ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅಭಿನಯದ 'ಕಾಕ್‌ಟೇಲ್' ಸಿನಿಮಾವು ಆಧುನಿಕ ಸಂಬಂಧಗಳು ಮತ್ತು ರೊಮ್ಯಾನ್ಸ್‌ಗೆ ಹೊಸ ಆಯಾಮ ನೀಡಿತ್ತು. ಆ ಸಿನಿಮಾವು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿದೆ. ಇದೀಗ 14 ವರ್ಷಗಳ ನಂತರ, ನಿರ್ದೇಶಕ ಹೋಮಿ ಅದಾಜಾನಿಯಾ 'ಕಾಕ್‌ಟೇಲ್ 2' ಚಿತ್ರದೊಂದಿಗೆ ಮರಳಿದ್ದಾರೆ. ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಈ ಸೀಕ್ವೆಲ್ ಇಂದು (ಜೂನ್ 19) ಬಿಡುಗಡೆಯಾಗಿದೆ.
ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆಕ್ಷನ್ ಸಿನಿಮಾಗಳ ನಡುವೆ ಈ ಚಿತ್ರ ಒಂದು ಉತ್ತಮ ಬದಲಾವಣೆ ಎಂದು ಬಣ್ಣಿಸಿದ್ದಾರೆ. "ಪರ್ಫೆಕ್ಟ್ ಸಮ್ಮರ್ ವಾಚ್" ಎಂದು ಕರೆದಿದ್ದಾರೆ. ಒಂದು ಸಿಂಪಲ್ ರೋಮ್ಯಾಂಟಿಕ್ ಸಿನಿಮಾ ನೋಡಬಯಸುವ ಪ್ರೇಕ್ಷಕರಿಗೆ ಈ ಚಿತ್ರ ಸೂಕ್ತ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಇದು ಅಚ್ಚುಕಟ್ಟಾದ ಸಿನಿಮಾ
"ಬಾಲಿವುಡ್ ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗಳಿಂದ ಸಿನಿಪ್ರಿಯರು ಏನನ್ನು ನಿರೀಕ್ಷಿಸುತ್ತಾರೋ, ಅದನ್ನು ಈ ಸಿನಿಮಾ ಅಚ್ಚುಕಟ್ಟಾಗಿ ನೀಡಿದೆ. ಈ ಚಿತ್ರವು ಭಾವನೆಗಳು, ಸಂಬಂಧಗಳು ಮತ್ತು ಹಾಸ್ಯವನ್ನು ಅತ್ಯಂತ ಮನರಂಜನಾತ್ಮಕವಾಗಿ, ಪ್ರಸ್ತುತ ಜೀವನಕ್ಕೆ ಹತ್ತಿರವಾಗುವಂತೆ ಚಿತ್ರೀಕರಿಸಿದೆ" ಎಂದು ಸಿನಿಪ್ರಿಯರೊಬ್ಬರು ತಿಳಿಸಿದ್ದಾರೆ.
ರೋಮ್ಯಾಂಟಿಕ್ ಕಾಮಿಡಿಗೆ ಬೆಸ್ಟ್ ಉದಾಹರಣೆ
ʻಕಾಕ್‌ಟೇಲ್ 2ʼ ಚಿತ್ರದ ಪ್ರಮುಖ ವಿಷಯಗಳಾದ ಪ್ರೀತಿ, ಬದ್ಧತೆ ಮತ್ತು ಆಧುನಿಕ ಸಂಬಂಧಗಳ ಬಗ್ಗೆಯೂ ಮಾತನಾಡಿರುವ ಕೆಲವರು ಚಿತ್ರಕ್ಕೆ 4.5/5 ರೇಟಿಂಗ್ ನೀಡಿದ್ಧಾರೆ. "ಈ ಸಿನಿಮಾ ತನ್ನ ಮನರಂಜನಾ ಶೈಲಿಯನ್ನು ಉಳಿಸಿಕೊಂಡೇ ಒಂದು ಉತ್ತಮ ಸಂದೇಶವನ್ನು ನೀಡುತ್ತದೆ. ರೋಮ್ಯಾಂಟಿಕ್ ಕಾಮಿಡಿಗಳು ಬಾಲಿವುಡ್‌ನ ಅತ್ಯಂತ ಬಲವಾದ ಜಾನರ್‌ಗಳಲ್ಲಿ ಒಂದಾಗಿದ್ದು, ಪ್ರೇಕ್ಷಕರು ಬೆಳ್ಳಿತೆರೆಯ ಮೇಲೆ ಮಿಸ್ ಮಾಡಿಕೊಳ್ಳುತ್ತಿದ್ದ ಆ ಮ್ಯಾಜಿಕ್ ಅನ್ನು 'ಕಾಕ್‌ಟೇಲ್ 2' ಸಕ್ಸಸ್‌ಫುಲ್ ಆಗಿ ಮರಳಿ ತಂದಿದೆ" ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಕ್‌ಟೇಲ್ 2 ಸಿನಿಮಾಕ್ಕೆ ಸಿನಿಪ್ರಿಯರ ರೆಸ್ಪಾನ್ಸ್
ನಟಿ ಕೃತಿ ಸನೋನ್ ಅವರ ಅಭಿನಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕೃತಿ ಅವರ ನಟನಾ ಕೌಶಲ್ಯ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅನ್ನು ಶ್ಲಾಘಿಸಿರುವ ಸಿನಿಪ್ರಿಯರು, "ಈ ಸಿನಿಮಾದ ಹಲವು ಪ್ರಮುಖ ದೃಶ್ಯಗಳನ್ನು ಕೃತಿ ಅವರೇ ಆವರಿಸಿಕೊಂಡಿದ್ದಾರೆ. ಕೃತಿ ಅವರು ಆಕ್ಟಿಂಗ್ ಕ್ವೀನ್.." ಎಂದು ಹೊಗಳಿದ್ದಾರೆ. ಜೊತೆಗೆ "ಶಾಹೀದ್ ಅವರು ಸತತವಾಗಿ ಗುಣಮಟ್ಟದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ಅವರಿಗೆ ಇನ್ನಷ್ಟು ಮನ್ನಣೆ ಸಿಗಬೇಕು. ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೊಂದಿಗೂ ಶಾಹಿದ್ ಕೆಮಿಸ್ಟ್ರಿ ಉತ್ತಮವಾಗಿದೆ" ಎಂದಿದ್ದಾರೆ.
ಈ ಥರದ ಸಿನಿಮಾಗಳು ಬಾಲಿವುಡ್‌ನಿಂದ ಮಾತ್ರ ಸಾಧ್ಯ
'ಕಾಕ್‌ಟೇಲ್ 2' ಸಿನಿಮಾಕ್ಕೆ ಎ ಪ್ರಮಾಣ ಪತ್ರ
'ಕಾಕ್‌ಟೇಲ್ 2' ಚಿತ್ರಕ್ಕೆ ಲವ್ ರಂಜನ್ ಮತ್ತು ತರುಣ್ ಜೈನ್ ಕಥೆ ಬರೆದಿದ್ದು, ಮ್ಯಾಡಾಕ್ ಫಿಲ್ಮ್ಸ್ ಮತ್ತು ಲವ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿವೆ. ಈ ಚಿತ್ರಕ್ಕೆ CBFC ಯಾವುದೇ ದೃಶ್ಯಗಳನ್ನು ಕತ್ತರಿಸದೇ A ಪ್ರಮಾಣಪತ್ರವನ್ನು ನೀಡಿದೆ. ಇದು ಕೃತಿ ಸನೋನ್ ವೃತ್ತಿಜೀವನದ ಮೊದಲ ʻಎʼ ಪ್ರಮಾಣ ಪತ್ರ ಪಡೆದ ಸಿನಿಮಾವಾಗಿದ್ದರೆ, ರಶ್ಮಿಕಾ ಮಂದಣ್ಣ ಅವರಿಗೆ 'ಅನಿಮಲ್' ನಂತರ ಇದು ಎರಡನೇ ಚಿತ್ರವಾಗಿದೆ. ಇನ್ನು, ಶಾಹಿದ್ ಕಪೂರ್ ಅವರ ಈ ಹಿಂದಿನ 'ಓ ರೋಮಿಯೋ' ಚಿತ್ರಕ್ಕೂ A ಪ್ರಮಾಣ ಪತ್ರ ಸಿಕ್ಕಿತ್ತು.