ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

36ನೇ ವಯಸ್ಸಿಗೆ ಪ್ರಾಣಬಿಟ್ಟ ಹಾಲಿವುಡ್‌ ನಟಿ ಹೇಡನ್ ಪ್ಯಾನೆಟಿಯರ್; ಈ ಸಾವಿಗೆ ಕಾರಣವೇನು?

ಹಾಲಿವುಡ್‌ನ ಜನಪ್ರಿಯ ನಟಿ ಹೇಡನ್ ಪ್ಯಾನೆಟಿಯರ್ (36) ಅಕಾಲಿಕವಾಗಿ ನಿಧನರಾಗಿದ್ದಾರೆ. 'ಹೀರೋಸ್', 'ನ್ಯಾಶ್‌ವಿಲ್' ಸರಣಿಗಳಿಂದ ಜಾಗತಿಕ ಖ್ಯಾತಿ ಗಳಿಸಿದ್ದ ಅವರು ವೈಯಕ್ತಿಕ ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು. ಸಹೋದರನ ಅಕಾಲಿಕ ಸಾವಿನ ನೋವಿನ ನಡುವೆಯೂ ಚೇತರಿಸಿಕೊಳ್ಳುತ್ತಿದ್ದ ತಾರೆಯ ಹಠಾತ್ ನಿಧನಕ್ಕೆ ಅಧಿಕೃತ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಿದೆ.

'ಹೀರೋಸ್', 'ನ್ಯಾಶ್‌ವಿಲ್', 'ಸ್ಕ್ರೀಮ್ 4' ಹಾಗೂ 'ಸ್ಕ್ರೀಮ್ 6' ಮುಂತಾದ ಜನಪ್ರಿಯ ಚಲನಚಿತ್ರಗಳು ಮತ್ತು ಸರಣಿಗಳ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಹಾಲಿವುಡ್ ನಟಿ ಹೇಡನ್ ಪ್ಯಾನೆಟಿಯರ್ (36) ಅಕಾಲಿಕವಾಗಿ ನಿಧನರಾಗಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅವರ ಅಧಿಕೃತ ಪ್ರತಿನಿಧಿ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ಮತ್ತು ನಿಧನರಾದ ಸ್ಥಳದ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ.

ಅಧಿಕೃತ ಹೇಳಿಕೆ ನೀಡಿದ ಪ್ರತಿನಿಧಿ

ಹೇಡನ್ ಅವರ ನಿಧನದ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅವರ ಪ್ರತಿನಿಧಿ, "ನಮ್ಮ ಪ್ರೀತಿಯ ಹೇಡನ್ ( Hayden Panettiere) ಅವರ ಅಕಾಲಿಕ ನಿಧನದ ದುಃಖದ ಸುದ್ದಿಯನ್ನು ಅತ್ಯಂತ ನೋವಿನಿಂದ ಹಂಚಿಕೊಳ್ಳುತ್ತಿದ್ದೇವೆ. ಅವರು ಅದ್ಭುತ ಚೈತನ್ಯ ಮತ್ತು ಅಪಾರ ಶಕ್ತಿಯಾಗಿದ್ದರು. ತಮ್ಮ ಪರಿಚಯವಿದ್ದ ಎಲ್ಲರಿಗೂ ಹಾಗೂ ಪರದೆಯ ಮೇಲೆ ತಮ್ಮನ್ನು ವೀಕ್ಷಿಸಿದ ಲಕ್ಷಾಂತರ ಜನರಿಗೆ ಅವರು ಅಳೆಯಲಾಗದಷ್ಟು ಪ್ರೀತಿ ಮತ್ತು ಸಂತೋಷವನ್ನು ನೀಡಿದ್ದರು" ಎಂದು ಸಂತಾಪ ಸೂಚಿಸಿದ್ದಾರೆ.

ವೈಯಕ್ತಿಕ ಸವಾಲುಗಳು, ಸಹೋದರನ ಅಗಲಿಕೆ

ಹೇಡನ್ ಪ್ಯಾನೆಟಿಯರ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ವೈಯಕ್ತಿಕ ಬದುಕಿನಲ್ಲಿ ತೀವ್ರ ಸವಾಲುಗಳನ್ನು ಎದುರಿಸಿದ್ದರು. ಮದ್ಯ ಮತ್ತು ಮಾದಕವಸ್ತುಗಳ ವ್ಯಸನದ ವಿರುದ್ಧದ ತಮ್ಮ ಹೋರಾಟದ ಬಗ್ಗೆ ಸದಾ ಮುಕ್ತವಾಗಿ ಮಾತನಾಡುತ್ತಿದ್ದ ಅವರು, 2020ರಲ್ಲಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.

2023ರಲ್ಲಿ ಅವರ ಕಿರಿಯ ಸಹೋದರ ಜಾನ್ಸೆನ್ (28) ಹೃದಯ ಸಂಬಂಧಿ ಸಮಸ್ಯೆಯಿಂದ ಹಠಾತ್ ನಿಧನರಾಗಿದ್ದು ಹೇಡನ್ ಅವರಿಗೆ ತೀವ್ರ ಆಘಾತ ತಂದಿತ್ತು. ಈ ದುರಂತದ ಕುರಿತು 2024ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, "ಜೀವನದಲ್ಲಿ ಇಂತಹ ವಿನಾಶಕಾರಿ ಘಟನೆ ಸಂಭವಿಸಿದ ನಂತರ, ಎಂತಹ ಕಠಿಣ ಸವಾಲುಗಳು ಎದುರಾದರೂ ಧೃತಿಗೆಡಬಾರದು ಎಂಬುದನ್ನು ಕಲಿಯುತ್ತೀರಿ" ಎಂದು ನೋವು ಹಂಚಿಕೊಂಡಿದ್ದರು.

ಆರೋಗ್ಯದ ಬಗೆಗಿನ ಊಹಾಪೋಹಗಳಿಗೆ ನೀಡಿದ್ದ ಸ್ಪಷ್ಟನೆ

ಹಿಂದೆ ಸಂದರ್ಶನವೊಂದರಲ್ಲಿ ಅವರ ಆಯಾಸ ಮತ್ತು ತೊದಲುತ್ತಿದ್ದ ಮಾತನ್ನು ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾಗ, ಸಾಮಾಜಿಕ ಜಾಲತಾಣದ ಮೂಲಕ ನೇರವಾಗಿ ಸ್ಪಷ್ಟನೆ ನೀಡಿದ್ದರು. "ತಮ್ಮ ನಾಯಿಯ ತುರ್ತು ಶಸ್ತ್ರಚಿಕಿತ್ಸೆಯ ಕಾರಣ ಎರಡು ದಿನ ನಿದ್ರೆಯಿಲ್ಲದೆ ತೀವ್ರವಾಗಿ ದಣಿದಿದ್ದರಿಂದ ಹಾಗಾಗಿತ್ತು" ಎಂದು ತಿಳಿಸಿದ್ದ ಅವರು, ಮಾನಸಿಕ ಆರೋಗ್ಯದ ಮಹತ್ವ ಮತ್ತು ಸೋಷಿಯಲ್ ಮೀಡಿಯಾ ಟ್ರೋಲ್‌ಗಳ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು.

Ananya Raj : ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ; 27ರ ನಟಿಗೆ ಏನಾಯಿತು?

ಚಿತ್ರರಂಗಕ್ಕೆ ಹೇಡನ್‌ ನೀಡಿದ ಕೊಡುಗೆ

'ನ್ಯಾಶ್‌ವಿಲ್' ಧಾರಾವಾಹಿಯ ಜೂಲಿಯೆಟ್ ಬಾರ್ನ್ಸ್ ಪಾತ್ರದ ಅಭಿನಯಕ್ಕಾಗಿ ಎರಡು ಬಾರಿ ಪ್ರತಿಷ್ಠಿತ 'ಗೋಲ್ಡನ್ ಗ್ಲೋಬ್' ಪ್ರಶಸ್ತಿಗೆ ಹೇಡನ್‌ ನಾಮನಿರ್ದೇಶನಗೊಂಡಿದ್ದರು. 'ಹೀರೋಸ್' ಟಿವಿ ಸರಣಿಯ ಕ್ಲೇರ್ ಬೆನೆಟ್ ಪಾತ್ರದ ಮೂಲಕ ವಿಶ್ವಾದ್ಯಂತ ಮನೆಮಾತಾಗಿದ್ದರು. 'ಸ್ಕ್ರೀಮ್' ಫ್ರಾಂಚೈಸಿ ಸೇರಿದಂತೆ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ತಮ್ಮ ಜೀವನದ ಅನುಭವಗಳನ್ನು ಒಳಗೊಂಡ 'ದಿಸ್ ಈಸ್ ಮಿ: ಎ ರೆಕನಿಂಗ್' (This Is Me: A Reckoning) ಎಂಬ ಮೊದಲ ಪುಸ್ತಕವನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು.

ಹೇಡನ್ ಅವರ ಅಕಾಲಿಕ ಅಗಲಿಕೆಗೆ ಹಾಲಿವುಡ್ ಗಣ್ಯರು ಹಾಗೂ ಜಗತ್ತಿನಾದ್ಯಂತ ಇರುವ ಅವರ ಲಕ್ಷಾಂತರ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.