ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೆರೆಮೇಲೆ ಬರಲಿದೆ ಲೆಜೆಂಡರಿ ಗಾಯಕಿ ಪಿ. ಸುಶೀಲಾ ಲೈಫ್‌ ಸ್ಟೋರಿ; ‘ಗಾನಕೋಗಿಲೆ’ ಪಾತ್ರದಲ್ಲಿ ಕನ್ನಡ ನಟಿ ರುಕ್ಮಿಣಿ ವಸಂತ್? ‌

P. Susheela Biopic: ಗಾಯಕಿ ಪಿ. ಸುಶೀಲಾ ಅವರ ಬಯೋಪಿಕ್‌ ಸೆಟ್ಟೇರುತ್ತಿದ್ದು, ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುವ ಸಾಧ್ಯತೆ ಇದೆ. ಆಸ್ಕರ್ ಪುರಸ್ಕೃತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಈ ಬಯೋಪಿಕ್‌ ಅನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಭಾರತೀಯ ಚಿತ್ರರಂಗದಲ್ಲಿ ಸದ್ಯ ಬಯೋಪಿಕ್‌ಗಳ ಅಲೆ ಹೊಸ ಸಂಚಲನ ಸೃಷ್ಟಿಸುತ್ತಿದೆ. ಒಂದು ಕಾಲದಲ್ಲಿ ಕೇವಲ ರಾಜಕೀಯ ನಾಯಕರು ಮತ್ತು ಕ್ರೀಡಾಪಟುಗಳ ಜೀವನ ಪಯಣಕ್ಕೆ ಮಾತ್ರ ಸೀಮಿತವಾಗಿದ್ದ ಬೆಳ್ಳಿಪರದೆ, ಇದೀಗ ಸಂಗೀತ ದಿಗ್ಗಜರ ಯಶೋಗಾಥೆಯನ್ನು ಅನಾವರಣಗೊಳಿಸಲು ವೇದಿಕೆಯಾಗುತ್ತಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಮ್ರಾಜ್ಞಿ, ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಚರಿತ್ರೆ ಸೆಟ್ಟೇರಿದ ಬೆನ್ನಲ್ಲೇ, ಇದೀಗ ಭಾರತೀಯ ಚಿತ್ರರಂಗದ ಮತ್ತೋರ್ವ ದಂತಕಥೆ, ‘ಗಾನಕೋಗಿಲೆ’ ಪಿ. ಸುಶೀಲಾ ಅವರ ಜೀವನಗಾಥೆಯೂ ಬೆಳ್ಳಿತೆರೆಗೆ ಬರಲು ಅಣಿಯಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ.

ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರಶ್ಮಿಕಾ

ಸಂಗೀತ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್ ಈಗಾಗಲೇ ದೇಶಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ‘ಜೆರ್ಸಿ’ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಬಹುನಿರೀಕ್ಷಿತ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರೆಹಮಾನ್‌ ನಿರ್ಮಾಣದಲ್ಲಿ ಸುಶೀಲಾ ಬಯೋಪಿಕ್

ಈ ಸಂಭ್ರಮದ ನಡುವೆಯೇ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ಗಾಯಕಿ ಪಿ. ಸುಶೀಲಾ ಅವರ ಜೀವನವನ್ನ ತೆರೆಮೇಲೆ ತರುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಸಾವಿರಾರು ಸುಮಧುರ ಗೀತೆಗಳಿಗೆ ಧ್ವನಿಯಾಗಿ ಗಿನ್ನೆಸ್ ದಾಖಲೆ ಬರೆದಿರುವ ಹಿನ್ನೆಲೆ ಗಾಯಕಿ ಪಿ. ಸುಶೀಲಾ ಅವರ ಜೀವನಾಧಾರಿತ ಚಿತ್ರವನ್ನು ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ನಿರ್ಮಾಣ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ ನಟನೆ; ನಿರ್ಮಾಣದ ಹೊಣೆಹೊತ್ತ ರಾಕ್‌ಲೈನ್ ವೆಂಕಟೇಶ್‌

ಸುಶೀಲಮ್ಮನ ಪಾತ್ರದಲ್ಲಿ ರುಕ್ಮಿಣಿ ವಸಂತ್

ಪಿ. ಸುಶೀಲಾ ಅವರ ಕುಟುಂಬದೊಂದಿಗೆ ಒಡನಾಟ ಹೊಂದಿರುವ ರೆಹಮಾನ್, ಅವರ ಸಂಗೀತ ಸಾಧನೆಯನ್ನು ಜಾಗತಿಕ ಗುಣಮಟ್ಟದಲ್ಲಿ ಬೆಳ್ಳಿತೆರೆಗೆ ತರಲು ವಿಶೇಷ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಇನ್ನು ಈ ಬಯೋಪಿಕ್‌ನಲ್ಲಿ ಪಿ. ಸುಶೀಲಾ ಅವರ ಪಾತ್ರಕ್ಕೆ ಕನ್ನಡತಿ, ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸುಶೀಲಮ್ಮ ಅವರ ಮುಖಚಹರೆ, ಸ್ವಾಭಾವಿಕ ಸೌಂದರ್ಯ ಹಾಗೂ ಗಾಂಭೀರ್ಯಕ್ಕೆ ರುಕ್ಮಿಣಿ ಅತ್ಯಂತ ಸೂಕ್ತ ಆಯ್ಕೆ ಎಂದು ಸೋಷಿಯಲ್ ಮೀಡಿಯಾದಲ್ಲೂ ಸಿನಿಪ್ರಿಯರು ಕಾಮೆಂಟ್‌ ಮಾಡುತ್ತಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಸದ್ಯದಲ್ಲೇ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದ್ದು, ಭಾರತೀಯ ಸಂಗೀತ ಜಗತ್ತಿನ ಇಬ್ಬರು ಮಹಾನ್ ಗಾಯಕಿಯರ ಕಥೆಗಳು ಒಂದೇ ಕಾಲಘಟ್ಟದಲ್ಲಿ ದೃಶ್ಯರೂಪ ಪಡೆಯುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.