇಶಿಸಿದ್ದಾನೆ. ಈ ಫಸ್ಟ್‌ ಸ್ಯಾಲರಿ ಕಿರುಚಿತ್ರದ ತಾಯಿ - ಮಗನ ಸೆಂಟಿಮೆಂಟ್ ಸನ್ನಿವೇಶಗಳು ನನ್ನ ಮನಸ್ಸಿಗೆ ಬಹಳ ಹತ್ತಿರವಾಯಿತು. ಕಣ್ಣಂಚಲಿ ನೀರು ತರಿಸಿತು. ಅಂದಹಾಗೆ, ನನಗೆ ಸಿಕ್ಕ ಫಸ್ಟ್ ಸ್ಯಾಲರಿ ಐನೂರು ರೂಪಾಯಿಗಳು" ಎಂದು ಶ್ರುತಿ ಹೇಳಿದ್ದಾರೆ.

First Salary Short Film: ಪವನ್ ವೆಂಕಟೇಶ್ ನಿರ್ದೇಶನದ ʼಫಸ್ಟ್ ಸ್ಯಾಲರಿʼ ಕಿರುಚಿತ್ರದ ಪೋಸ್ಟರ್ ರಿಲೀಸ್‌

ರಾಕ್ ಲೈನ್ ವೆಂಕಟೇಶ್ ಹಾರೈಕೆ

"ಡಿ ವಿ ಸುಧೀಂದ್ರ ಅವರು ನನಗೆ ಬಹಳ ಆತ್ಮೀಯರು. ಈಗ ಪಿ ಆರ್‌ ಓ ವೆಂಕಟೇಶ್ ಪುತ್ರ ಪವನ್ ವೆಂಕಟೇಶ್ ʻಫಸ್ಟ್ ಸ್ಯಾಲರಿʼ ಕಿರುಚಿತ್ರವನ್ನು ನಿರ್ದೇಶಿಸುವ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ. ಕಿರುಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಕಲಾವಿದರು ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ‌. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ಹುಡುಗನಿಗೆ ಉತ್ತಮ ಅವಕಾಶಗಳು ಸಿಗಲಿ" ಎಂದು ರಾಕ್ ಲೈನ್ ವೆಂಕಟೇಶ್ ಹಾರೈಸಿದರು.

ಫಸ್ಟ್‌ ಸ್ಯಾಲರಿ ನಿರ್ಮಾಪಕರು ಹೇಳಿದ್ದೇನು?

"ನಮ್ಮ ಚಿಕ್ಕಪ್ಪ ಡಿ ವಿ ಸುಧೀಂದ್ರ ಅವರು ಪಾಲುದಾರಿಕೆಯಲ್ಲಿ ಆರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಈಗ ನಾನು ಮೊದಲ ಬಾರಿಗೆ ಈ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ. ಮಗ ಪವನ್ ಹಾಗೂ ಸ್ನೇಹಿತರು ಒಂದೊಳ್ಳೆ ಕಿರುಚಿತ್ರ ಮಾಡುತ್ತಿದ್ದೇವೆ ಎಂದು ಹೇಳಿದಾಗ ನಾನು ಅವರ ಜೊತೆಗೆ ನಿಂತೆ. ಕಿರುಚಿತ್ರ ಅವರು ಹೇಳಿದ ಹಾಗೆ ಚೆನ್ನಾಗಿ ಮಾಡಿದ್ದಾರೆ. ಸಮಾರಂಭಕ್ಕೆ ಬಂದು ಪ್ರೋತ್ಸಾಹ ನೀಡಿ ಹಾರೈಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ, ನಟಿ‌ ಶ್ರುತಿ ಅವರಿಗೆ, ಗುರುಗಳಾದ ಕಮಲಾಕರ್‌ ಹಾಗೂ ಇಡೀ ಮಾಧ್ಯಮದ ಬಳಗಕ್ಕೆ ಧನ್ಯವಾದಗಳು" ಎಂದು ನಿರ್ಮಾಪಕ ಸುಧೀಂದ್ರ ವೆಂಕಟೇಶ್ ಹೇಳಿದ್ದಾರೆ.

ವಿಜಯ್ ಶಿವಕುಮಾರ್ ಬರೆದ ಕಥೆಯನ್ನು ʻಫಸ್ಟ್ ಸ್ಯಾಲರಿʼ ಕಿರುಚಿತ್ರವಾಗಿಸಿದ್ದಾರೆ ಪವನ್. ‌ ಇದರಲ್ಲಿ ವಿಜಯ್‌ ಶಿವಕುಮಾರ್‌, ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ, ರಕ್ಷಿತ್ ನಟಿಸಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ರಿಚರ್ಡ್ ಡ್ಯಾನಿಯಲ್ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಮನೋಜ್ ಕುಮಾರ್ ಮತ್ತು ರವಿ ಸಾಸನೂರು ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. "ಈ ಕಿರುಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ನಾನು ನಿರ್ದೇಶಕನಾಗುವ ಕನಸನ್ನು ನನ್ನ ತಂದೆ ಸುಧೀಂದ್ರ ವೆಂಕಟೇಶ್ ಅವರು ನನಸು ಮಾಡಿದ್ದಾರೆ" ಎಂದು ಸಂತೋಷ ವ್ಯಕ್ತಪಡಿಸಿದರು ನಿರ್ದೇಶಕ ಪವನ್ ವೆಂಕಟೇಶ್.