ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೇ ‘ಕಲ್ಯಾಣಿ’ ಚಿತ್ರದ ಶೂಟಿಂಗ್ ಮುಗಿಸಿದ ನಿರ್ದೇಶಕ ‘ಜಟ್ಟ’ ಗಿರಿರಾಜ್‌; ಇದು ಎರಡು ಸಂಸ್ಕೃತಿಗಳ ಮುಖಾಮುಖಿ

'ಜಟ್ಟ' ಖ್ಯಾತಿಯ ಬಿ. ಎಂ. ಗಿರಿರಾಜ್ ನಿರ್ದೇಶನದ 'ಕಲ್ಯಾಣಿ' ಸಿನಿಮಾ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಲೇಖಕ ಬಸವ ರೆಡ್ಡಿ ಅವರ ಕಥೆ ಆಧರಿಸಿದ ಈ ಚಿತ್ರದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಎರಡು ಭಿನ್ನ ಸಂಸ್ಕೃತಿಗಳ ನವಿರಾದ ಪ್ರೇಮಕಾವ್ಯವನ್ನು ತೋರಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’ ಮತ್ತು ‘ಮೈತ್ರಿ’ಯಂತಹ ವಿಭಿನ್ನ ಹಾಗೂ ಅರ್ಥಪೂರ್ಣ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ಪ್ರಯೋಗಾತ್ಮಕ ಕಥಾಹಂದರದೊಂದಿಗೆ ತೆರೆಮೇಲೆ ಬರಲು ಸಜ್ಜಾಗುತ್ತಿದ್ದಾರೆ. ಲೇಖಕ ಬಸವ ರೆಡ್ಡಿ ಅವರ ಕಥೆಯನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗಿದ್ದು, ಇತ್ತೀಚೆಗೆ ಚಿತ್ರತಂಡ ಟೈಟಲ್‌ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದೆ.

ಎರಡು ಸಂಸ್ಕೃತಿಗಳ ಮುಖಾಮುಖಿ

ಕೆಲ ತಿಂಗಳ ಹಿಂದೆಯೇ ಸದ್ದಿಲ್ಲದೆ ಚಿತ್ರೀಕರಣ ಆರಂಭಿಸಿದ್ದ ‘ಕಲ್ಯಾಣಿ’ ಸಿನಿಮಾ ಸದ್ಯ ತನ್ನ ಸಂಪೂರ್ಣ ಶೂಟಿಂಗ್ ಮುಗಿಸಿದ್ದು, ಪ್ರಸ್ತುತ ಪೋಸ್ಟ್ ಪ್ರಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ್, "ಇದು ನವಿರಾದ ಒಲವಿನ ಕಥೆಯನ್ನು ಮುನ್ನೆಲೆಯಾಗಿಟ್ಟುಕೊಂಡು ಮಾಡಿರುವ ಸಿನಿಮಾ. ಇದರಲ್ಲಿ ನಂಬಿಕೆ, ಸ್ನೇಹ ಹಾಗೂ ಐಡೆಂಟಿಟಿಯ ವಿಷಯಗಳು ಪ್ರಮುಖವಾಗಿವೆ. ಉತ್ತರ ಭಾರತದಿಂದ ಬರುವ ಹುಡುಗಿ ಮತ್ತು ದಕ್ಷಿಣ ಭಾರತದ ಹುಡುಗನ ಪಾತ್ರಗಳ ಮೂಲಕ ಎರಡು ವಿಭಿನ್ನ ಸಂಸ್ಕೃತಿಗಳ ಮುಖಾಮುಖಿ ಹಾಗೂ ಅನಾವರಣವನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ನಾನು ಇದುವರೆಗೆ ಮಾಡಿರುವ ಸಿನಿಮಾಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ" ಎಂದು ತಿಳಿಸಿದ್ದಾರೆ.

Cult Movie Review: ʻಸಾರಾಯಿ ಸೀಸೆಯಲಿ ನನ್ನ ದೇವಿ ಕಾಣುವಳುʼ ಎನ್ನುವ ಭಗ್ನಪ್ರೇಮಿಯೊಬ್ಬನ ʼಕಲ್ಟ್‌ʼ ಲವ್‌ ಸ್ಟೋರಿ

ರಂಗಭೂಮಿ ಪ್ರತಿಭೆಗಳ ಸಂಗಮ

ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವ ನಟ ಸಾಮ್ರಾಟ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಉತ್ತರ ಭಾರತದ ನಟಿ ಸಿಮ್ರನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 3 ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್. ಅವರು ‘ಆರ್. ಕೆ. ಸಿನೆಮಾಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಿ. ಜೆ. ಭರತ್ ಅವರ ಸಂಗೀತ ನಿರ್ದೇಶನವಿದ್ದು, ಪ್ರಶಾಂತ ಲಾಗರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಅವರ ಸಂಕಲನ ಚಿತ್ರಕ್ಕಿದೆ. ಭಟ್ಕಳ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಕಲ್ಯಾಣಿ’ ಚಿತ್ರವನ್ನು ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳ ವೇಳೆಗೆ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯೋಜಿಸಿದೆ.