‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಿಂದ ಗುರುತಿಸಿಕೊಂಡ ನಟಿ ಸಂಜನಾ ಆನಂದ್ ಅವರಿಗೆ ಬಿಗ್ ಬ್ರೇಕ್ ಸಿಕ್ಕಿದ್ದು ನಟ ದುನಿಯ ವಿಜಯ್ ಅವರ ಸಲಗ ಸಿನಿಮಾದಿಂದ. ಸ್ಯಾಂಡಲ್‌ವುಡ್‌ನ ಸಲಗ ಸುಂದರಿ ಎನಿಸಿಕೊಂಡಿರುವ ಸಂಜನಾ ಆನಂದ್‌ಗೆ ಈಗ ಮತ್ತೊಂದು ಬಂಪರ್ ಅವಕಾಶ ಒಲಿದುಬಂದಿದೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ನಟಿಸುವಂತಹ ಚಾನ್ಸ್ ಈಗ ಸಂಜನಾಗೆ ಸಿಕ್ಕಿದೆ.
‘ತಮ್ಮ ಸುಖಾಗಮನ ಬಯಸುವ’ ಚಿತ್ರಕ್ಕೆ ಸಂಜನಾ ನಾಯಕಿ
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಗಣೇಶ್ ನಟನೆಯ ‘ತಮ್ಮ ಸುಖಾಗಮನ ಬಯಸುವ’ ಸಿನಿಮಾ ಸದ್ಯ ಶೂಟಿಂಗ್ ಹಂತದಲ್ಲಿದೆ. ಚಿತ್ರತಂಡ ಈಗಾಗಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದು, ಶೀಘ್ರದಲ್ಲೇ ಮುಂದಿನ ಹಂತದ ಶೂಟಿಂಗ್ ಆರಂಭಿಸಲು ಸಜ್ಜಾಗುತ್ತಿದೆ. ಚಿತ್ರದ ತಾರಾಗಣದ ಬಗ್ಗೆ ಚಿತ್ರತಂಡ ಇಷ್ಟರವರೆಗೆ ಗುಟ್ಟು ಕಾಯ್ದುಕೊಂಡಿತ್ತು. ಗಣೇಶ್ ಅವರಿಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇರಲಿಲ್ಲ.
ಸಖತ್ ಬ್ಯುಸಿ ಇರುವ ನಟಿ
ಇದೀಗ ಗಣೇಶ್‌ಗೆ ನಾಯಕಿಯಾಗಿ ನಟಿ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗಷ್ಟೇ ಯುವ ರಾಜ್‌ಕುಮಾರ್ ಅಭಿನಯದ ‘ಎಕ್ಕ’ ಮತ್ತು ಧನ್ವೀರ್ ಜೊತೆಗಿನ ‘ಹಯಗ್ರೀವ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಂಜನಾ, ಸದ್ಯ ಶಿವರಾಜ್‌ಕುಮಾರ್ ಮತ್ತು ದೀಕ್ಷಿತ್ ಶೆಟ್ಟಿ ನಟನೆಯ ‘ಬೇಲ್’ ಚಿತ್ರದ ಬಿಡುಗಡೆಗಾಗಿ ಅವರು ಕಾಯುತ್ತಿದ್ದಾರೆ.
ಶೂಟಿಂಗ್‌ನಲ್ಲೂ ಭಾಗಿಯಾದ ಸಂಜನಾ
ಈಗ ‘ತಮ್ಮ ಸುಖಾಗಮನ ಬಯಸುವ’ ಚಿತ್ರದ ಮೂಲಕ ಸಂಜನಾ ಅವರ ಖಾತೆಗೆ ಮತ್ತೊಂದು ಭರ್ಜರಿ ಪ್ರಾಜೆಕ್ಟ್ ಸೇರ್ಪಡೆಯಾದಂತಾಗಿದೆ. ಗಣೇಶ್ ಹಾಗೂ ಸಂಜನಾ ಆನಂದ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಸಂಜನಾ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಚಿತ್ರತಂಡದ ಕಡೆಯಿಂದ ನಾಯಕಿಯ ಆಯ್ಕೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಇನ್ನುಳಿದಂತೆ ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ನಟಿಸುತ್ತಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನ
ಇನ್ನು ನಿರ್ದೇಶಕ ಜಗನ್ನಾಥ್ ಅವರಿಗೆ ಈ ಸಿನಿಮಾ ವೈಯಕ್ತಿಕವಾಗಿ ತುಂಬಾ ಹತ್ತಿರವಾಗಿದೆಯಂತೆ. ಗಣೇಶ್ ಅಭಿನಯದ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ‘ಮುಂಗಾರು ಮಳೆ’ ಚಿತ್ರದ ದೊಡ್ಡ ಅಭಿಮಾನಿಯಾಗಿರುವ ಅವರು, ಆ ಸಿನಿಮಾವನ್ನು ಹಲವು ಬಾರಿ ನೋಡಿದ್ದಾರಂತೆ. ಇದೀಗ ಗಣೇಶ್ ಅವರಿಗಾಗಿಯೇ ‘ತಮ್ಮ ಸುಖಾಗಮನ ಬಯಸುವ’ ಚಿತ್ರವನ್ನು ಔಟ್ ಅಂಡ್ ಔಟ್ ಕೌಟುಂಬಿಕ ಎಮೋಷನಲ್ ಡ್ರಾಮಾ ಶೈಲಿಯಲ್ಲಿ ಮಾಡಲು ನಿರ್ಧರಿಸಿದ್ದಾರಂತೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಹಾಡುಗಳು ಹಿಟ್ ಆದ ಹಿನ್ನೆಲೆಯಲ್ಲಿ ಈ ಚಿತ್ರಕ್ಕೂ ಅರ್ಜುನ್ ಜನ್ಯ ಅವರೇ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
‘ತಮ್ಮ ಸುಖಾಗಮನ ಬಯಸುವ’ ಚಿತ್ರದ ಜೊತೆಗೆ ಗಣೇಶ್ ಅಭಿನಯದ ‘ಬೃಂದಾ ವಿಹಾರಿ’ ಸಿನಿಮಾ ಸದ್ಯ ಬಿಡುಗಡೆಗೆ ಸಜ್ಜಾಗಿದೆ. ಇದರ ಹೊರತಾಗಿ ‘ಪಿನಾಕ’ ಮತ್ತು ‘ಯುವರ್ ಸಿನ್ಸಿಯರ್ಲಿ ರಾಮ್’ ಚಿತ್ರಗಳ ಕೆಲಸಗಳು ಬಿರುಸಿನಿಂದ ಸಾಗಿವೆ.