ಸದಭಿರುಚಿಯ ಮನಮುಟ್ಟುವ ಚಿತ್ರಗಳನ್ನು ನೀಡುವ ಮೂಲಕ 'ಕಲಾಸಾಮ್ರಾಟ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಡಾ. ಎಸ್. ನಾರಾಯಣ್ ಅವರ ಮುಂದಿನ ಸಿನಿಮಾ ಈಗಾಗಲೇ ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ಅತ್ಯಂತ ಸರಳವಾಗಿ ನೆರವೇರಿತ್ತು. ಇದೀಗ ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ಡೇಟ್ ಹೊರಬಿದ್ದಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅವರು ಈ ಚಿತ್ರದ ಅತ್ಯಂತ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ.
ಹಿಟ್ ಸಿನಿಮಾಗಳನ್ನು ನೀಡಿರುವ ಜೋಡಿ
ಕನ್ನಡ ಸಿನಿಪ್ರಿಯರ ಮನಗೆದ್ದಿರುವ ನಟಿ ಶ್ರುತಿ ಹಾಗೂ ನಿರ್ದೇಶಕ ಎಸ್. ನಾರಾಯಣ್ ಅವರದ್ದು ಸ್ಯಾಂಡಲ್ವುಡ್ನ ಯಶಸ್ವಿ ಜೋಡಿಗಳಲ್ಲಿ ಒಂದಾಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ ‘ಭಾಮಾ ಸತ್ಯಭಾಮಾ’, ‘ತವರಿನ ತೊಟ್ಟಿಲು’, ‘ವೀರಪ್ಪನಾಯಕ’ ಹಾಗೂ ‘ಸಿರಿವಂತ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಇದೀಗ ಸುದೀರ್ಘ ವಿರಾಮದ ಬಳಿಕ ಮತ್ತೊಮ್ಮೆ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಶ್ರುತಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಸಹಜವಾಗಿಯೇ ಸಿನಿಪ್ರಿಯರು ಮತ್ತು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.
Search Movie: ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ನಟನೆಯ ಹೊಸ ಸಿನಿಮಾಗೆ ಕ್ಲ್ಯಾಪ್ ಮಾಡಿದ ಶ್ರೀನಗರ ಕಿಟ್ಟಿ
ವಿ. ಹರಿಕೃಷ್ಣ ಸಂಗೀತ ನಿರ್ದೇಶನ
ನಟಿ ಶ್ರುತಿ ಅವರ ಪಾತ್ರದ ಸ್ವರೂಪ ಹೇಗಿರಲಿದೆ? ಕಥೆಯಲ್ಲಿ ಅವರ ಪಾತ್ರ ಯಾವ ರೀತಿಯ ಮಹತ್ವದ ತಿರುವುಗಳನ್ನು ನೀಡಲಿದೆ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಆದರೆ, ಈ ಕುರಿತು ಎಸ್. ನಾರಾಯಣ್ ಸದ್ಯಕ್ಕೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಮತ್ತೊಂದು ವಿಶೇಷವೆಂದರೆ, ಈ ನೂತನ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಎಸ್. ನಾರಾಯಣ್ ಮತ್ತು ವಿ. ಹರಿಕೃಷ್ಣ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸಂಗೀತ ಪ್ರಿಯರಿಗೂ ಇದು ವಿಶೇಷ ರಸದೌತಣ ನೀಡುವ ನಿರೀಕ್ಷೆಯಿದೆ.
ತಾಂತ್ರಿಕ ಬಳಗದಲ್ಲೂ ಅನುಭವಿಗಳ ದಂಡೇ ಇದ್ದು, ಗಿರಿಧರ್ ದಿವಾನ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಅವರ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಅಜಯ್ ಅವರು ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಪುಷ್ಪಮಾಲಾ ಅವರು ಪ್ರೊಡಕ್ಷನ್ ಹೆಡ್ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರದ ಶೀರ್ಷಿಕೆ, ನಿರ್ಮಾಪಕರು, ನಿರ್ಮಾಣ ಸಂಸ್ಥೆ ಹಾಗೂ ಉಳಿದ ತಾರಾಬಳಗದ ವಿವರಗಳನ್ನು ಚಿತ್ರತಂಡ ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.