ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಅಗ್ನಿಸಾಕ್ಷಿʼ; ಹಳೆಯ ಹಿಟ್‌ ಸೀರಿಯಲ್‌ನ ಶೀರ್ಷಿಕೆಯನ್ನು ಪುನಃ ಬಳಸಿದ್ದೇಕೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೂನ್ 8ರಿಂದ ಪ್ರತಿ ಸೋಮವಾರ ಸಂಜೆ 7 ಗಂಟೆಗೆ ಹೊಸ ಕಥಾಹಂದರ ಹೊಂದಿರುವ 'ಅಗ್ನಿಸಾಕ್ಷಿ' ಧಾರಾವಾಹಿ ಪ್ರಸಾರವಾಗಲಿದೆ. ಇದು ಹಳೆಯ ಸರಣಿಯ ರಿಮೇಕ್ ಅಲ್ಲ, ಬದಲಿಗೆ ಆಧುನಿಕ ತಲೆಮಾರಿನ ಅಹಂಕಾರ ಮತ್ತು ಸ್ವಾಭಿಮಾನದ ನಡುವಿನ ಕೌಟುಂಬಿಕ ಸಂಘರ್ಷವಾಗಿದೆ.

ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿ ಹೊಸ ದಾಖಲೆ ಬರೆದಿದ್ದ ‘ಅಗ್ನಿಸಾಕ್ಷಿ’ ಶೀರ್ಷಿಕೆ, ಈಗ ಮತ್ತೊಮ್ಮೆ ಇದೇ ಟೈಟಲ್‌ ಅಡಿಯಲ್ಲಿ ಹೊಸ ಧಾರಾವಾಹಿಯೊಂದು ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಇದೇ ಜೂನ್ 8ರಿಂದ ಪ್ರತಿ ಸೋಮವಾರ ಸಂಜೆ 7 ಗಂಟೆಗೆ ಹೊಚ್ಚ ಹೊಸ ಕಥಾಹಂದರ ಹಾಗೂ ಭವ್ಯ ದೃಶ್ಯವೈಭವದೊಂದಿಗೆ ಅಗ್ನಿಸಾಕ್ಷಿಯ ಹೊಸ ಸರಣಿಯು ವೀಕ್ಷಕರ ಮುಂದೆ ಬರುತ್ತಿದೆ.

ವಾಹಿನಿ ಸ್ಪಷ್ಟಪಡಿಸಿರುವಂತೆ, ಇದು ಹಳೆಯ ಸೂಪರ್ ಹಿಟ್ ಧಾರಾವಾಹಿಯ ಮುಂದುವರಿದ ಭಾಗವಾಗಲಿ ಅಥವಾ ರಿಮೇಕ್ ಆಗಲಿ ಅಲ್ಲ. ಬದಲಿಗೆ ಇಂದಿನ ಆಧುನಿಕ ತಲೆಮಾರಿನ ಯುವಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್ ಕೌಟುಂಬಿಕ ಸಂಘರ್ಷದ ಕಥೆಯಾಗಿದೆ. "ಇಬ್ಬರು ಕಣ್ಣ ಮುಂದೆ ಬಂದರೆ ಸಹಿಸೋಕಾಗಲ್ಲ, ಕಾಣದೇ ಹೋದರೆ ಬದುಕೋಕೇ ಆಗಲ್ಲ!" ಎಂಬ ವಿಶಿಷ್ಟ ಪ್ರೇಮಬಂಧದ ರೋಮಾಂಚಕ ಎಳೆಯನ್ನು ಈ ಸರಣಿ ಒಳಗೊಂಡಿದೆ.

ಅಷ್ಟಕ್ಕೂ ಹಳೇ ಶೀರ್ಷಿಕೆಯನ್ನು ಪುನಃ ಬಳಸಿದ್ದೇಕೆ? "ಹಿಂದಿನ ಅಗ್ನಿಸಾಕ್ಷಿ ಕಥೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಹೊಸ ಕಥೆಗೆ ಅಗ್ನಿಸಾಕ್ಷಿ ಎಂಬ ಶೀರ್ಷಿಕೆ ತುಂಬ ಆಪ್ತವಾಗಿ ಒಪ್ಪುವಂತಿದೆ. ಹಾಗಾಗಿ, ಅದನ್ನೇ ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ, ಅಂದು ಅಗ್ನಿಸಾಕ್ಷಿಗೆ ಕಥೆ ಬರೆದವರೇ ಈಗ ಈ ಹೊಸ ಅಗ್ನಿಸಾಕ್ಷಿಗೆ ನಿರ್ಮಾಪಕರಾಗಿದ್ದಾರೆ" ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕರು.

ಅಗ್ನಿ & ಸಾಕ್ಷಿ ಪಾತ್ರಗಳು ಹೇಗಿವೆ?

ಈ ಬಾರಿಯ ‘ಅಗ್ನಿಸಾಕ್ಷಿ’ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿತ್ವಗಳ ನಡುವಿನ ಸಂಘರ್ಷವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋ ಹಾಗೂ ಪೋಸ್ಟರ್‌ಗಳಲ್ಲಿ ಅದು ಅನಾವರಣಗೊಂಡಿದೆ. ಕಥಾನಾಯಕ ಅಗ್ನಿ ಎಲ್ಲವನ್ನೂ ಧ್ವಂಸ ಮಾಡೋ ಬಿರುಗಾಳಿಯಂತಿರುವನು. ತನ್ನ ಅಹಂಗೆ ಎದುರು ನಿಂತರೆ ಎಲ್ಲವನ್ನೂ ಸುಟ್ಟು ಹಾಕೋ ಧಗಧಗಿಸುವ ಬೆಂಕಿ. ಅಪಾರ ಸಂಪತ್ತು ಹೊಂದಿರುವ, ವಿಪರೀತ ಗರ್ವದ ಹಿನ್ನೆಲೆಯುಳ್ಳ ಈ ಹಠಮಾರಿ ಉದ್ಯಮಿಯ ಪಾತ್ರದಲ್ಲಿ ಗಾಯಕ ಹಾಗೂ ಬಿಗ್‌ಬಾಸ್ ಖ್ಯಾತಿಯ ನಟ ಶಮಂತ್ 'ಬ್ರೋ' ಗೌಡ ಕಾಣಿಸಿಕೊಂಡಿದ್ದಾರೆ.

ಕಥಾನಾಯಕಿ ಸಾಕ್ಷಿ ಎಲ್ಲವನ್ನೂ ತಂಪಾಗಿಸೋ ತಂಗಾಳಿಯಂತವಳು. ಅನ್ಯಾಯದ ವಿರುದ್ಧ ನಿಲ್ಲುವಾಗ ಕತ್ತಲ ಹಾದಿಗೆ ದಾರಿ ತೋರಿಸೋ ದಿವ್ಯ ಬೆಳಕು. ಎಷ್ಟೇ ಕಷ್ಟ ಬಂದರೂ ತನ್ನ ಆತ್ಮಗೌರವ ಹಾಗೂ ಆದರ್ಶಗಳನ್ನು ಬಿಟ್ಟುಕೊಡದ ಧೀಮಂತ ಯುವತಿಯ ಪಾತ್ರದಲ್ಲಿ ಪ್ರತಿಭಾವಂತ ನಟಿ ವರ್ಷಿಣಿ ಗೌಡ ನಟಿಸುತ್ತಿದ್ದಾರೆ.

ಹಸೆಮಣೆಯಲ್ಲಿ ವಿಭಿನ್ನ ಗುಣದ ಇವರಿಬ್ಬರ ಹಣೆಬರಹ ಹೇಗೆ ಒಂದಾಗಲಿದೆ, ಈ ಬೆಂಕಿ ಮತ್ತು ತಂಗಾಳಿಯ ನಡುವಿನ ಹೋರಾಟ ಎತ್ತ ಸಾಗಲಿದೆ ಎನ್ನುವುದೇ ಇಡೀ ಧಾರಾವಾಹಿಯ ಜೀವಾಳ. ಈ ಹಿಂದಿನ ಸೂಪರ್ ಹಿಟ್ ‘ಅಗ್ನಿಸಾಕ್ಷಿ’ ಧಾರಾವಾಹಿಗೆ ಲೇಖಕರಾಗಿದ್ದ ಹ್ಯಾರಿಸ್ ಅವರೇ ಈ ಹೊಚ್ಚ ಹೊಸ ಕಥೆಯನ್ನು ಬರೆಯುತ್ತಿರುವುದು ಸರಣಿಯ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅತ್ಯುನ್ನತ ಮೇಕಿಂಗ್ ಹಾಗೂ ಅತ್ಯಂತ ಶ್ರೀಮಂತ ಮೇಕಿಂಗ್‌ನಿಂದ ಕೂಡಿರಲಿರುವ ಈ ಸೀರಿಯಲ್‌ ಜೂನ್ 8ರ ಸೋಮವಾರದಿಂದ ಪ್ರತಿ ಸಂಜೆ 7 ಗಂಟೆಗೆ ‘ಕಲರ್ಸ್ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ ಓಟಿಟಿಯಲ್ಲಿ ಪ್ರಸಾರವಾಗಲಿದೆ.