ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಓಂಕಾರ’ ಚಿತ್ರದ ಶೂಟಿಂಗ್ ವೇಳೆ ಬೆತ್ತಲಾಗಿ ನಟಿಸಲು ನಿರಾಕರಿಸಿದ್ದ ಸೈಫ್ ಅಲಿ ಖಾನ್; 20 ವರ್ಷಗಳ ಹಿಂದೆ ಸೆಟ್‌ನಲ್ಲಿ ಆಗಿದ್ದೇನು?

ಬಾಲಿವುಡ್‌ನ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾ ‘ಓಂಕಾರ’ ಚಿತ್ರೀಕರಣದ ವೇಳೆ ತಮಗೆ ಎದುರಾಗಿದ್ದ ವಿಚಿತ್ರ ಸನ್ನಿವೇಶವನ್ನು ನಟ ಸೈಫ್ ಅಲಿ ಖಾನ್ ನೆನಪಿಸಿಕೊಂಡಿದ್ದಾರೆ. ಕನ್ನಡಿಯ ಮುಂದೆ ಸಂಪೂರ್ಣ ಬೆತ್ತಲಾಗಿ ನಟಿಸುವಂತೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಸೂಚಿಸಿದ್ದಾಗ ಸೈಫ್ ಅದನ್ನು ನಿರಾಕರಿಸಿದ್ದರಂತೆ!

ಬಾಲಿವುಡ್‌ನ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾದ ‘ಓಂಕಾರ’ ಚಿತ್ರೀಕರಣದ ಸಂದರ್ಭದಲ್ಲಿ ತಮಗೆ ಎದುರಾಗಿದ್ದ ವಿಚಿತ್ರ ಸನ್ನಿವೇಶವೊಂದನ್ನು ನಟ ಸೈಫ್ ಅಲಿ ಖಾನ್ ನೆನಪಿಸಿಕೊಂಡಿದ್ದಾರೆ. ಚಿತ್ರದ ಅತ್ಯಂತ ಪ್ರಮುಖ ದೃಶ್ಯವೊಂದರಲ್ಲಿ ಸಂಪೂರ್ಣ ಬೆತ್ತಲಾಗಿ ನಟಿಸುವಂತೆ ನಿರ್ದೇಶಕ ವಿಶಾಲ್ ಭಾರದ್ವಾಜ್ ತಮಗೆ ಸೂಚಿಸಿದ್ದರು ಎಂಬ ರಹಸ್ಯವನ್ನು ಸೈಫ್ ಈಗ ಬಹಿರಂಗಪಡಿಸಿದ್ದಾರೆ.

ಮುಜುಗರದಿಂದಾಗಿ ಆಫರ್ ನಿರಾಕರಿಸಿದ್ದ ಸೈಫ್

ವಿಲಿಯಂ ಶೇಕ್ಸ್‌ಪಿಯರ್‌ನ ಅವರ ‘ಒಥೆಲೋ’ ನಾಟಕದ ರೂಪಾಂತರವಾಗಿದ್ದ ‘ಓಂಕಾರ’ ಸಿನಿಮಾ 2006ರಲ್ಲಿ ತೆರೆಕಂಡು ಭಾರಿ ಯಶಸ್ಸು ಸಾಧಿಸಿತ್ತು. ಈ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆಯನ್ನು ನೆನಪಿಸಿಕೊಂಡ ಸೈಫ್, "ಯಾವುದೇ ಬಟ್ಟೆ ಇಲ್ಲದೆ ಕನ್ನಡಿಯ ಎದುರು ನಿಂತು ನಟಿಸುವ ಒಂದು ಸುದೀರ್ಘ ದೃಶ್ಯವನ್ನು ವಿಶಾಲ್ ಭಾರದ್ವಾಜ್ ಕಲ್ಪಿಸಿಕೊಂಡಿದ್ದರು. ಅದೊಂದು ರೋಮಾಂಚಕಾರಿ ಆಲೋಚನೆಯಾಗಿದ್ದರೂ, ಸೆಟ್‌ನಲ್ಲಿ ಭಾರಿ ಜನಸಂದಣಿ ಇದ್ದಿದ್ದರಿಂದ ನನಗೆ ತೀವ್ರ ಮುಜುಗುರ ಉಂಟಾಯಿತು. ಹಾಗಾಗಿ ನಾನು ಅದಕ್ಕೆ ಒಪ್ಪಲಿಲ್ಲ" ಎಂದಿದ್ದಾರೆ.

Saif Ali Khan: ವಾರಕ್ಕೆ ಸಾವಿರ ರೂ. ಸಂಬಳ, ನಿರ್ಮಾಪಕಿ ಕೆನ್ನೆಗೆ 10 ಮುತ್ತು; ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟ ಸೈಫ್ ಅಲಿ ಖಾನ್

ಇದೇ ವೇಳೆ ತಮಾಷೆಯಾಗಿ ನಿರ್ದೇಶಕರಿಗೆ ಷರತ್ತು ವಿಧಿಸಿದ್ದ ಸೈಫ್, "ವಿಶಾಲ್ ಭಾರದ್ವಾಜ್ ಅವರೇ ಸ್ವತಃ ಬಟ್ಟೆಯಿಲ್ಲದೆ ನಿಂತು ನಿರ್ದೇಶನ ಮಾಡುವುದಾದರೆ ಮಾತ್ರ ನಾನು ಬೆತ್ತಲಾಗುತ್ತೇನೆ ಎಂದಿದ್ದೆ. ಆದರೆ ಅವರು ಅದಕ್ಕೆ ಒಪ್ಪದ ಕಾರಣ ನಾನು ನಿರಾಕರಿಸಿದೆ" ಎಂದು ನಗುತ್ತಾ ಹೇಳಿದ್ದಾರೆ.

ಈಗ ಪಶ್ಚಾತ್ತಾಪ ಪಡುತ್ತಿರುವ ನಟ

ಸುಮಾರು 2 ದಶಕಗಳ ನಂತರ ಆ ದಿನಗಳನ್ನು ಹಿಂತಿರುಗಿ ನೋಡಿರುವ ಸೈಫ್ ಅಲಿ ಖಾನ್, ಅಂದು ತಾವು ಆ ರಿಸ್ಕ್ ತಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. "ಅಂದು ನಾನು ಬೆತ್ತಲಾಗಿ ನಟಿಸಿದ್ದರೆ ಹಿಂಬದಿಯಿಂದ ಸಿಲೂಯೆಟ್ ಮಾದರಿಯಲ್ಲಿ ಅದನ್ನು ಚಿತ್ರೀಕರಿಸಬಹುದಿತ್ತು. ಅದು ‘ಲಂಗ್ಡಾ ತ್ಯಾಗಿ’ ಪಾತ್ರದ ಅಸಹಾಯಕತೆ ಮತ್ತು ಆಕ್ರೋಶದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ನಟನಾಗಿ ಅಂತಹ ರಿಸ್ಕ್ ತೆಗೆದುಕೊಳ್ಳಲು ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಇಂದಿನ ದಿನಗಳಲ್ಲಾದರೆ ನಾನು ಖಂಡಿತ ಆ ದೃಶ್ಯವನ್ನು ಮಾಡುತ್ತೇನೆ" ಎಂದು ಸೈಫ್ ಹೇಳಿದ್ದಾರೆ.

Saif Ali Khan: ವಾರಕ್ಕೆ ಸಾವಿರ ರೂ. ಸಂಬಳ, ನಿರ್ಮಾಪಕಿ ಕೆನ್ನೆಗೆ 10 ಮುತ್ತು; ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟ ಸೈಫ್ ಅಲಿ ಖಾನ್

ಚಿತ್ರೀಕರಣದ ದಿನ ಬದಲಾದ ದೃಶ್ಯ

ವಿಶಾಲ್ ಭಾರದ್ವಾಜ್ ಅವರ ಅದ್ಭುತ ಸಿನಿಮಾ ಮೇಕಿಂಗ್ ಶೈಲಿಗೆ ಈ ದೃಶ್ಯವೇ ಸಾಕ್ಷಿ. ಮೂಲತಃ ಈ ದೃಶ್ಯವನ್ನು ಲಂಗ್ಡಾ ತ್ಯಾಗಿ ತನ್ನ ಸೇಡಿನ ಯೋಜನೆಯನ್ನು ವಿವರಿಸುವ ಸುದೀರ್ಘ ಡೈಲಾಗ್ ಆಗಿ ಬರೆಯಲಾಗಿತ್ತು. ಆದರೆ ಶೂಟಿಂಗ್ ದಿನದಂದು ಭಾರದ್ವಾಜ್ ಎಲ್ಲಾ ಸಂಭಾಷಣೆಗಳನ್ನು ಕೈಬಿಟ್ಟು, ಕೇವಲ ದೃಶ್ಯ ರೂಪದ ವಿಧಾನವನ್ನು ಆರಿಸಿಕೊಂಡಿದ್ದರು. ಪಾತ್ರವು ಮಾತನಾಡುವ ಬದಲು ಕನ್ನಡಿಯ ಮುಂದೆ ಮೌನವಾಗಿ ನಿಂತು, ಭಾರವಾದ ಲೋಹದ ವಸ್ತುವಿನಿಂದ ಕನ್ನಡಿ ಒಡೆಯುವಂತೆ ಕಲ್ಪಿಸಿಕೊಂಡಿದ್ದರು.

"ಒಡೆದ ಕನ್ನಡಿಯ ಚೂರುಗಳ ಪ್ರತಿಬಿಂಬ ಆತನ ಭಾವನಾತ್ಮಕ ಸ್ಥಿತಿಯನ್ನು ಬಿಂಬಿಸುವಂತೆ ಹಾಗೂ ರಕ್ತಸಿಕ್ತ ಕೈಯಿಂದ ಹಣೆಗೆ ರಕ್ತದ ತಿಲಕವಿಟ್ಟುಕೊಳ್ಳುವ ಮೂಲಕ ಯಾವುದೇ ಪದಗಳಿಲ್ಲದೆ ಸೇಡನ್ನು ಹೇಳುವಂತೆ ವಿಶಾಲ್ ಈ ದೃಶ್ಯವನ್ನು ಅದ್ಭುತವಾಗಿ ಡೈರೆಕ್ಟ್ ಮಾಡಿದ್ದರು. ನಿರ್ದೇಶಕರ ಈ ಚಾಣಾಕ್ಷ ನಡೆ ನನಗೆ ತಕ್ಷಣ ಅರ್ಥವಾಯಿತು" ಎಂದು ಸೈಫ್ ಶ್ಲಾಘಿಸಿದ್ದಾರೆ.

ಮೂರು ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದ ಸಿನಿಮಾ

ಉತ್ತರ ಪ್ರದೇಶದ ಗ್ರಾಮೀಣ ಭಾಗದ ರಾಜಕೀಯ, ಜಾತಿ, ಅಧಿಕಾರ ಮತ್ತು ಪಿತೃಪ್ರಭುತ್ವದ ಹಿನ್ನೆಲೆಯಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ವಿವೇಕ್ ಒಬೆರಾಯ್, ಕೊಂಕಣ ಸೇನ್ ಶರ್ಮಾ, ಬಿಪಾಶ ಬಸು ಹಾಗೂ ನಸೀರುದ್ದೀನ್ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು ಕೊಂಕಣ ಸೇನ್ ಶರ್ಮಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸೇರಿದಂತೆ ಒಟ್ಟು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.