ಮುಂಬೈ, ಅ.19: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಮೇಲೆ ನಡೆದ ದಾಳಿಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಅಕ್ಟೋಬರ್ 18ರಂದು ಮಹಾರಾಷ್ಟ್ರದ ಮುಂಬೈಯ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಫುಟ್ಬಾಲ್ ಆಡಿ ಹಿಂದಿರುಗುತ್ತಿದ್ದ ವೇಳೆ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಬೈಯ ಜುಹುವಿನಲ್ಲಿರುವ ನಟ ಸಲ್ಮಾನ್ ಖಾನ್ ಅವರ ನಿವಾಸದ ಸುತ್ತಲೂ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಸಲ್ಮಾನ್ ಖಾನ್ ಜತೆಗಿನ ನಂಟಿನ ಕಾರಣಕ್ಕೆ ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ್ದಾಗಿ ಲಾರೆನ್ಸ್ ಗ್ಯಾಂಗ್ ಹೇಳಿಕೊಂಡಿದೆ.
ಈ ಬೆಳವಣಿಗೆಯ ನಂತರ, ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶದ ಮೂಲಕ ಹಾದುಹೋಗುವ ಪ್ರತಿಯೊಂದು ವಾಹನವನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡುವಿನ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಮನೆಗೆ ಭದ್ರತೆ ಒದಗಿಸಲಾಗಿದೆ. ಮುಂಬೈ ಪೊಲೀಸರು ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದು ದಾಳಿಯ ಹಿಂದೆ ಯಾರಿದ್ದಾರೆ ಮತ್ತು ಗುಂಡಿನ ದಾಳಿಗೆ ಕಾರಣವೇನು ಎಂಬುದನ್ನುಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಸಲ್ಮಾನ್ ಖಾನ್ ವಿರುದ್ಧ ಹಾಸ್ಯ ನಟ ಸುನಿಲ್ ಪಾಲ್ ಗರಂ
ಸಲ್ಮಾನ್ ಖಾನ್ ಮತ್ತು ಬಿಷ್ಣೋಯ್ ಗ್ಯಾಂಗ್ ನಡುವಿನ ವೈಷಮ್ಯಕ್ಕೆ ಪ್ರಮುಖ ಕಾರಣ 1998ರ ಕೃಷ್ಣಮೃಗ ಬೇಟೆ ಪ್ರಕರಣ. ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ವಿರುದ್ಧ ಕೇಳಿಬಂದಿತ್ತು. ಈ ಪ್ರಕರಣದಲ್ಲಿ 2018ರಲ್ಲಿ ವಿಚಾರಣಾ ನ್ಯಾಯಾಲಯ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಮೂವರ ಬಂಧನ
ಟೈಗರ್ ಶ್ರಾಫ್ ಮೇಲಿನ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮತ್ತು ರಾಜಸ್ಥಾನದ ಭಯೋತ್ಪಾದನಾ ಹಾಗೂ ಗ್ಯಾಂಗ್ಸ್ಟರ್ ವಿರೋಧಿ ಪಡೆ (AGTF) ಕೆಲವೇ ಗಂಟೆಗಳಲ್ಲಿ ಮೂವರು ಶೂಟರ್ಗಳನ್ನು ಬಂಧಿಸಿ ತನಿಖೆ ನಡೆಸುತ್ತಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಟ ಟೈಗರ್ ಶ್ರಾಫ್ ಅವರಿಗೆ ಕರೆ ಮಾಡಿದ್ದು ಈ ಕೃತ್ಯದ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.