ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

61ನೇ ವರ್ಷಕ್ಕೆ ಕಾಲಿಟ್ಟ ಶಾರುಖ್‌ ಖಾನ್, ವಿಶ್‌ ಮಾಡಿದ ಫ್ಯಾನ್ಸ್; ʻಬಾಲಿವುಡ್‌ ಬಾದ್‌ಶಾʼ ಬಳಿ ಎಷ್ಟು ಸಾವಿರ ಕೋಟಿ ಆಸ್ತಿ ಇದೆ ಗೊತ್ತಾ?

Shah Rukh Khan Birthday: ಶಾರುಖ್‌ ಖಾನ್ ಅವರು ಇಂದು ತಮ್ಮ 61ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದು, ಭಾರತೀಯ ಚಿತ್ರರಂಗದಲ್ಲಷ್ಟೇ ಅಲ್ಲದೆ ಜಾಗತಿಕ ಉದ್ಯಮ ಕ್ಷೇತ್ರದಲ್ಲೂ ಅಧಿಪತ್ಯ ಸಾಧಿಸಿರುವ ಶಾರುಖ್‌, ಬರೋಬ್ಬರಿ 10,000 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ನಟರಾಗಿ ಹೊರಹೊಮ್ಮಿದ್ದಾರೆ.

ಬಾಲಿವುಡ್‌ ನಟ ಶಾರುಖ್ ಖಾನ್ ಇಂದು (ನ.2) ತಮ್ಮ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ತಮ್ಮ ಬದುಕಿನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೂರು ದಶಕಗಳಿಗೂ ಮೀರಿದ ತಮ್ಮ ಸಿನಿಪಯಣದಲ್ಲಿ ಕೇವಲ ನಟನೆಯಷ್ಟೇ ಅಲ್ಲದೆ, ವ್ಯಾಪಾರ ಹೂಡಿಕೆಗಳ ಮೂಲಕವೂ ಜಾಗತಿಕ ಮಟ್ಟದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳು, ಬಿಸಿನೆಸ್ ಸಾಮ್ರಾಜ್ಯ ಹಾಗೂ ಜಾಗತಿಕ ಮಟ್ಟದ ಆಸ್ತಿಗಳನ್ನು ಹೊಂದುವ ಮೂಲಕ ವಿಶ್ವದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಸ್ಟಾರ್‌ ನಟರಾಗಿ ಅವರು ಹೊರಹೊಮ್ಮಿದ್ದಾರೆ.

ಭಾರತದ ನಂ.1 ಶ್ರೀಮಂತ ನಟ

ಸಿನಿಮಾಗಳು, ಬ್ರ್ಯಾಂಡ್ ಜಾಹೀರಾತುಗಳು, ಸ್ವಂತ ನಿರ್ಮಾಣ ಸಂಸ್ಥೆ ಹಾಗೂ ಕ್ರೀಡಾ ಹೂಡಿಕೆಗಳ ಮೂಲಕ ಶಾರುಖ್ ಅಪಾರ ಆದಾಯ ಗಳಿಸುತ್ತಿದ್ದಾರೆ. ‘ಹುರುನ್ ಇಂಡಿಯಾ ರಿಚ್ ಲಿಸ್ಟ್ 2026’ರ ಅಧಿಕೃತ ವರದಿಯ ಪ್ರಕಾರ, ಶಾರುಖ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದ್ದು, ಇವರು ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೆಹಲಿಯಲ್ಲಿ ದುಬಾರಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್‌; ಕಿಂಗ್‌ ಖಾನ್‌ಗೆ ಈ ಬಿಲ್ಡಿಂಗ್‌ ಜೊತೆಗಿನ ಸೆಂಟಿಮೆಂಟ್‌ ಏನ್‌ ಗೊತ್ತಾ?

ಶಾರುಖ್‌ ಬಳಿಯಿವೆ ಸೂಪರ್‌ ಕಾರುಗಳು

ಶಾರುಖ್‌ ಬಳಿ ದುಬಾರಿ ಐಷಾರಾಮಿ ಕಾರುಗಳಿವೆ. ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಬುಗಾಟಿ ವೇರಾನ್ (Bugatti Veyron), 9.60 ಕೋಟಿ ರೂಪಾಯಿ ಬೆಲೆಯ ರೋಲ್ಸ್-ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ ಹಾಗೂ 3.29 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರುಗಳು ಪ್ರಮುಖ ಆಕರ್ಷಣೆಯಾಗಿವೆ. ಇವುಗಳ ಜೊತೆಗೆ ಬಿಎಂಡಬ್ಲ್ಯು ಐ8 (2.62 ಕೋಟಿ ರೂ.), ಬಿಎಂಡಬ್ಲ್ಯು 7 ಸರಣಿ (1.35 ಕೋಟಿ ರೂ.), ಮರ್ಸಿಡಿಸ್-ಬೆಂಜ್ ಎಸ್-ಕ್ಲಾಸ್ (1.86 ಕೋಟಿ ರೂ.), ಮರ್ಸಿಡಿಸ್-ಬೆಂಜ್ ಜಿಎಲ್ಇ (88 ಲಕ್ಷ ರೂ.) ಮತ್ತು ಆಡಿ ಎ6 ನಂತಹ ಕಾರುಗಳು ಕೂಡ ಇವರ ಬಳಿಯಿವೆ.

ರಿಯಲ್ ಎಸ್ಟೇಟ್‌ನಲ್ಲೂ ಶಾರುಖ್‌ ಹವಾ

ಶಾರುಖ್ ಖಾನ್ ಅವರ ರಿಯಲ್ ಎಸ್ಟೇಟ್ ಹೂಡಿಕೆಗಳು ಸಹ ಅಚ್ಚರಿಮೂಡಿಸುವಂತಿವೆ. ಮುಂಬೈನ ಬಾಂದ್ರಾದ ಸಮುದ್ರ ತೀರದಲ್ಲಿರುವ ಅವರ ಬಂಗಲೆ ‘ಮನ್ನತ್’ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ನಿವಾಸಗಳಲ್ಲಿ ಒಂದಾಗಿದೆ. 2001ರಲ್ಲಿ 13.32 ಕೋಟಿ ರೂ.ಗೆ ಖರೀದಿಸಲಾಗಿದ್ದ ಈ ಬಂಗಲೆಯ ಪ್ರಸ್ತುತ ಮೌಲ್ಯ ಸುಮಾರು 300 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಸದ್ಯ ಇಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ.

ಮುಂಬೈ ಸಮೀಪದ ಅಲಿಬಾಗ್‌ನಲ್ಲಿ ಈಜುಕೊಳ ಮತ್ತು ಹೆಲಿಪ್ಯಾಡ್ ಸೌಲಭ್ಯವಿರುವ 20,000 ಚದರ ಮೀಟರ್ ವಿಸ್ತೀರ್ಣದ ಭವ್ಯ ಫಾರ್ಮ್‌ಹೌಸ್ ಹೊಂದಿದ್ದು, ಇದರ ಮೌಲ್ಯ 15 ಕೋಟಿ ರೂ. ಆಗಿದೆ. ಇಷ್ಟೇ ಅಲ್ಲದೆ, ದುಬೈನ ಪಾಮ್ ಜುಮೇರಾದಲ್ಲಿ ವಿಲ್ಲಾ ಹಾಗೂ ಸೆಂಟ್ರಲ್ ಲಂಡನ್‌ನ ಪಾರ್ಕ್ ಲೇನ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಶಾರುಖ್‌ ಹೊಂದಿದ್ದಾರೆ.

ಮನರಂಜನೆ, ಕ್ರೀಡಾ ಕ್ಷೇತ್ರದಲ್ಲೂ ಹೂಡಿಕೆ

ಕೇವಲ ನಟನೆಯಿಂದಷ್ಟೇ ಅಲ್ಲದೆ ಉದ್ಯಮಗಳ ಮೂಲಕವೂ ಉತ್ತಮ ಆದಾಯ ಗಳಿಸುತ್ತಿದ್ದಾರೆ ಶಾರುಖ್. ನಟಿ ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಅವರೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಐಪಿಎಲ್ ಕ್ರಿಕೆಟ್ ಫ್ರಾಂಚೈಸಿ ‘ಕೊಲ್ಕತ್ತಾ ನೈಟ್ ರೈಡರ್ಸ್’ (KKR) ತಂಡದ ಸಹ-ಮಾಲೀಕರಾಗಿದ್ದಾರೆ. 2002ರಲ್ಲಿ ಆರಂಭವಾದ ಅವರ ಸ್ವಂತ ನಿರ್ಮಾಣ ಸಂಸ್ಥೆ ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ ಮೂಲಕ 'ಓಂ ಶಾಂತಿ ಓಂ', 'ಮೈ ನೇಮ್ ಈಸ್ ಖಾನ್', 'ರಾ.ಒನ್', 'ಡಿಯರ್ ಜಿಂದಗಿ' ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಇದರ ಅಂಗಸಂಸ್ಥೆಯಾದ ‘ರೆಡ್ ಚಿಲ್ಲೀಸ್ ವಿಎಫ್‌ಎಕ್ಸ್’ ಭಾರತೀಯ ಚಿತ್ರರಂಗದ ಬೃಹತ್ ಬಜೆಟ್ ಸಿನಿಮಾಗಳಿಗೆ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಒದಗಿಸುತ್ತಿದೆ. ಇದಲ್ಲದೆ, ಶಿಕ್ಷಣ ಮತ್ತು ಮನರಂಜನೆ ಸಂಯೋಜಿತ ಮಕ್ಕಳ ತಾಣವಾದ ‘ಕಿಡ್‌ಜಾನಿಯಾ ಇಂಡಿಯಾ’ ಸಂಸ್ಥೆಯಲ್ಲಿಯೂ ಶೇ. 26ರಷ್ಟು ಹೂಡಿಕೆಯನ್ನು ಹೊಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಶಾರುಖ್ ಖಾನ್, ಕಾರ್ಪೊರೇಟ್ ಜಾಹೀರಾತು ಮಾರುಕಟ್ಟೆಯಲ್ಲಿ ಅಗ್ರ ಬೇಡಿಕೆಯ ತಾರೆಯಾಗಿದ್ದಾರೆ. ಆಟೋಮೊಬೈಲ್, ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖ ಬ್ರ್ಯಾಂಡ್‌ಗಳಾದ ಹ್ಯುಂಡೈ, ಬೈಜೂಸ್, ವಿ, ಫಾಕ್ಸ್‌ಟೇಲ್ ಮತ್ತು ದುಬೈ ಟೂರಿಸಂ ಮುಂತಾದ ಕಂಪನಿಗಳಿಗೆ ರಾಯಭಾರಿಯಾಗಿದ್ದಾರೆ.

'ಎಕನಾಮಿಕ್ ಟೈಮ್ಸ್' ವರದಿ ಪ್ರಕಾರ, ಪ್ರತಿ ಬ್ರ್ಯಾಂಡ್ ಪ್ರಚಾರದ ಒಪ್ಪಂದಕ್ಕೆ ಇವರು 5 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದು, ಕೇವಲ ಜಾಹೀರಾತುಗಳಿಂದಲೇ ವಾರ್ಷಿಕ ಸುಮಾರು 150 ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ ಶಾರುಖ್‌.