ಭವ್ಯಾ ಗೌಡ (Bhavya Gowda) ಕಳೆದ ಕೆಲವು ವಾರಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಯಾವುದೇ ರಿಯಾಲಿಟಿ ಶೋ ಅಥವಾ ಹೆಚ್ಚಿನ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿರಲಿಲ್ಲ. ವಿದೇಶಿ ಪ್ರವಾಸ ಮಾಡಿ ಸೈಲೆಂಟ್ ಆಗಿದ್ದರು. ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಕರ್ಣ ಎಂಬ ಹೊಸ ಧಾರಾವಾಹಿಗೆ ನಾಯಕಿ ನಟಿಯಾಗಿ ಎಂಟ್ರಿ ಆದರು. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿತು. ಆದರೆ, ಕರ್ಣ ಧಾರಾವಾಹಿ ಪ್ರಸಾರ ಕಾಣಬೇಕಿದ್ದ ದಿನ ದಿಢೀರ್ ಮುಂದೂಡಲಾಯಿತು. ಇದಕ್ಕೆ ಕಾರಣ ಭವ್ಯಾ ಅವರೇ ಆಗಿದ್ದರು.
ಕೆಲ ವಿವಾದದ ಬಳಿಕ ಈಗ ಕರ್ಣ ಧಾರಾವಾಹಿ ಆರಂಭವಾಗಿದೆ. ಭವ್ಯಾ ಗೌಡ ಮುದ್ದ-ಮುದ್ದಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಭವ್ಯಾ ಅವರನ್ನು ನಿಧಿ ಪಾತ್ರದಲ್ಲಿ ಇಷ್ಟಪಡುತ್ತಿದ್ದಾರೆ. ಇದರ ಮಧ್ಯೆ ಈಗ ಭವ್ಯಾ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೀರಿಯಲ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಭವ್ಯಾ ಈಗ ಕಿವಿ ಚುಚ್ಚಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಿವಿ ಚುಚ್ಚಿಸಿಕೊಳ್ಳುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಿಲ್ಕ್ ಸೀರೆಯನ್ನು ತೊಟ್ಟುಕೊಂಡು, ಸುಂದರವಾಗಿರುವ ನೆಕ್ಲೇಸ್ ಧರಿಸಿ ಗೊಂಬೆಯಂತೆ ಅಲಂಕಾರಗೊಂಡು ಭವ್ಯಾ ಕಿವಿ ಚುಚ್ಚಿಸಿಕೊಳ್ತಿದ್ದಾರೆ. ಕೈ ಮುಗಿದು, ಕಣ್ಣು ಮುಚ್ಚಿರುವ ಅವರು ಒಂದು ಬುಲೆಟ್ ಬೀಳ್ತಿದ್ದಂತೆ ಅಯ್ಯೋ, ಅಮ್ಮ ಅಂತ ಕಿರುಚಿದ್ದಾರೆ. ಮತ್ತೊಂದು ಕಿವಿ ಚುಚ್ಚುವಾಗಲೂ ತಡಕಾಡಿದ್ದಾರೆ. ಆದ್ರೆ ಹೊಸ ಲುಕ್ ನಲ್ಲಿ ಭವ್ಯಾ ಗೌಡ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಭವ್ಯಾ ಅವರು ಕಿವಿ ಚುಚ್ಚಿಸುವಾಗ ಅವರ ಅಮ್ಮ ಕೂಡ ಜೊತೆಗಿದ್ದರು. ಭವ್ಯಾ ಕಿರುಚಾಡುವುದನ್ನು ನೋಡಿ ಅವರ ಅಮ್ಮ ನಗುತ್ತಿರುವುದು ಕಂಡುಬಂತು. ಅಲ್ಲೆ ಇದ್ದ ಸಿಬ್ಬಂದಿ ಮಾತ್ರ ಭವ್ಯಾ ಕಿರುಚಿದ್ದನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ. ಕಿವಿ ಚುಚ್ಚಿ ಮುಗಿಯುವ ಹೊತ್ತಿಗೆ ಭವ್ಯಾ ಅವರ ಮುಖ ಕೆಂಪಾಗಿತ್ತು.