ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತ ಅವರ ಕೃತಿ ʻಚೋಮನ ದುಡಿʼ ಸಿನಿಮಾವಾಗಿ ಮೂಡಿಬಂದು 50 ವರ್ಷಗಳಾಗಿವೆ. ಅಂದು ʻಚೋಮನ ದುಡಿʼ ಸಿನಿಮಾಕ್ಕೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿದ್ದವು. ಇದೀಗ ʻಚೋಮನ ದುಡಿʼ ಸಿನಿಮಾದ ಬಗ್ಗೆ ಮಾತನಾಡಲು ಕಾರಣ, ಆ ಸಿನಿಮಾವವನ್ನು ನೆನಪಿಸುವಂತಹ ʻಬಿಚ್ಚುಗತ್ತಿಯ ಬಂಟನ ಬಲ್ಲರೇನʼ ಚಿತ್ರವು ತೆರೆಗೆ ಬರಲು ರೆಡಿಯಾಗಿದೆ. ʻದುಡಿಯ ಸದ್ದಿಗೆ ಕ್ರಾಂತಿಯ ಎದ್ದಿದೆʼ ಎಂಬ ಅಡಿಬರಹ ಈ ಚಿತ್ರಕ್ಕಿದೆ.
ಸಾಥ್ ನೀಡಿದ ಸುಂದರ್ ರಾಜ್
ದೋರಸಮುದ್ರ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿ, ಬಂಡವಾಳವನ್ನೂ ಹೂಡಿದ್ದಾರೆ ಅನಿಲ್ ದೋರಸಮುದ್ರ. ಇವರಿಗೆ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ ಸಹೋದರ ನವೀನ್ ಸಿಂಬಾವಿ. ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ನಡೆದಿದೆ. ವಿಶೇಷವೆಂದರೆ, ಅಂದು ʻಚೋಮನ ದುಡಿ’ ಚಿತ್ರದಲ್ಲಿ ಅಭಿನಯಿಸಿದ್ದ ಹಿರಿಯ ನಟ ಸುಂದರ್ ರಾಜ್ ಅವರು ಈ ಸಿನಿಮಾಕ್ಕೆ ಸಾಥ್ ನೀಡಿದ್ದಾರೆ.
ಸುಂದರ್ ರಾಜ್ ಅವರು ಹೇಳಿದ್ದೇನು?
"ನನಗೆ ಆಗ ಚೋಮನ ದುಡಿ ಎರಡನೇ ಚಿತ್ರ. ಬಿ ವಿ ಕಾರಂತ್ ನಿರ್ದೇಶನ ಮಾಡಿದ್ದರು. ಇವರು ಇಂದಿನ ತಲೆಮಾರಿಗೆ ಅರ್ಥವಾಗುವಂತೆ ಸಿನಿಮಾ ಮಾಡಿದ್ದಾರೆ. ಯುವ ಪ್ರತಿಭೆಗಳು ಮತ್ತೆ ಇಂತಹ ವಿಷಯವನ್ನು ತೆಗೆದುಕೊಂಡಿರುವುದು ಸಾಮಾನ್ಯದ ಮಾತಲ್ಲ. ಅವರು ತಪ್ಪು ಮಾಡಿದ್ದರೆ ಕ್ಷಮಿಸಿ ಬಿಡಿ. ದಯವಿಟ್ಟು ಬೆಳೆಸಿ" ಎಂದು ಸುಂದರ್ ರಾಜ್ ಮನವಿ ಮಾಡಿದರು.
ಯಾರೆಲ್ಲಾ ನಟಿಸಿದ್ದಾರೆ?
ಚೆಲುವರಾಜ್ ಗೌಡ ಅವರು ಕಾಳನಾಗಿ ಕಾಣಿಸಿಕೊಂಡಿದ್ದು, ಬಾಸುಮ ಕೊಡಗು, ಸ್ವೀಡಲ್ ಡಿಸೋಜಾ, ಶೈಲೇಶ್ ಕೆಂಗೇರಿ, ತಾರಾನಾಥ ಬೋಳಾರ್, ಪುಣ್ಯ ಕೊಟ್ಯಾನ್, ಗೋಪಾಲ್ ಮೂಲ್ಯ ಮುಂತಾದವರು ಅಭಿನಯಿಸಿದ್ದಾರೆ. ಪ್ರದ್ಯಮ್ನ ನರಹಳ್ಳಿ ಮತ್ತು ದೀಪಕ್ ಕೋಟ್ಯಾನ್ ಸಾಹಿತ್ಯ ಬರೆದಿದ್ದು, ಶ್ರೀಶಾಸ್ತ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಲ್ಯಾಮರಿಂಜ್ ನಿರ್ಮಲ್ ಮಾಡಿದ್ದು, ಸಂಕಲನವನ್ನು ಅನಿಲ್ ಡಿ. - ಮಾವಿನ್ ಜೋಯಿಲ್ ಪಿಂಟೋ ಮಾಡಿದ್ದಾರೆ. ಕಾರ್ಕಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಶೀಘ್ರದಲ್ಲೇ ಈ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಚಿತ್ರದಲ್ಲಿ 20% ಚೋಮನ ಪಾತ್ರವಿದೆ
"ನಮ್ಮ ಸಿನಿಮಾವು ಅಂದಿನ ಚೋಮನ ದುಡಿಯ ಮುಂದುವರಿದ ಭಾಗ ಎಂದು ಹೇಳಬಹುದು. ಮಂದಗಾಮಿ ಚೋಮ ಹೋರಾಟ ಮಾಡಿದರೂ ಭೂಮಿ ಸಿಗುವುದಿಲ್ಲ. ಆತನ ಮಗ ಕಾಳ ನ್ಯಾಯಕ್ಕಾಗಿ ತೀವ್ರಗಾಮಿಯಾಗಿ ಬಿಚ್ಚುಗತ್ತಿಯನ್ನು ಉಪಯೋಗಿಸಿದಾಗ ಏನಾಗುತ್ತದೆ? ಅಂತಿಮವಾಗಿ ಅಪ್ಪನ ಆಸೆಯನ್ನು ಕಾಳ ಮತ್ತು ಬೆಳ್ಳಿ ಈಡೇರಿಸಿಕೊಳ್ಳುತ್ತಾರಾ ಎಂಬುದನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರವನ್ನು ಕಾರಂತ ಟ್ರಸ್ಟ್‌ನವರು ನೋಡಿ ಆರ್ಶಿವರಿಸಿದ್ದಾರೆ. ಭಾವಗಳ ತೀವ್ರತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿಯಲಾಗಿದೆ. ಚೋಮನ ಪಾತ್ರ ಶೇಕಡ ಇಪ್ಪತ್ತರಷ್ಟು ಬರುತ್ತದೆ" ಎಂದು ನಿರ್ದೇಶಕ ಅನಿಲ್ ದೊರಸಮುದ್ರ ಹೇಳುತ್ತಾರೆ.