‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಕನ್ನಡಿಗರ ಮನೆಮಾತಾಗಿ, ಬಳಿಕ ‘ಲಕ್ಷ್ಮೀ ಬಾರಮ್ಮ’,ʻಅಗ್ನಿಸಾಕ್ಷಿʼ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿರುವ ನಟ ಶಮಂತ್ ಬ್ರೋ ಗೌಡ (Shamanth Bro Gowda), ಇದೀಗ ಪೂರ್ಣಪ್ರಮಾಣದ ನಾಯಕನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಭಿನ್ನ ಕಥಾಹಂದರದ ‘ರಾಘು’ ಹಾಗೂ ‘ಶೆಫ್ ಚಿದಂಬರ’ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಎಂ. ಆನಂದ್ ರಾಜ್ (Anand Raj) ಅವರು ಶಮಂತ್ ಅವರ ಚೊಚ್ಚಲ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಈ ಚಿತ್ರಕ್ಕೆ ‘ಕದ್ರಿ’ ಎಂದು ಶೀರ್ಷಿಕೆ ಇಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಪ್ರಯೋಗವಾಗಿ ಮೂಡಿಬರುತ್ತಿರುವ ‘ಕದ್ರಿ’ ಚಿತ್ರವನ್ನು 'ಕನ್ನಡದ ಜಾನಪದ ಭಯಾನಕ' (Kannada’s Folklore Horror) ಜಾನರ್ನಲ್ಲಿ ನಿರ್ಮಿಸಲಾಗುತ್ತಿದೆ. "ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ" ಎಂಬ ಕುತೂಹಲಕಾರಿ ಅಡಿಬರಹದೊಂದಿಗೆ ಚಿತ್ರತಂಡ ಸಿನಿಮಾವನ್ನು ಘೋಷಿಸಿದ್ದು, ಇದು ಪ್ರೇಕ್ಷಕರಿಗೆ ಹೊಸ ಬಗೆಯ ಭಯಾನಕ ಹಾಗೂ ರೋಚಕ ಅನುಭವ ನೀಡುವ ಸುಳಿವು ನೀಡಿದೆ.
ಇದನ್ನೂ ಓದಿ: Bigg Boss Kannada 13: ಆಸಿಯಾಗೆ ತಿರುಗಿಸಿ ಹೊಡೆಯಲು ಮುಂದಾದ ಶೆಟ್ಟಿ ಡಾನ್
ಈ ಚಿತ್ರಕ್ಕೆ ಎಂ. ಆನಂದ್ ರಾಜ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲದೆ, ನಾಗರಾಜ್ ಸಿ. ಅವರೊಂದಿಗೆ ಕೈಜೋಡಿಸಿ ಆನಂದ್ ರಾಜ್ ಅವರೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಿರುತೆರೆಯಲ್ಲಿ ತಮ್ಮ ನಟನೆ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಶಮಂತ್ ಅವರಿಗೆ, ಈ ಜಾನಪದ ಹಾರರ್ ಕಥಾಹಂದರವು ಬೆಳ್ಳಿತೆರೆಯಲ್ಲಿ ಭದ್ರ ಬುನಾದಿ ಹಾಕಿಕೊಡುವ ನಿರೀಕ್ಷೆಯಿದೆ.
ತಾಂತ್ರಿಕವಾಗಿಯೂ ‘ಕದ್ರಿ’ ಚಿತ್ರಕ್ಕೆ ಅನುಭವಿ ತಂಡವೇ ಕೆಲಸ ಮಾಡುತ್ತಿದೆ. ಚಿತ್ರಕ್ಕೆ ಉದಯ ಲೀಲಾ ಅವರ ಛಾಯಾಗ್ರಹಣವಿದ್ದು, ವಿಜಯೇಂದ್ರ ಜೋಡಿದಾರ ಸಂಭಾಷಣೆ ಬರೆದಿದ್ದಾರೆ. ಸೂರಜ್ ಜೋಯಿಸ್ ಮತ್ತು ಜುಬೈರ್ ಮುಹಮ್ಮದ್ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದು, ಸೂರಜ್ ಜೋಯಿಸ್ ಹಿನ್ನೆಲೆ ಸಂಗೀತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: Samantha Ruth Prabhu: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ; ಪೂಜೆ ಸಲ್ಲಿಸಿದ ದಂಪತಿ
ಉಳಿದಂತೆ ನಾಗೇಂದ್ರ ಉಜ್ಜನಿ ಸಂಕಲನ, ಅನಿಲ್ ಕಬೀರ್ ಕಲಾ ನಿರ್ದೇಶನ, ರಾ ಸೀನಾ ಸಾಹಸ ನಿರ್ದೇಶನ ಹಾಗೂ ಅಭಿಷೇಕ್ ಮಠದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಶೀರ್ಷಿಕೆಯ ಮೂಲಕವೇ ಸದ್ದು ಮಾಡುತ್ತಿರುವ ‘ಕದ್ರಿ’ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಕುರಿತಾದ ಮತ್ತಷ್ಟು ಅಪ್ಡೇಟ್ಗಳನ್ನು ಹಂಚಿಕೊಳ್ಳಲಿದೆ.