Rukmini Vasanth: ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ; ನಿರ್ಮಾಪಕನಿಂದ ಘೋಷಣೆ
NV Prasad: ಸದ್ಯ ದೇಶದ ಗಮನ ಸೆಳೆದಿರುವ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಹೊಸ ಚಿತ್ರದ ಕುರಿತಾಗಿ ಬಿಗ್ ಅಪ್‌ಡೇಟ್ ಹೊರ ಬಿದ್ದಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದ್ದು, ನಿರ್ಮಾಪಕ ಎನ್.ವಿ. ಪ್ರಸಾದ್ ಇದನ್ನು ಅಧಿಕೃತಗೊಳಿಸಿದ್ದಾರೆ.

-

ಹೈದರಾಬಾದ್: ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿ ಸದ್ಯ ಪರಭಾಷೆಯಲ್ಲಿಯೂ ಛಾಪು ಮೂಡಿಸುತ್ತಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಈಗ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ, ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ʼಕಾಂತಾರ: ಚಾಪ್ಟರ್ 1' (Kantara: Chapter 1) ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅದರ ಚಿತ್ರೀಕರಣ ಪೂರ್ತಿಯಾಗಿದ್ದು ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಮಧ್ಯೆ ಅವರು ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಿನಿಮಾಕ್ಕೂ ಆಯ್ಕೆಯಾಗಿದ್ದಾರೆ ಎನ್ನುವ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ನಿರ್ಮಾಪಕ ಮತ್ತು ವಿತರಕ ಎನ್.ವಿ. ಪ್ರಸಾದ್ (NV Prasad) ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ರುಕ್ಮಿಣಿ ವಸಂತ್ ಕಾಲಿವುಡ್‌ನಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ʼಮದರಾಸಿʼ ಚಿತ್ರ ಸೆಪ್ಟೆಂಬರ್ 5ರಂದು ತೆರೆ ಕಾಣಲಿದ್ದು, ಪ್ರಚಾರ ಕಾರ್ಯ ಆರಂಭವಾಗಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ಶಿವ ಕಾರ್ತಿಕೇಯನ್, ರುಕ್ಷಿಣಿ ವಸಂತ್ ಜತೆಗೆ ವಿದ್ಯುತ್ ಜಮ್ಮ್‌ವಾಲ್, ಬಿಜು ಮೆನನ್ ಮತ್ತಿತರರು ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದ ವೇಳೆ ಎನ್.ವಿ. ಪ್ರಸಾದ್ ಮಾತನಾಡಿ, ರುಕ್ಮಿಣಿ ವಸಂತ್ ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
Producer NV Prasad confirmed that #RukminiVasanth will be the female lead in #NTRNeel and #ToxicMovie."#NTR | #YashBOSS | #DRAGON pic.twitter.com/ztTUaKq8Le
— Whynot Cinemas (@whynotcinemass_) August 31, 2025
ಎನ್.ವಿ. ಪ್ರಸಾದ್ ಹೇಳಿದ್ದೇನು?
ʼʼಮದರಾಸಿʼ ಚಿತ್ರದಲ್ಲಿ ನಾಯಕಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಪ್ರಸ್ತುತ ಅವರು ʼಕಾಂತಾರ 2ʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜೂ. ಎನ್‌ಟಿಆರ್ ಸಿನಿಮಾಕ್ಕೂ ಆಯ್ಕೆಯಾಗಿದ್ದಾರೆ. ಯಶ್ ಅವರ ʼಟಾಕ್ಸಿಕ್ʼ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ 1 ತಿಂಗಳು ʼಕಾಂತಾರʼದ ಪ್ರಮೋಷನ್‌ನಲ್ಲಿ ಭಾಗಿಯಾಗಲಿದ್ದಾರೆ. ಅದಾದ ಬಳಿಕ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಲಿದ್ದಾರೆʼʼ ಎಂದಿದ್ದಾರೆ. ಆ ಮೂಲಕ ಮತ್ತೊಂದು ಬಿಗ್ ಪ್ರಾಜೆಕ್ಟ್ ಚಿತ್ರದಲ್ಲಿ ರುಕ್ಮಿಣಿ ನಟಿಸುವುದು ಪಕ್ಕಾ ಆದಂತಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Rukmini Vasanth: ರಿಷಬ್ ಶೆಟ್ಟಿ, ಜೂ. ಎನ್‌ಟಿಆರ್ ಬಳಿಕ ಯಶ್‌ಗೂ ರುಕ್ಮಿಣಿ ವಸಂತ್ ನಾಯಕಿ; ಯಾವ ಚಿತ್ರ?
ಟೈಟಲ್ ಇನ್ನೂ ಅಂತಿಮಗೊಂಡಿಲ್ಲ
ಮೊದಲ ಬಾರಿಗೆ ತೆರೆ ಮೇಲೆ ಒಂದಾಗುತ್ತಿರುವ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ಇನ್ನೂ ಟೈಟಲ್ ಅಂತಿಮಗೊಂಡಿಲ್ಲ. ಈ ಸಿನಿಮಾಕ್ಕೆ ʼಡ್ರಾಗನ್ʼ ಎನ್ನುವ ಟೈಟಲ್ ಇಡಲಾಗಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಈ ಚಿತ್ರ ಪ್ರಶಾಂತ್ ನೀಲ್ ಅವರ ʼಕೆಜಿಎಫ್ʼ ಸರಣಿ ಮತ್ತು ʼಸಲಾರ್ʼ ಸಿನಿಮಾಗಳಿಗಿಂತಲೂ ದೊಡ್ಡದಾಗಿರಲಿದೆ ಎಂದು ವರದಿಯೊಂದು ತಿಳಿಸಿದೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಆರಂಭವಾಗಿದೆ. 2026ರ ಜೂನ್ 25ರಂದು ಈ ಸಿನಿಮಾ ತೆರೆ ಕಾಣಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರವೂ ತೆರೆ ಕಾಣಲಿದ್ದು, ಸಾಕಷ್ಟು ಆಕ್ಷನ್ ದೃಶ್ಯಗಳಿರಲಿದೆಯಂತೆ. ರುಕ್ಮಿಣಿ ಪಾತ್ರಕ್ಕೂ ಸಾಕಷ್ಟ ಒತ್ತು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಕ್ ಟು ಬ್ಯಾಕ್ ಬಹುನಿರೀಕ್ಷಿತ ಚಿತ್ರಗಳಲ್ಲಿ ರುಕ್ಮಿಣಿ
ಸದ್ಯ ರುಕ್ಮಿಣಿ ಬ್ಯಾಕ್ ಟು ಬ್ಯಾಕ್ ಬಹುನಿರೀಕ್ಷಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼಕಾಂತಾರ: ಚಾಪ್ಟರ್ 1ʼ, ʼಮದರಾಸಿʼ ಈಗಾಗಲೇ ನಿರೀಕ್ಷೆ ಮೂಡಿದ್ದು, ಜೂ. ಎನ್‌ಟಿಆರ್ ಚಿತ್ರ, ʼಟಾಕ್ಸಿಕ್ʼ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಹಜ ಅಭಿನಯ, ಸ್ನಿಗ್ಧ ಸೌಂದರ್ಯದಿಂದಲೇ ಗಮನ ಸೆಳೆಯುತ್ತಿರುವ ಅವರು ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.