ʻಶೆಡ್‌ನಲ್ಲಿ ಹಲ್ಲೆ, ಮೋರಿಯಲ್ಲಿ ಶವʼ; ರೇಣುಕಾಸ್ವಾಮಿ ಕೊಲೆ ಪ್ರಕರಣ ನೆನಪಿಸಿದ ʻಬಾಸ್ʼ ಸಿನಿಮಾ ಟೀಸರ್! ಚಿತ್ರತಂಡ ಹೇಳೋದೇನು?
Boss Movie Controversy: ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ 'ಬಾಸ್: ಸತ್ಯಮೇವ ಜಯತೇ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದು 2024ರ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎಂಬ ಅನುಮಾನ ಮೂಡಿಸಿದೆ. ಟೀಸರ್‌ನಲ್ಲಿರುವ ಶೆಡ್‌ನಲ್ಲಿ ಹಲ್ಲೆ, ಶವ ಸಾಗಾಟ ಎಲ್ಲವು ಆ ಪ್ರಕರಣವನ್ನು ನೆನಪಿಸುತ್ತಿವೆ.
-
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ʻಬಾಸ್ʼ ಹೆಸರಿನಲ್ಲಿ ಸಿನಿಮಾಗಳು ಬಂದಿವೆ. ಈ ಮಧ್ಯೆ ತಮ್ಮ ನೆಚ್ಚಿನ ನಟರಿಗೆ ಅಭಿಮಾನಿಗಳು ಬಾಸ್ ಬಾಸ್ ಅಂತ ಕರೆಯೋದು ಮಾಮೂಲಾಗಿದೆ. ಈ ಮಧ್ಯೆ 'ಬಾಸ್' ಹೆಸರಿನ ಮತ್ತೊಂದು ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರಕ್ಕೆ 'ಸತ್ಯಮೇವ ಜಯತೇ' ಎಂಬ ಅಡಿಬರಹ ಕೂಡ ಇದೆ. ಈ ಹಿಂದೆ 'ಮಡಮಕ್ಕಿ', 'ನಂಜುಂಡಿ ಕಲ್ಯಾಣ', 'ಮಿ. ನಟ್ವರ್ ಲಾಲ್' ಸಿನಿಮಾಗಳಲ್ಲಿ ನಟಿಸಿದ್ದ ತನುಷ್ ಶಿವಣ್ಣ, ಈಗ 'ಬಾಸ್' ಚಿತ್ರಕ್ಕೆ ಹೀರೋ ಆಗಿದ್ದಾರೆ. ಆದರೆ ಇದರ ಟೀಸರ್ ನೋಡಿದವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನೆನಪಾಗಿದೆ.
ಏನಿದೆ ಟೀಸರ್‌ನಲ್ಲಿ?
‘ಬಾಸ್’ ಚಿತ್ರದ ಟೀಸರ್‌ನ ಆರಂಭದಲ್ಲಿಯೇ ‘ನೈಜ ಘಟನೆಗಳಿಂದ ಸ್ಫೂರ್ತಿ ಪಡೆಯಲಾಗಿದೆ’ ಎಂದು ತೋರಿಸಲಾಗಿದೆ. ನಂತರ "ನಮ್ಮ ಅಪ್ಪ - ಅಮ್ಮನಿಗೆ ವಯಸ್ಸಾಗಿದೆ, ನನ್ನ ಹೆಂಡ್ತಿ ಪ್ರೆಗ್ನೆಂಟು, ನನ್ನ ಬಿಟ್ಬಿಡಿ" ಅಂತ ಒಬ್ಬ ವ್ಯಕ್ತಿ ಗೋಳಾಡುತ್ತಿರುವ ಧ್ವನಿ ಕೇಳಿಸುತ್ತದೆ. ಶೆಡ್‌ನಲ್ಲಿ ವ್ಯಕ್ತಿ ಮೇಲೆ ಹಲ್ಲೆ.. ಸ್ಕಾರ್ಪೀಯೋ ಕಾರಿನಲ್ಲಿ ಶವ ಸಾಗಾಟ ಮಾಡುವುದು, ಮೋರಿ ಬಳಿ ಶವ ಪತ್ತೆ, ‘ಬಾಸ್’ ಪತ್ನಿ ಶೀಲಾ.. ಪೊಲೀಸರ ಮುಂದೆ ಬಾಸ್ ಪಾತ್ರಧಾರಿ, ತಾನು ಮುಗ್ಧ ಅಂತ ಹೇಳೋದು.. ಮುಂತಾದ ದೃಶ್ಯಗಳೆಲ್ಲಾ ಈ ಟೀಸರ್‌ನಲ್ಲಿ ಇವೆ.
Renuka swamy murder case: ರೇಣುಕಾಸ್ವಾಮಿ ತಾಯಿಯನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್ ಮನವಿ
ಇದೆಲ್ಲಾ ನೋಡುತ್ತಿದ್ದರೆ, ʻಬಾಸ್ʼ ಚಿತ್ರಕ್ಕೆ 2024ರ ರೇಣುಕಾಸ್ವಾಮಿ ಕೊಲೆ ಪ್ರಕರಣವೇ ಸ್ಪೂರ್ತಿ ಇರಬಹುದಾ ಎಂಬ ಅನುಮಾನ ಮೂಡದೇ ಇರದು. ಹಾಗಾದರೆ, ಪರೋಕ್ಷವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನೇ ಬಾಸ್ ಸಿನಿಮಾ ಮಾಡಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಚಿತ್ರಕ್ಕೆ ವಿ. ಲವ ಎಂಬುವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಹೀರೋ ಕೂಡ ಒಬ್ಬ ದೊಡ್ಡ ನಟ ಎಂಬುದು ವಿಶೇಷ.
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್ ಗ್ಯಾಂಗ್ ವಿರುದ್ಧ ನ.3ಕ್ಕೆ ದೋಷಾರೋಪ ನಿಗದಿ
ನಿರ್ದೇಶಕರು ಹೇಳೋದೇನು?
"ಇದು ಕಾಲ್ಪನಿಕ ಕಥೆ.. ಸಮಾಜದಲ್ಲಿ ನಡೆದ ಅನೇಕ ಘಟನೆಗಳನ್ನ ಪ್ರೇರಣೆ ಆಗಿ ತೆಗೆದುಕೊಂಡು ಕಾಲ್ಪನಿಕವಾಗಿ ಈ ಸಿನಿಮಾವನ್ನು ಮಾಡಿದ್ದೇವೆ. 2024 ಮತ್ತು 2025ರ ನಡುವೆ ನಡೆದ ಕೆಲವು ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಸೆಲೆಬ್ರಿಟಿಯೊಬ್ಬ ಕೊಲೆ ಮಾಡಿ, ಬಳಿಕ ಹೇಗೆ ರಾಜಕೀಯಕ್ಕೆ ಬಲಿ ಆಗ್ತಾನೆ ಅನ್ನೋದೇ ಕಥೆ" ಎನ್ನುತ್ತಾರೆ ನಿರ್ದೇಶಕ ಲವ. ಸದ್ಯ ಈ ಕುತೂಹಲ ತಣಿಯಲು ಸಿನಿಮಾ ಬಿಡುಗಡೆವರೆಗೂ ಕಾಯಬೇಕಿದೆ.