ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೂ. ಎನ್‌ಟಿಆರ್‌–ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಚಿತ್ರಕ್ಕೆ ಬಾಲಿವುಡ್‌ನ ಇಬ್ಬರು ಘಟಾನುಘಟಿ ಕಲಾವಿದರು ಎಂಟ್ರಿ!

ಜೂ. ಎನ್‌ಟಿಆರ್‌–ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಚಿತ್ರಕ್ಕೆ ಬಾಲಿವುಡ್ ತಾರೆಯರಾದ ಶಾಹಿದ್ ಕಪೂರ್ ಹಾಗೂ ಆಲಿಯಾ ಭಟ್ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರದಲ್ಲಿ ಈಗಾಗಲೇ ಅನಿಲ್ ಕಪೂರ್ ಕೂಡ ಇದ್ದಾರೆ. 1960ರ ದಶಕದ ಅಫೀಮು ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಎನ್‌ಟಿಆರ್‌ ‘ಲೂಗರ್’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಮ್ಯಾನ್ ಆಫ್ ಮಾಸಸ್’ ಜೂನಿಯರ್ ಎನ್‌ಟಿಆರ್ ಮತ್ತು ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಡ್ರ್ಯಾಗನ್’ ಸಿನಿಮಾದ ಕಲಾವಿದರ ಬಳಗ ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಈಗಾಗಲೇ ಬಾಲಿವುಡ್‌ನ ಹಿರಿಯ ನಟ ಅನಿಲ್ ಕಪೂರ್ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿರುವ ಬೆನ್ನಲ್ಲೇ, ಹಿಂದಿ ಚಿತ್ರರಂಗದ ತಾರೆಯರಾದ ಶಾಹಿದ್ ಕಪೂರ್ ಹಾಗೂ ಆಲಿಯಾ ಭಟ್ ಕೂಡ ‘ಡ್ರ್ಯಾಗನ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಹೊಸ ಸುದ್ದಿ ಸಖತ್‌ ಟ್ರೆಂಡಿಂಗ್‌ ಆಗಿದೆ.

ಆಲಿಯಾ - ಶಾಹಿದ್‌ ಎಂಟ್ರಿಯಿಂದ ಲಾಭ

ಮೂಲಗಳ ಪ್ರಕಾರ, ಶಾಹಿದ್ ಮತ್ತು ಆಲಿಯಾ ‘ಡ್ರ್ಯಾಗನ್’ ಚಿತ್ರದಲ್ಲಿ ಮಹತ್ವದ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಈ ಕುರಿತು ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ. ಈ ವರದಿ ನಿಜವಾದಲ್ಲಿ, ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ (RRR) ಬಳಿಕ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಆಲಿಯಾ ಭಟ್ ತೆರೆ ಹಂಚಿಕೊಳ್ಳುತ್ತಿರುವ ಎರಡನೇ ಸಿನಿಮಾ ಇದಾಗಲಿದೆ. ಈ ಬೆಳವಣಿಗೆ ಹಿಂದಿ ಬೆಲ್ಟ್‌ನಲ್ಲಿ ‘ಡ್ರ್ಯಾಗನ್’ ಚಿತ್ರಕ್ಕೆ ಮತ್ತಷ್ಟು ದೊಡ್ಡ ಮಾರುಕಟ್ಟೆಯನ್ನು ಒದಗಿಸಲಿದೆ.

NTR Trivikram: ಎನ್‌ಟಿಆರ್‌ – ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ಈ ಟೈಟಲ್?

ಮತ್ತೊಂದೆಡೆ, ಶಾಹಿದ್ ಕಪೂರ್ ಮತ್ತು ಜೂನಿಯರ್ ಎನ್‌ಟಿಆರ್ ಒಟ್ಟಿಗೆ ತೆರೆಯ ಮೇಲೆ ಮುಖಾಮುಖಿಯಾಗುವ ಸಾಧ್ಯತೆಯು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಈ ಅನಿರೀಕ್ಷಿತ ಕಾಂಬಿನೇಷನ್ ಚಿತ್ರಕ್ಕೆ ದೊಡ್ಡ ಪ್ಲಸ್‌ ಪಾಯಿಂಟ್‌ ಆಗಲಿದೆ ಎಂಬುದು ಕೇಳಿಬರುತ್ತಿರುವ ಮಾತು.

ಬ್ರೇಕ್‌ ಪಡೆದುಕೊಂಡಿರುವ ನಟ ಎನ್‌ಟಿಆರ್‌

ತಮ್ಮ ಪ್ರತಿಯೊಂದು ಸಿನಿಮಾವನ್ನೂ ವಿಶಿಷ್ಟ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಡುವ ಪ್ರಶಾಂತ್ ನೀಲ್, ‘ಡ್ರ್ಯಾಗನ್’ ಚಿತ್ರವನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಕೊಡಲು ಪ್ಲ್ಯಾನ್‌ ಮಾಡುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಅವರು ಸದ್ಯ ಭುಜದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು, ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ, ಅವರ ಅನುಪಸ್ಥಿತಿಯಲ್ಲಿ ಪ್ರಶಾಂತ್ ನೀಲ್ ಬಾಕಿ ಕಲಾವಿದರಿರುವ ದೃಶ್ಯಗಳ ಚಿತ್ರೀಕರಣವನ್ನು ಭರದಿಂದ ಮುನ್ನಡೆಸುತ್ತಿದ್ದಾರೆ.

2027ರ ಜೂನ್ 11ರಂದು ವಿಶ್ವದಾದ್ಯಂತ ರಿಲೀಸ್

‘ಡ್ರ್ಯಾಗನ್’ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ‘ಲೂಗರ್’ ಎಂಬ ಅಪಾಯಕಾರಿ ಹಂತಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, 1960ರ ದಶಕದಲ್ಲಿ ವಿಶ್ವದ ಅತ್ಯಂತ ಲಾಭದಾಯಕ ಮಾದಕವಸ್ತು ಜಾಲದ ಮೇಲೆ ಹಿಡಿತ ಸಾಧಿಸಲು ಅಫ್ಘಾನ್ ಟ್ರೇಡಿಂಗ್ ಕಂಪನಿ ಮತ್ತು ಗೋಲ್ಡನ್ ಟ್ರೇಡಿಂಗ್ ಕಂಪನಿ ನಡುವೆ ನಡೆಯುವ ಜಾಗತಿಕ ಅಫೀಮು ಕಾರ್ಟೆಲ್ ಯುದ್ಧಗಳ ಕರಾಳ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಅಪರಾಧ, ಮಾಫಿಯಾ ಮತ್ತು ರಾಜಕೀಯ ಅಸ್ಥಿರತೆಯ ವಾಸ್ತವವನ್ನು ತೆರೆದಿಡಲಿರುವ ಈ ಸಿನಿಮಾವು 2027ರ ಜೂನ್ 11ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.