ನಟಿ ತಾರಾ ಅನುರಾಧ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ಧಾರೆ. ಅದೇ ರೀತಿ ಹಿರಿಯ ನಟ ಶಶಿಕುಮಾರ್ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ರು ಸುಮಾರು 26 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವುದು ಒಂದು ದಾಖಲೆ. ಅಂದಹಾಗೆ, ಒಮ್ಮೆ ಶಶಿಕುಮಾರ್ ಪಾದಪೂಜೆ ಮಾಡಿದ್ದಕ್ಕೆ ತಾರಾ ಎಂಎಲ್‌ಸಿ ಆಗಿ ಆಯ್ಕೆ ಆಗಿದ್ರಂತೆ! ಅದೇಗೆ? ಮುಂದೆ ಓದಿ.
ಇಂಟರೆಸ್ಟಿಂಗ್ ವಿಚಾರ ತಿಳಿಸಿದ ತಾರಾ
ಹೌದು, ತಾರಾ ಮತ್ತು ಶಶಿಕುಮಾರ್ ಅವರು ರುದ್ರ ಅವತಾರ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದರು, ಈ ಚಿತ್ರದ ಬಗ್ಗೆ ಮಾತನಾಡುವಾಗ ಹಳೆಯ ವಿಚಾರಗಳನ್ನ ಹಂಚಿಕೊಂಡಿದ್ದಾರೆ. "ನಾನು ಮತ್ತು ಶಶಿ ಒಂದು ಸಿನಿಮಾದಲ್ಲಿ ಗಂಡ ಹೆಂಡತಿಯಾಗಿ ನಟಿಸುತ್ತಿದ್ದೆವು. ಆಗ ನನಗೆ ಶಶಿಯ ಪಾದಪೂಜೆ ಮಾಡುವ ಸೀನ್ ಇತ್ತು. ಆಗ ಸರಿಯಾಗಿ ಪೂಜೆ ಮಾಡು, ನೀನು ಎಂಎಲ್‌ಸಿ ಆಗ್ತೀಯಾ ಅಂತ ಶಶಿ ಹೇಳಿದ್ದ. ಆಗ ಪೂಜೆ ಮಾಡುವ ಟೈಮ್‌ಗೆ ಹೂವು ಬಿದ್ದಿತ್ತು. ಶಶಿ ಕಾಲಿಗೆ ನಾನು ನಮಸ್ಕಾರ ಮಾಡಬೇಕಿತ್ತು. ಆಗ ಅವನು, ನೀನು ಎಂಎಲ್‌ಸಿ ಆಗ್ತಿಯಾ ಕಣೇ ಎಂದು ಮೂರು ಬಾರಿ ಹೇಳಿ, ಆಶೀರ್ವಾದ ಮಾಡಿದ್ದ. ಅದಾಗಿ ಎರಡು ದಿನಕ್ಕೆ ಎಂಎಲ್‌ಸಿ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆ ಆಗಿತ್ತು" ಎಂದು ತಾರಾ ಹೇಳಿಕೊಂಡಿದ್ದಾರೆ.
ರುದ್ರ ಅವತಾರ ಸಿನಿಮಾ ಬಗ್ಗೆ...
ಸವಾದ್ ಮಂಗಳೂರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ರುದ್ರ ಅವತಾರ ಸಿನಿಮಾಗೆ ಪ್ರೇಮ್ ಜಿ ಪ್ರೊಡಕ್ಷನ್ಸ್ ಮೂಲಕ ದಾಂಡೇಲಿಯ ಉದ್ಯಮಿ ಡಾ. ಪ್ರೇಮಾನಂದ್ ವಿ ಗವಸ ಅವರು ಹಣ ಹಾಕುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಟೀಸರ್ ಬಿಡುಗಡೆ ಆಗಿದೆ. ನವೆಂಬರ್ 24ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
SL Bhyrappa: ಭೈರಪ್ಪ ನಿಧನ ಸಾಹಿತ್ಯಲೋಕಕಷ್ಟೇ ಅಲ್ಲ ಚಿತ್ರರಂಗಕ್ಕೂ ತುಂಬಲಾರದ ನಷ್ಟ; ತಾರಾ ಅನುರಾಧಾ
ಶಶಿಕುಮಾರ್ ಹೇಳಿದ್ದೇನು?
"ಈ ಚಿತ್ರದಲ್ಲಿ ಹೀರೋ, ಹೀರೋಯಿನ್ ಅನ್ನೋ ಕಥೆಯಲ್ಲ, ಇಲ್ಲಿ ಕಂಟೆಂಟೇ ಹೀರೋ, ಈ ಚಿತ್ರದಲ್ಲಿ ನಾನೊಬ್ಬ ಆಟೋ ಡ್ರೈವರ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಹೆಣ್ಣುಮಗಳ ತಂದೆಯಾಗಿ ನಟಿಸುತ್ತಿದ್ದೇನೆ, ಸಂಗೀತಾ ನನ್ನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಮಗಳಿಗಾಗಿ ಹೋರಾಡೋ ತಂದೆಯ ಪಾತ್ರ ನನ್ನದು. ಚಿತ್ರದಲ್ಲಿ ಹೃದಯಸ್ಪರ್ಶಿ ಸೀನ್ಸ್ ತುಂಬಾನೇ ಇವೆ. ಈ ಚಿತ್ರದ ಪ್ರಥಮಾರ್ಧ ಕಥೆ ಕೇಳಿದಾಗಲೇ ನನಗೆ ರೋಮಾಂಚನವಾಯಿತು" ಎನ್ನುತ್ತಾರೆ ಶಶಿಕುಮಾರ್.
Actress Tara: ಹಿರಿಯ ನಟ, ರಾಜಕಾರಣಿ ಅಂಬರೀಷ್‌ಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ; ತಾರಾ ಮನವಿ
ಮಧ್ಯಮವರ್ಗದ ಕಥೆ ಇರುವ ಸಿನಿಮಾ ಇದು
"ರುದ್ರ ಅವತಾರ ಶಿವನ ಮತ್ತೊಂದು ರೂಪ. ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳ ರಕ್ಷಣೆಗೋಸ್ಕರ ಯಾವ ರೀತಿ ಹೋರಾಡುತ್ತಾರೆ, ಹೇಗೆ ರುದ್ರ ಅವತಾರ ತಾಳುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇನೆ. ಮಕ್ಕಳ ಕನಸುಗಳನ್ನು ಈಡೇರಿಸುವ ಸಲುವಾಗಿ, ಪೋಷಕರು ತಮ್ಮ ಕನಸು, ಆಸೆಗಳನ್ನು ಕಟ್ಟಿಟ್ಟು ಜೀವನ ನಡೆಸುತ್ತಾರೆ, ಅದೇ ತಮ್ಮ ಮಕ್ಕಳಗೆ ತೊಂದರೆ ಎದುರಾದಾಗ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಾರೆ. ಅದನ್ನು ನಮ್ಮ ಚಿತ್ರದಲ್ಲಿ ಹೇಳುತ್ತಿದ್ದೇವೆ. ಈ ಕಥೆಯಲ್ಲಿ ಪ್ರಮುಖವಾಗಿ ಮೂವರ ಪಾತ್ರಗಳನ್ನು ಶಿವನ ರುದ್ರ ಅವತಾರದಲ್ಲಿ ನೋಡಬಹುದು, ಅವರಲ್ಲಿ ಮುಖ್ಯವಾಗಿ ಬರುವವರೇ ಶಶಿಕುಮಾರ್" ಎನ್ನುತ್ತಾರೆ ನಿರ್ದೇಶಕ ಸವಾದ್ ಮಂಗಳೂರು.
"ನನಗೆ ಹಣ ಮಾಡೋದಕ್ಕಿಂತ ಸಮಾಜಕ್ಕೆ ಸಂದೇಶ ಒಳ್ಳೆಯ ನೀಡುವುದು ಮುಖ್ಯ ಉದ್ದೇಶ. ಸಿನಿಮಾ ಮಾಡಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು, ನಿರ್ದೇಶಕರು ಹೇಳಿದ ಈ ಕಥೆ ನನಗೆ ತುಂಬಾ ಇಷ್ಟವಾಯ್ತು. ಇದೊಂದೇ ಸಿನಿಮಾ ಅಲ್ಲ, ಮುಂದೆಯೂ ಚಿತ್ರಗಳನ್ನು ಮಾಡುವ ಪ್ಲಾನ್ ಇದೆ" ಎನ್ನುತ್ತಾರೆ ನಿರ್ಮಾಪಕ ಪ್ರೇಮಾನಂದ್. ಶಶಿಕುಮಾರ್, ತಾರಾ, ಸಂಗೀತಾ ಜೊತೆಗೆ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಅಂಕಿತಾ ಜಯರಾಮ್, ಸಾಧನಾ ಮುಂತಾದವರು 'ರುದ್ರ ಅವತಾರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.