ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಒಂದಾಗಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಕಿಂಗ್’ ಚಿತ್ರದ ಎರಡನೇ ಹಾಡು ‘ಡ್ಯಾಡಿ ಕೂಲ್’ ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಬೋನಿ ಎಂ (Boney M) ಅವರ ಜನಪ್ರಿಯ ಹಾಡಿಗೆ ಬಾಲಿವುಡ್ ಸ್ಪರ್ಶ ನೀಡಲಾಗಿದ್ದು, ಈ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಅದ್ಭುತ ನೃತ್ಯದ ಮೂಲಕ ಗಮನ ಸೆಳೆದಿದ್ದಾರೆ. ವೈಭವೀ ಮರ್ಚಂಟ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ‘ತು ಮಿಲ್ ಜಾಯೆ’ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಈ ಎರಡೂ ಹಾಡುಗಳು ‘ಕಿಂಗ್’ ಚಿತ್ರದ ವಿಭಿನ್ನ ಆಯಾಮಗಳನ್ನು ಪರಿಚಯಿಸಿವೆ.
ಇದನ್ನೂ ಓದಿ: Bigg Boss Kannada 13: ಜೋಡಿ ಟಾಸ್ಕ್‌ನಲ್ಲಿ ಯಶಸ್ - ಸೌಂದರ್ಯಗೆ ಗೆಲುವು! ಕ್ಯಾಪ್ಟನ್ಸಿ ರೇಸ್‌ಗೆ ಲಗ್ಗೆ
‘ಡ್ಯಾಡಿ ಕೂಲ್ (ಕಿಂಗ್ ವರ್ಷನ್)’ ಹಾಡನ್ನು ಮೆಟಾ ಸಂಸ್ಥೆಯ ಪ್ರಮುಖ ಕಾರ್ಯಕ್ರಮವಾದ ‘ಹೌಸ್ ಆಫ್ ಇನ್‌ಸ್ಟಾಗ್ರಾಮ್ 2026’ರಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳು ಭಾಗವಹಿಸಿದ್ದರು.
ಹಾಡನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಶಾರುಖ್ ಖಾನ್, “ಬೇಬೋ ಜೊತೆ ಮತ್ತೆ ಬಂದಿದ್ದೇನೆ... ಹಾಡು ಹಳೆಯ ಶೈಲಿಯದ್ದು, ಆದರೆ ಈಗಲೂ ಕೂಲ್!” ಎಂದು ಬರೆದುಕೊಂಡಿದ್ದಾರೆ.
ಈ ಹಾಡಿಗೆ ಸಚಿನ್-ಜಿಗರ್ ಸಂಗೀತ ಸಂಯೋಜನೆ ಮಾಡಿದ್ದು, ಅರ್ಜಿತ್ ಸಿಂಗ್ ಮತ್ತು ಶಿಲ್ಪಾ ರಾವ್ ಧ್ವನಿ ನೀಡಿದ್ದಾರೆ. ಕುಮಾರ್ ಹಿಂದಿ ಸಾಹಿತ್ಯ ರಚಿಸಿದ್ದಾರೆ. ಝೀ ಮ್ಯೂಸಿಕ್ ಕಂಪನಿ ಮತ್ತು ಟಿ-ಸೀರೀಸ್‌ನ ಯೂಟ್ಯೂಬ್ ಚಾನೆಲ್‌ಗಳಲ್ಲಿ ಈ ಹಾಡು ಲಭ್ಯವಿದೆ.
ಶಾರುಖ್ ಮತ್ತು ಕರೀನಾ ಈ ಹಿಂದೆ 2001ರಲ್ಲಿ ಬಿಡುಗಡೆಯಾದ ‘ಅಶೋಕ’ ಮತ್ತು ‘ಕಭಿ ಖುಷಿ ಕಭಿ ಗಮ್’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇವರಿಬ್ಬರ ಕೊನೆಯ ಪ್ರಮುಖ ಸಿನಿಮಾ ಸಹಯೋಗ 2011ರಲ್ಲಿ ಬಿಡುಗಡೆಯಾದ ‘ರಾ.ಒನ್’ ಆಗಿತ್ತು.
ನವೆಂಬರ್ 2ರಂದು ಶಾರುಖ್ ಖಾನ್ ಅವರ 61ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕರೀನಾ ಕಪೂರ್ ‘ಕಿಂಗ್’ ಚಿತ್ರದಲ್ಲಿ ತಾವು ನಟಿಸುತ್ತಿರುವುದನ್ನು ಖಚಿತಪಡಿಸಿದ್ದರು. ಈ ವೇಳೆ ಚಿತ್ರದ ನೃತ್ಯ ದೃಶ್ಯದ ಕಪ್ಪು-ಬಿಳುಪಿನ ಚಿತ್ರವೊಂದನ್ನೂ ಹಂಚಿಕೊಂಡಿದ್ದರು. ಅದರಲ್ಲಿ ಶಾರುಖ್ ಮತ್ತು ಕರೀನಾ ಪರಸ್ಪರ ಮುಖಾಮುಖಿಯಾಗಿ ನೃತ್ಯದ ಭಂಗಿಯಲ್ಲಿ ನಿಂತಿರುವುದು ಕಂಡುಬಂದಿತ್ತು.
‘ತು ಮಿಲ್ ಜಾಯೆ’ ಮೂಲಕ ಪ್ರೇಮಕಥೆಯ ಸುಳಿವು
ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಸಂಭ್ರಮದ ಭಾಗವಾಗಿ ನವೆಂಬರ್ 2ರ ಮಧ್ಯರಾತ್ರಿ ‘ಕಿಂಗ್’ ಚಿತ್ರದ ಮೊದಲ ಹಾಡು ‘ತು ಮಿಲ್ ಜಾಯೆ’ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಅದಕ್ಕೂ ಒಂದು ವಾರ ಮೊದಲು ಚಿತ್ರದ ಆಕ್ಷನ್ ಭರಿತ ಪೋಸ್ಟರ್ ಬಿಡುಗಡೆಯಾಗಿತ್ತು.
‘ಕಿಂಗ್’ ಚಿತ್ರದಲ್ಲಿ ದೊಡ್ಡ ತಾರಾಗಣ
ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಜಾಕಿ ಶ್ರಾಫ್, ಅರ್ಷದ್ ವಾರ್ಸಿ ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದಲ್ಲದೆ, ಕರೀನಾ ಕಪೂರ್, ರಾಣಿ ಮುಖರ್ಜಿ ಮತ್ತು ದೀಪಿಕಾ ಪಡುಕೋಣೆ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2023ರಲ್ಲಿ ಬಿಡುಗಡೆಯಾದ ‘ಡಂಕಿ’ ಚಿತ್ರದ ಬಳಿಕ ಶಾರುಖ್ ಖಾನ್ ಮತ್ತೆ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿದೆ.
ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಹಾಗೂ ಸಿದ್ಧಾರ್ಥ್ ಮತ್ತು ಮಮತಾ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.
ಇದನ್ನೂ ಓದಿ: Samay Raina: ವಿಶ್ವದಾಖಲೆ ಬರೆದ ಯೂಟ್ಯೂಬರ್ ಸಮಯ್ ರೈನಾ
2026ರ ಡಿಸೆಂಬರ್ 24ರಂದು ‘ಕಿಂಗ್’ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾರುಖ್ ಮತ್ತು ಕರೀನಾ ಅವರ 15 ವರ್ಷಗಳ ನಂತರದ ಈ ಜೋಡಿ ಮತ್ತೆ ತೆರೆ ಮೇಲೆ ಮೋಡಿ ಮಾಡಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.