ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದರ ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ. 'ಸರ್ಚ್' ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿಯ ಮುದ್ದಿನಪಾಳ್ಯದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ಕ್ಯಾಮೆರಾ ಆನ್ ಮಾಡಿದ ನಟ ಶ್ರೀನಗರ ಕಿಟ್ಟಿ, "ಎಸ್. ನಾರಾಯಣ್ ನನ್ನ ಗುರುಗಳು, ಪಂಕಜ್ ಅವರ ಮಗ. ರಮೇಶ್ ಅವರು ಈ ಚಿತ್ರವನ್ನು ಅಚ್ಚುಕಟ್ಟಾಗಿ ಹಾಗೂ ಚೊಕ್ಕವಾಗಿ ಪೂರ್ಣಗೊಳಿಸಲಿ" ಎಂದು ಶುಭ ಹಾರೈಸಿದರು.
ಹಿಂದೆಂದೂ ಮಾಡಿರದಂಥ ಪಾತ್ರ ಸಿಕ್ಕಿದೆ
ಚಿತ್ರದ ನಾಯಕ ಪಂಕಜ್ ಮಾತನಾಡಿ, "ನಟ ಶ್ರೀಮುರಳಿ ಅವರು ಈಗಾಗಲೇ ಚಿತ್ರದ ಟೈಟಲ್ ಲಾಂಚ್ ಮಾಡಿಕೊಟ್ಟಿದ್ದರು. ಇದೀಗ ಗಣ್ಯರ ಸಮ್ಮುಖದಲ್ಲಿ ಮುಹೂರ್ತ ನೆರವೇರಿದೆ. ಮೊದಲನೆಯದಾಗಿ ನಾನು ಈ ಚಿತ್ರವನ್ನು ಒಪ್ಪಿಕೊಳ್ಳಲು ಕಥೆಯೇ ಪ್ರಮುಖ ಕಾರಣ. ಇದು ಒಂದೇ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ಸವಾಲಾಗಿ ಹುಡುಕಾಟ ನಡೆಸುವ ವಿಭಿನ್ನ ವ್ಯಕ್ತಿಯ ಪಾತ್ರ. ಕೊಂಚ ಬಿಡುವಿನ ಬಳಿಕ ಚಿತ್ರ ಮಾಡುತ್ತಿರುವುದಂತೂ ನಿಜ. ನಮ್ಮ ತಂದೆಯ ಮಾತಿನಂತೆ ಪ್ರತಿ ಸಿನಿಮಾಕ್ಕೂ ನಾನು ಸಮರ್ಪಣಾಭಾವದಿಂದಲೇ ಕೆಲಸ ಮಾಡುತ್ತೇನೆ. ಆದರೆ ಈ ಬಾರಿ ಈ ಹಿಂದೆಂದೂ ಮಾಡಿರದಂಥ ಪಾತ್ರ ದೊರೆತಿರುವುದು ಖುಷಿ ತಂದಿದೆ. ಅದರಲ್ಲೂ ನಿರ್ದೇಶಕ ರಮೇಶ್ ಅವರು ಕಲಾವಿದರಿಂದ ತಮಗೆ ಬೇಕಾದುದನ್ನು ಹೇಳಿ ಮಾಡಿಸಿಕೊಳ್ಳುವ ಸಮರ್ಥರು. ಹಾಗಾಗಿ ಸಹಜವಾಗಿಯೇ ನಿರೀಕ್ಷೆಗಳಿವೆ" ಎಂದರು.
ʻಸರ್ಚ್ʼ ಕಥೆ ಏನು?
'ದಿಗ್ಗಜರು' ಸಿನಿಮಾ ತೆರೆಕಂಡ ಕಾಲದಿಂದಲೇ ಚಿತ್ರರಂಗದೊಂದಿಗೆ ಒಡನಾಟ ಹೊಂದಿರುವವರು ನಿರ್ದೇಶಕ ವೈ. ಬಿ. ರಮೇಶ್ ಕೋಟೆ. ಸಿನಿಮಾ ಹಾಗೂ ಧಾರಾವಾಹಿ ಕ್ಷೇತ್ರಗಳಲ್ಲಿ ಸಹ-ನಿರ್ದೇಶಕರಾಗಿ ಅನುಭವ ಹೊಂದಿರುವ ರಮೇಶ್ ಅವರಿಗೆ ನಿರ್ದೇಶಕರಾಗಿ ಇದು ಪ್ರಥಮ ಚಿತ್ರ.
ಈ ಬಗ್ಗೆ ಮಾಹಿತಿ ನೀಡಿದ ಅವರು, "ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಅದನ್ನು 25 ರಾತ್ರಿಗಳಲ್ಲಿ ಚಿತ್ರೀಕರಿಸಲಿದ್ದೇವೆ. ಚಿತ್ರವನ್ನು ಹುಬ್ಬಳ್ಳಿ ಭಾಷೆಯಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲೇ ಚಿತ್ರೀಕರಿಸುವ ಯೋಜನೆಯಿತ್ತು. ಆದರೆ ಅಲ್ಲಿಗೆ ಹೋಗಿ ನೋಡಿದಾಗ ಆ ಜಾಗ ಸಾಕಷ್ಟು ಬದಲಾಗಿತ್ತು. ಹಾಗಾಗಿ ಬೆಂಗಳೂರಲ್ಲೇ ಸರ್ಕಲ್ ಸೆಟ್ ನಿರ್ಮಿಸಿ, ಬೆಂಗಳೂರಿನ ಕಥೆಯಾಗಿಯೇ ಚಿತ್ರೀಕರಿಸಲಿದ್ದೇವೆ. ಚಿತ್ರದಲ್ಲಿ ನಾಯಕನ ಕಣ್ಣೆದುರೇ ನಾಪತ್ತೆಯಾಗುವ ಹುಡುಗಿಯ ಹುಡುಕಾಟವಿದೆ. ಇದೇ ಸಂದರ್ಭದಲ್ಲಿ ಮತ್ತೊಂದೆಡೆ ಸಾಫ್ಟ್‌ವೇರ್ ಉದ್ಯೋಗಿ ಹುಡುಗನೊಬ್ಬನ ಲಗೇಜ್ ಮತ್ತು ಲ್ಯಾಪ್‌ಟಾಪ್‌ನ ಹುಡುಕಾಟವೂ ನಡೆಯುತ್ತಿರುತ್ತದೆ. ಈ ಸಿನಿಮಾ ಪ್ರೇಕ್ಷಕರನ್ನು ಕಡೆಯವರೆಗೂ ಕುತೂಹಲದಿಂದ ಹಿಡಿದಿಟ್ಟುಕೊಳ್ಳಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಮಾಂಗಲ್ಯ' ಧಾರಾವಾಹಿಯಲ್ಲಿ ನಟಿಸಿದ್ದೆ
'ಸರ್ಚ್' ಚಿತ್ರದಲ್ಲಿ ಪಂಕಜ್ ಅವರಿಗೆ ಜೋಡಿಯಾಗಿ ದಾಮಿನಿ ನಟಿಸುತ್ತಿದ್ದಾರೆ. "ನನ್ನದು ಮೂಲತಃ ಕೊಡಗು. ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಾಂಗಲ್ಯ' ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ" ಎಂದು ಅವರು ತಿಳಿಸಿದರು. ನಟಿ ಕೃತ್ತಿಕಾ ಗೌಡ ಮಾತನಾಡಿ, "ಈ ಚಿತ್ರದಲ್ಲಿನ ಪ್ರತಿಯೊಂದು ಪಾತ್ರವೂ ನನ್ನ ಪಾತ್ರದ ಸುತ್ತವೇ ಸುತ್ತುತ್ತದೆ. ಅದರ ಕಾರಣ ತಿಳಿಯಬೇಕಾದರೆ ನೀವು ಸಿನಿಮಾ ನೋಡಬೇಕು. ನನಗೆ ನಿರ್ದೇಶಕ ರಮೇಶ್ ಅವರು ಕಿರುಚಿತ್ರವೊಂದರ ಮೂಲಕ ಪರಿಚಯವಾದರು. ಈಗ ಅವರ ನಿರ್ದೇಶನದ 'ಸರ್ಚ್' ಚಿತ್ರದಲ್ಲಿ ಪ್ರಮುಖ ಪಾತ್ರ ದೊರೆತಿರುವುದು ಸಂತಸ ತಂದಿದೆ" ಎಂದರು. ಇದು ತಾವು ನಟಿಸುತ್ತಿರುವ 5ನೇ ಚಿತ್ರವೆಂದು ಅವರು ತಿಳಿಸಿದರು.
ʻಬಹುಪರಾಕ್ʼ ನಂತರ ʻಅಮರ್ಥʼ ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ನಟಿಸಿದ ಮೇಘನಾ ರಾಜ್ ಸರ್ಜಾ - ಶ್ರೀನಗರ ಕಿಟ್ಟಿ
ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ನಟ ಸುಭಾನ್ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಸುಭಾನ್, ಈ ಚಿತ್ರದ ಸಹ-ನಿರ್ಮಾಪಕರೂ ಹೌದು. ಯುವ ನಿರ್ಮಾಪಕ ಯೋಗೇಶ್ ಎನ್. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಯೋಗೇಶ್ ಅವರಿಗೆ ತಂದೆ, ಪತ್ರಕರ್ತ ಸೌರಭ ನಾಗರಾಜ್ ಅವರ ಬೆಂಬಲವೂ ಇದೆ. "ಚಿತ್ರವು ಉತ್ತಮ ಕಥಾವಸ್ತು ಹೊಂದಿದೆ. ಕಥೆ ಕೇಳುವಾಗಲೇ ನನಗೆ ಮಲಯಾಳಂ ಸಿನಿಮಾದ ಅನುಭವವಾಯಿತು, ಹಾಗಾಗಿ ನಿರ್ಮಾಣಕ್ಕೆ ಮುಂದಾದೆ" ಎಂದು ಯೋಗೇಶ್ ತಿಳಿಸಿದರು. ಅಶೋಕ್ ಕೆ. ರಾಜ್ ಛಾಯಾಗ್ರಹಣವಿರುವ 'ಸರ್ಚ್' ಚಿತ್ರಕ್ಕೆ ಶ್ರೀ ಅಂಜನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸೆಪ್ಟೆಂಬರ್ 15ರಿಂದ ಚಿತ್ರೀಕರಣ ಆರಂಭವಾಗಲಿದೆ.