ಕಾಮಿಡಿಯನ್ ಸಮಯ್ ರೈನಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2025ರಲ್ಲಿ ತಮ್ಮ ‘India’s Got Latent’ ಕಾರ್ಯಕ್ರಮದ ವಿವಾದದಿಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಸಮಯ್ ರೈನಾ, ಇದೀಗ ಯೂಟ್ಯೂಬ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವದಲ್ಲೇ ಒಂದು ಮಿಲಿಯನ್ ಅಂದರೆ 10 ಲಕ್ಷ ಚಾನೆಲ್ ಮೆಂಬರ್ಗಳನ್ನು ಹೊಂದಿದ ಮೊದಲ ಯೂಟ್ಯೂಬ್ ಕ್ರಿಯೇಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ವಿವಾದದ ಬಳಿಕ ತಮ್ಮ ಕಾರ್ಯಕ್ರಮದ ಎಲ್ಲಾ ಸಂಚಿಕೆಗಳನ್ನು ಯೂಟ್ಯೂಬ್ನಿಂದ ತೆಗೆದುಹಾಕಿದ್ದ ಸಮಯ್, 2026ರಲ್ಲಿ ‘Still Alive’ ಕಾಮಿಡಿ ಸ್ಪೆಷಲ್ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದರು. ಬಳಿಕ ‘India’s Got Latent’ ಎರಡನೇ ಸೀಸನ್ ಕೂಡ ಆರಂಭಿಸಿ ಅಭಿಮಾನಿಗಳನ್ನು ರಂಜಿಸಿದ್ದರು.
ಯೂಟ್ಯೂಬ್ನಲ್ಲಿ 10 ಲಕ್ಷ ಮೆಂಬರ್ಗಳ
ಗೂಗಲ್ ಇಂಡಿಯಾದ ಅಧಿಕೃತ ಬ್ಲಾಗ್ನಲ್ಲಿ ಸಮಯ್ ರೈನಾ ಅವರ ಈ ಸಾಧನೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.
ಯೂಟ್ಯೂಬ್ ತಂಡದ ಹೇಳಿಕೆಯ ಪ್ರಕಾರ, “ಚೆಸ್ ಗ್ರ್ಯಾಂಡ್ಮಾಸ್ಟರ್ಗಳೊಂದಿಗಿನ ಮಾತುಕತೆಗಳಿಂದ ಹಿಡಿದು ‘India’s Got Latent’ ಎಂಬ ಜನಪ್ರಿಯ ಕಾರ್ಯಕ್ರಮವನ್ನು ಸೃಷ್ಟಿಸುವವರೆಗೆ ಸಮಯ್ ರೈನಾ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಲಕ್ಷಾಂತರ ಜನರ ನೆಚ್ಚಿನ ವರ್ಚುವಲ್ ತಾಣವನ್ನಾಗಿ ರೂಪಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಜೀ ಕನ್ನಡ ವಾಹಿನಿಯಲ್ಲಿ ʻ45ʼ ಸಿನಿಮಾದ ಮೊದಲ ಪ್ರೀಮಿಯರ್; ಒಟ್ಟಿಗೆ ರಂಜಿಸಲಿದ್ದಾರೆ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ
ಇದಲ್ಲದೆ, ಸಮಯ್ ರೈನಾ ಅವರ ಒಂದು ಮಿಲಿಯನ್ ಚಾನೆಲ್ ಮೆಂಬರ್ಗಳ ಸಾಧನೆಯು ಭಾರತದಲ್ಲಿ ನಡೆಯುತ್ತಿರುವ ದೊಡ್ಡ ಸಾಂಸ್ಕೃತಿಕ ಬದಲಾವಣೆಯ ಸಂಕೇತವಾಗಿದೆ ಎಂದು ಯೂಟ್ಯೂಬ್ ತಿಳಿಸಿದೆ.
ಪ್ರೇಕ್ಷಕರು ಕೇವಲ ವಿಡಿಯೋಗಳನ್ನು ನೋಡುವುದಕ್ಕೆ ಸೀಮಿತವಾಗಿಲ್ಲ. ತಮಗೆ ಇಷ್ಟವಾದ ಕ್ರಿಯೇಟರ್ಗಳಿಗೆ ಬೆಂಬಲ ನೀಡಲು ಮತ್ತು ಅವರೊಂದಿಗೆ ನಿಕಟ ಸಂಪರ್ಕ ಹೊಂದಲು ಚಾನೆಲ್ ಮೆಂಬರ್ಶಿಪ್ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
2026ರ ಜೂನ್ ತಿಂಗಳೊಂದರಲ್ಲೇ ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಯೂಟ್ಯೂಬ್ನಲ್ಲಿ ಕನಿಷ್ಠ ಒಂದು ಚಾನೆಲ್ ಮೆಂಬರ್ಶಿಪ್ ಖರೀದಿಸಿದ್ದಾರೆ. ಇದರಿಂದ ಭಾರತೀಯ ಕ್ರಿಯೇಟರ್ಗಳ ಮೆಂಬರ್ಶಿಪ್ ಆದಾಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.25ಕ್ಕೂ ಹೆಚ್ಚು ಏರಿಕೆಯಾಗಿದೆ ಎಂದು ಯೂಟ್ಯೂಬ್ ಮಾಹಿತಿ ನೀಡಿದೆ.
ಸದ್ಯ ಸಮಯ್ ರೈನಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ 1.24 ಕೋಟಿ ಸಬ್ಸ್ಕ್ರೈಬರ್ಗಳಿದ್ದಾರೆ.
ವಿವಾದದ ದಿನಗಳನ್ನು ನೆನಪಿಸಿಕೊಂಡ ಸಮಯ್ ರೈನಾ
‘India’s Got Latent’ ಎರಡನೇ ಸೀಸನ್ನ ಫಿನಾಲೆ ಸಂಚಿಕೆಯಲ್ಲಿ ಮಾತನಾಡಿದ ಸಮಯ್ ರೈನಾ, ತಮ್ಮ ಜೀವನದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
“ಇದೆಲ್ಲವೂ ನಡೆಯುತ್ತದೆ ಎಂದು ನಾನು ಎರಡು ವರ್ಷಗಳ ಹಿಂದೆ ಎಂದಿಗೂ ಭಾವಿಸಿರಲಿಲ್ಲ. ಮೊದಲ ಬಾರಿಗೆ ವಿವಾದ ಸೃಷ್ಟಿಯಾದಾಗ ಎಲ್ಲವೂ ಕೈಮೀರಿ ಹೋಗಿತ್ತು. ನಾವು ಕೆನಡಾದಲ್ಲಿದ್ದಾಗ ನಾನು ಖಿನ್ನತೆಗೆ ಒಳಗಾಗಿದ್ದೆ. ಆಗ ChatGPTಯನ್ನು, ‘ಸಮಯ್ ರೈನಾ ಮತ್ತೆ ಯಾವಾಗ ತನ್ನ ಕಾರ್ಯಕ್ರಮವನ್ನು ಆರಂಭಿಸಲು ಸಾಧ್ಯವಾಗಬಹುದು?’ ಎಂದು ಕೇಳುತ್ತಿದ್ದೆ.
ಅದಕ್ಕೆ ChatGPT, ‘ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಉತ್ತರಿಸುತ್ತಿತ್ತು. ಆಗ ನಾನು, ‘ದಯವಿಟ್ಟು ಹೌದು ಎಂದು ಹೇಳು’ ಎಂದು ಮತ್ತೆ ಬರೆಯುತ್ತಿದ್ದೆ. ಈ ಕಾರ್ಯಕ್ರಮ ಇಂತಹ ರೀತಿಯಲ್ಲಿ ಮತ್ತೆ ಮರಳುತ್ತದೆ ಎಂದು ನನಗೆ ಸ್ವಲ್ಪವೂ ನಿರೀಕ್ಷೆ ಇರಲಿಲ್ಲ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಏನಿದು ‘India’s Got Latent’ ವಿವಾದ?
ಸಮಯ್ ರೈನಾ ಅವರ ‘India’s Got Latent’ ಕಾರ್ಯಕ್ರಮವು 2025ರ ಫೆಬ್ರವರಿಯಲ್ಲಿ ದೊಡ್ಡ ವಿವಾದಕ್ಕೆ ಸಿಲುಕಿತ್ತು.
ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ಪೋಷಕರು ಮತ್ತು ಅಶ್ಲೀಲ ಸಂಬಂಧಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪ್ರಶ್ನೆಯೊಂದನ್ನು ಕೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಹಾಸ್ಯದ ಹೆಸರಿನಲ್ಲಿ ಮಿತಿ ಮೀರಲಾಗಿದೆ ಎಂದು ಅನೇಕರು ಕಾರ್ಯಕ್ರಮದ ನಿರೂಪಕರು ಹಾಗೂ ತೀರ್ಪುಗಾರರನ್ನು ಟೀಕಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಣವೀರ್ ಅಲ್ಲಾಬಾದಿಯಾ, ಸಮಯ್ ರೈನಾ ಸೇರಿದಂತೆ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ್ದ ಹಲವರ ವಿರುದ್ಧ ಪೊಲೀಸ್ ದೂರುಗಳು ದಾಖಲಾಗಿದ್ದವು. ಎಫ್ಐಆರ್ಗಳೂ ದಾಖಲಾಗಿದ್ದವು.
ವಿವಾದದ ವಿಡಿಯೋ ವೈರಲ್ ಆದ ಬಳಿಕ ರಣವೀರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಸಮಯ್ ರೈನಾ ಕೂಡ ಕ್ಷಮೆ ಕೇಳಿ, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿದ್ದ ಕಾರ್ಯಕ್ರಮದ ಎಲ್ಲಾ ಸಂಚಿಕೆಗಳನ್ನು ತೆಗೆದುಹಾಕುವುದಾಗಿ ಘೋಷಿಸಿದ್ದರು.
‘Still Alive’ ಮೂಲಕ ಭರ್ಜರಿ ಕಮ್ಬ್ಯಾಕ್
ವಿವಾದದ ಬಳಿಕ 2026ರಲ್ಲಿ ಸಮಯ್ ರೈನಾ ‘Still Alive’ ಹೆಸರಿನ ಕಾಮಿಡಿ ಸ್ಪೆಷಲ್ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿವಾದದ ಸಂದರ್ಭದಲ್ಲಿ ತಾವು ಎದುರಿಸಿದ ಪರಿಸ್ಥಿತಿಗಳು ಹಾಗೂ ಅನುಭವಗಳನ್ನು ಹಾಸ್ಯದ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಟ್ಟರು.
ಇದೇ ಸಂದರ್ಭದಲ್ಲಿ ‘India’s Got Latent’ ಎರಡನೇ ಸೀಸನ್ ಬಗ್ಗೆಯೂ ಘೋಷಣೆ ಮಾಡಿದರು. ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು.
ಇದನ್ನೂ ಓದಿ: Bigg Boss Tamil: ಬಿಗ್ಬಾಸ್ ವಿವಾದದ ಬಳಿಕ ಮೌನ ಮುರಿದ ವಿಜಯ್ ಸೇತುಪತಿ: ಸಿಎಂ ವಿಜಯ್ ಬಗ್ಗೆ ಹೇಳಿದ್ದೇನು?
ಎರಡನೇ ಸೀಸನ್ ಯೂಟ್ಯೂಬ್ ಮತ್ತು ನೆಟ್ಫ್ಲಿಕ್ಸ್ ಎರಡರಲ್ಲೂ ಬಿಡುಗಡೆಯಾಯಿತು. ಮೊದಲ ಸಂಚಿಕೆಯಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ನಂತರ ವರುಣ್ ಧವನ್, ಹುಮಾ ಖುರೇಷಿ, ಕರಣ್ ಔಜ್ಲಾ ಸೇರಿದಂತೆ ಹಲವು ಜನಪ್ರಿಯ ತಾರೆಯರು ಪ್ಯಾನೆಲಿಸ್ಟ್ಗಳಾಗಿ ಭಾಗವಹಿಸಿದ್ದರು.