ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ಸಿನಿಮಾಕ್ಕಾಗಿ ನಾಲ್ವರು ನಿರ್ದೇಶಕರು, ನಾಲ್ವರು ನಾಯಕಿಯರ ಸಂಗಮ: ಗಮನ ಸೆಳೆಯುತ್ತಿದೆ 'ನಾಕು ತಂತಿ' ಚಿತ್ರದ ಟೀಸರ್

Naaku Thanti Movie: ಮಧ್ಯಮ ವರ್ಗದ ನಾಲ್ವರು ಮಹಿಳೆಯರ ಸೂಕ್ಷ್ಮ ಬದುಕಿನ ತುಡಿತಗಳನ್ನು ಹೃದಯಸ್ಪರ್ಶಿಯಾಗಿ ತೆರೆದಿಡಲು ಸಜ್ಜಾಗಿದೆ ʻನಾಕು ತಂತಿʼ ಸಿನಿಮಾ. ನಾಲ್ಕು ಸ್ವತಂತ್ರ ಕಥೆಗಳನ್ನು ನಾಲ್ವರು ನಿರ್ದೇಶಕರು ಒಟ್ಟಾಗಿ ಬೆಳ್ಳಿಪರದೆಯ ಮೇಲೆ ತರಲು ಸಜ್ಜಾಗಿದೆ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನಸೆಳೆದಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸ ಆಲೋಚನೆ ಹಾಗೂ ಗಟ್ಟಿತನದ ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಸದಾ ಪ್ರೇಕ್ಷಕರ ಪ್ರೋತ್ಸಾಹ ಸಿಗುತ್ತಲೇ ಬಂದಿದೆ. ಅದೇ ಹಾದಿಯಲ್ಲಿ ವಿಶಿಷ್ಟ ಪ್ರಯೋಗದೊಂದಿಗೆ ಸದ್ದು ಮಾಡಲು ಸಜ್ಜಾಗಿರುವ ಮಹಿಳಾ ಪ್ರಧಾನ ಸಿನಿಮಾ 'ನಾಕು ತಂತಿ'. ನಾಲ್ಕು ಭಿನ್ನ ಕಥೆಗಳು ಹಾಗೂ ನಾಲ್ವರು ಪ್ರತಿಭಾವಂತ ನಟಿಯರ ಸಂಗಮವಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸುರಂ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಡಿಕೆಎಸ್ ಪ್ರೊಡಕ್ಷನ್ಸ್‌ನ ಯೋಗೇಶ್ ಬಸವನಗೌಡ ಹಾಗೂ ಸಾಯಿಬಿಂದು ಪ್ರೊಡಕ್ಷನ್ಸ್‌ನ ನಂಬೂರು ಸಾಯಿ ಅವರ ಸಹ ನಿರ್ಮಾಣವಿದೆ.

ನಾಲ್ಕು ವಿಭಿನ್ನ ಕಥೆಗಳ ಸಿನಿಮಾ

ಇದೇ ಮೊದಲ ಬಾರಿಗೆ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಒಂದೇ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಕಿರುಚಿತ್ರಗಳ ಮೂಲಕ ಅಪಾರ ಅನುಭವ ಗಳಿಸಿರುವ ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ಎಂಬ ನಾಲ್ವರು ಯುವ ನಿರ್ದೇಶಕರು ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮೊದಲ ಪ್ರಯತ್ನದಲ್ಲೇ ಪೂರ್ಣಪ್ರಮಾಣದ ಒಂದೇ ಸಿನಿಮಾವನ್ನು ಪ್ರತ್ಯೇಕವಾಗಿ ಮಾಡುವ ಬದಲು, ನಾಲ್ವರು ಜೊತೆಯಾಗಿ ಚರ್ಚಿಸಿ ಮಧ್ಯಮ ವರ್ಗದ ಮಹಿಳೆಯರ ನಿತ್ಯ ಜೀವನದ ನೈಜ ತುಡಿತಗಳನ್ನು ಬಿಂಬಿಸುವ ನಾಲ್ಕು ವಿಭಿನ್ನ ಕಥೆಗಳ ಈ ಚಿತ್ರವನ್ನು

ನಿರ್ದೇಶಿಸಿದ್ದಾರೆ.‌

‘ಇನ್ನೂ ಬಿಗ್‌ ಬಾಸ್‌ ಮನೆಯಲ್ಲೇ ಇದ್ದಿದ್ರೆ ನನ್ನ ಆರೋಗ್ಯಕ್ಕೆ ಮತ್ತಷ್ಟು ಹಾಳಾಗುತ್ತಿತ್ತು..ʼ: ಹೊರಬಂದ ಬಳಿಕ ನಟಿ ಸಂಗೀತಾ ಭಟ್‌ ಮೊದಲ ಪ್ರತಿಕ್ರಿಯೆ

ನಾಲ್ವರು ನಟಿಯರ ಪಾತ್ರಗಳೇನು?

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ನಟಿಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಿಂಧು ಶ್ರೀನಿವಾಸ ಮೂರ್ತಿ ಅವರು ಈ ಚಿತ್ರದಲ್ಲಿ ಸಾಹಸ ದೃಶ್ಯಗಳಿರುವ ಖಡಕ್ ಮಹಿಳಾ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರೆ, ನಟಿ ಖುಷಿ ರವಿ ಸಾಮಾನ್ಯ ನರ್ಸ್ ಒಬ್ಬಳ ಆಸ್ಪತ್ರೆಯ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಪಾತ್ರದಲ್ಲಿ ಜೀವ ತುಂಬಿದ್ದಾರೆ.

ಮತ್ತೊಂದೆಡೆ, ನಟಿ ರೋಷಿಣಿ ಪ್ರಕಾಶ್ ಕನಸುಗಳನ್ನು ಬೆನ್ನಟ್ಟುವ ಐಟಿ ಉದ್ಯೋಗಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ಸಂಗೀತಾ ಭಟ್ ಮಧ್ಯಮ ವರ್ಗದ ಸಂಸಾರದ ಜವಾಬ್ದಾರಿಗಳು ಮತ್ತು ಒತ್ತಡಗಳ ನಡುವೆ ತನ್ನದೇ ಪ್ರಪಂಚವನ್ನು ಕಟ್ಟಿಕೊಳ್ಳುವ ಗೃಹಿಣಿಯ ಸೂಕ್ಷ್ಮ ಸಂವೇದನೆಗಳ ಪಾತ್ರವನ್ನು ನಿರ್ವಹಿಸಿದ್ದಾರೆ.

ತಾಂತ್ರಿಕವಾಗಿಯೂ ಚಿತ್ರ ಶ್ರೀಮಂತವಾಗಿದ್ದು, 'ಸು ಫ್ರಮ್ ಸೋ' ಖ್ಯಾತಿಯ ಸುಮೇಧ್ ಕೆ. ಸಂಗೀತ ಸಂಯೋಜನೆ ನೀಡಿದ್ದರೆ, ರೊಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ನಾಲ್ಕು ಕಥೆಗಳ ದೃಶ್ಯವೈಭವವನ್ನು ನಾಲ್ವರು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಉತ್ತಮ ಕಥಾವಸ್ತು ಹಾಗೂ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವುದಾಗಿ ನಿರ್ಮಾಪಕ ಜಯರಾಮ್ ದೇವಸಮುದ್ರ ತಿಳಿಸಿದರೆ, ಮೂಲತಃ ಕೃಷಿಕರಾಗಿರುವ ಸಹ-ನಿರ್ಮಾಪಕ ಯೋಗೇಶ್ ಬಸವನಗೌಡ ಅವರು ಚಿತ್ರರಂಗದ ಕನಸಿಗೆ ಸುರಂ ಮೂವೀಸ್ ದೊಡ್ಡ ಬಲ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ಬಗೆಯ ನಿರೂಪಣೆ ಹೊಂದಿರುವ 'ನಾಕು ತಂತಿ' ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ.