ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಪಿ.ಎಸ್. ಮಿತ್ರನ್ ಅವರು ʻರಾಕಿಂಗ್ ಸ್ಟಾರ್ʼ ಯಶ್ ಅವರಿಗೆ ಹೇಳಿದ್ದ ಆಕ್ಷನ್ ಕಥೆ ಬಹಳ ಇಷ್ಟವಾಗಿದ್ದರೂ, ಕಾಲ್‌ಶೀಟ್ ಮತ್ತು ಸಮಯದ ಹೊಂದಾಣಿಕೆಯಾಗದ ಕಾರಣ ಪ್ರಾಜೆಕ್ಟ್ ಸದ್ಯಕ್ಕೆ ಸೆಟ್ಟೇರಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಯಾರೀ ಪಿ. ಎಸ್. ಮಿತ್ರನ್?
ಕಾಲಿವುಡ್‌ನಲ್ಲಿ ಕಂಟೆಂಟ್ ಆಧಾರಿತ ಆ್ಯಕ್ಷನ್ ಹಾಗೂ ಸ್ಪೈ ಥ್ರಿಲ್ಲರ್ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪ್ರತಿಭಾವಂತ ನಿರ್ದೇಶಕ ಪಿ.ಎಸ್. ಮಿತ್ರನ್. ವಿಶಾಲ್ ನಟನೆಯ 'ಇರುಂಬು ತಿರೈ', ಶಿವಕಾರ್ತಿಕೇಯನ್ ಅವರ 'ಹೀರೋ' ಹಾಗೂ ಕಾರ್ತಿ ಅಭಿನಯದ ಬ್ಲಾಕ್‌ಬಸ್ಟರ್ 'ಸರ್ದಾರ್' ಮತ್ತು 'ಸರ್ದಾರ್ 2' ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.
ಪ್ರಾಜೆಕ್ಟ್ ಮುಂದೂಡಿಕೆಗೆ ಕಾರಣವೇನು?
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ಮಿತ್ರನ್, ಯಶ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ನಡೆಸಿದ ಮಾತುಕತೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಅವರಿಗಾಗಿ ಬೃಹತ್ ಆ್ಯಕ್ಷನ್ ಕಥೆಯನ್ನು ಸಿದ್ಧಪಡಿಸಲಾಗಿತ್ತು. ಕಥೆ ಕೇಳಿದ ಯಶ್ ಅವರು ಮೆಚ್ಚುಗೆ ಸೂಚಿಸಿದ್ದರು. 'ಟಾಕ್ಸಿಕ್' ಮುಗಿದ ತಕ್ಷಣವೇ ಈ ಚಿತ್ರ ಪ್ರಾರಂಭವಾಗಬೇಕಿತ್ತು, ಆದರೆ ಕಾಲ್‌ಶೀಟ್ ಹಾಗೂ ಶೆಡ್ಯೂಲ್ ಹೊಂದಾಣಿಕೆಯಾಗದ ಕಾರಣ ಸದ್ಯಕ್ಕೆ ಮುಂದೂಡಲಾಗಿದೆ" ಎಂದು ಹೇಳಿದ್ದಾರೆ.
Yash-Radhika Pandit: ಯಶ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್! ಚೆಂದದ ವಿಡಿಯೊ ಶೇರ್ ಮಾಡಿದ ರಾಧಿಕಾ ಪಂಡಿತ್
ಆ ಕಥೆ ನನ್ನ ಬಳಿಯೇ ಇದೆ
"ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ಮೆಗಾಸ್ಟಾರ್ ಚಿರಂಜೀವಿ ಅವರಿಗೂ ಕಥೆ ಹೇಳಲಾಗಿತ್ತು. 'ವಿಶ್ವಂಭರ' ನಂತರ ಇದು ಆರಂಭ ಆಗಬೇಕಿತ್ತಾದರೂ, ಅದೇ ಡೇಟ್ಸ್ ಸಮಸ್ಯೆಯಿಂದಾಗಿ ಮುಂದುವರಿಯಲು ಸಾಧ್ಯವಾಗಿಲ್ಲ. ಎರಡೂ ಕಥೆಗಳು ತಮ್ಮ ಬಳಿಯೇ ಸುರಕ್ಷಿತವಾಗಿದ್ದು, ಸಮಯ ಕೂಡಿಬಂದರೆ ಭವಿಷ್ಯದಲ್ಲಿ ಈ ಕಾಂಬಿನೇಷನ್‌ಗಳು ಕೈಗೂಡುವ ಸಾಧ್ಯತೆಯಿದೆ" ಎಂದು ಮಿತ್ರನ್ ಸ್ಪಷ್ಟಪಡಿಸಿದ್ದಾರೆ.
ಯಶ್ ಮುಂದಿನ ಸಾಲು ಸಾಲು ಚಿತ್ರಗಳು
ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಟಾಕ್ಸಿಕ್' ಸಿನಿಮಾದ ಕೆಲಸಗಳಲ್ಲಿ ಯಶ್ ತೊಡಗಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಜೆಟ್‌ನ 'ರಾಮಾಯಣ' ಬಿಡುಗಡೆ ಹಾಗೂ 'ರಾಮಾಯಣ 2' ಶೂಟಿಂಗ್‌ನಲ್ಲಿ ಅವರು ಬ್ಯುಸಿಯಾಗಲಿದ್ದು, ಇವುಗಳ ನಡುವೆ ಈ ಹೊಸ ಸಿನಿಮಾವನ್ನು ಯಾವಾಗ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.